ಅಕ್ಷಯ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ `ಅಕ್ಷಯ ವೈಭವ

0

ಬದುಕನ್ನು ರೂಪಿಸುವ ಶಿಕ್ಷಣ ಇಂದಿನ ಅಗತ್ಯತೆಯಾಗಿದೆ-ಒಡಿಯೂರು ಸ್ವಾಮೀಜಿ

ಪುತ್ತೂರು: ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ-ಧರ್ಮ ಬೇಧವಿರಬಾರದು. ಅಲ್ಲಿ ವಿಶಾಲವಾದ ಸಂಸ್ಕೃತಿ, ಸಂಸ್ಕಾರದ ಅನಾವರಣವಾಗಬೇಕು. ಸಮಾಜದಲ್ಲಿ ಉತ್ತಮ ಬದುಕನ್ನು ರೂಪಿಸುವ ಶಿಕ್ಷಣ ಇಂದಿನ ಅಗತ್ಯತೆಯಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಹೇಳಿದರು.
ನ.5 ರಂದು ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಲರವ `ಅಕ್ಷಯ ವೈಭವ-2022′ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ, ಕಂಪ್ಯೂಟರ್ ಲ್ಯಾಬ್‌ನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಪದವಿ ಹೊಂದುವುದು ಮುಖ್ಯವಲ್ಲ, ಪದವಿಯ ಜೊತೆಗೆ ಬದುಕನ್ನು ರೂಪಿಸುವ ವೃತ್ತಿಯನ್ನು ಹೊಂದುವುದೂ ಅಗತ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ನಾಲ್ಕು ಗೋಡೆಯ ಒಳಗೆ ಪ್ರಜ್ಞಾವಂತ ಪ್ರಜೆ ಸೃಷ್ಟಿಯಾಗುತ್ತಾನೆ ಆಮೇಲೆ ಭವ್ಯ ಭಾರತದ ನಿರ್ಮಾಣವಾಗುತ್ತದೆ. ಸಮಾಜದಲ್ಲಿ ಆದರ್ಶ ನಾಯಕತ್ವ ಅರಳುವುದೇ ಕಾಲೇಜು ಶಿಕ್ಷಣದಲ್ಲಿ. ಅಕ್ಷಯ ಕಾಲೇಜು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿ ಕಾಲೇಜು ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.

ಜಯಂತ್‌ರವರು ಮುಟ್ಟಿದೆಲ್ಲವೂ ಅಕ್ಷಯವಾಗುತ್ತಿದೆ-ಮಠಂದೂರು
 ಅಧ್ಯಕ್ಷತೆ ವಹಿಸಿದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಭಾರತ ದೇಶ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತನ್ನ ಐಡೆಂಟಿಟಿ ತೋರಿಸಲು ಶಕ್ತವಾಗಿದೆ. ಪ್ರಸಕ್ತ ಬದುಕು ಫ್ಯಾಶನ್ ಪ್ರಿಯ ಬದುಕು. ತಾನು ಹೀಗೆಯೇ ಕಾಣಬೇಕು ಎನ್ನುವ ಕನಸು ನಮ್ಮದಾಗಿದೆ. ಈ ನಿಟ್ಟಿನಲ್ಲಿ ಅಕ್ಷಯ ಕಾಲೇಜು ಮನುಷ್ಯನ ಆಶಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದಿನ ಐಶಾರಾಮಿ ಬದುಕಿನಲ್ಲಿ ವ್ಯಕ್ತಿಯ ವ್ಯಕ್ತಿತ್ವ ತೋರ್ಪಡಿಸುವಂತಹ ವಿದ್ಯೆಯ ಅಗತ್ಯವಿದೆ. ವಿದ್ಯಾರ್ಥಿಗಳು ವೈಟ್ ಕಾಲರ್ ಕೆಲಸಕ್ಕೆ ಸೀಮಿತವಾಗದೆ ಭವಿಷ್ಯದಲ್ಲಿ ದೇಶವನ್ನು ಯಶಸ್ವಿಯತ್ತ ಮುನ್ನೆಡೆಸುವ ಛಲಗಾರಿಕೆಯನ್ನು ಹೊಂದುವಂತಾಗಬೇಕು ಎಂದ ಅವರು ಜಯಂತ ನಡುಬೈಲುರವರು ಪುತ್ತೂರಿನ ಲಕ್ಷ್ಮೀ ಎನಿಸಿದ್ದಾರೆ, ಅವರು ಮುಟ್ಟಿದೆಲ್ಲವೂ ಅಕ್ಷಯ ಪಾತ್ರೆಯಾಗಿಬಿಟ್ಟಿದೆ ಎಂದರು. ಕಬಕದಲ್ಲಿ ಸುಮಾರು 23 ಎಕರೆಯಲ್ಲಿ ನಿರ್ಮಾಣಗೊಳ್ಳಲಿರುವ ಅಂತರ್ರಾಷ್ಟ್ರೀಯ ಕ್ರಿಕೆಟ್ ಮೈದಾನವು ಮುಂದೊಂದು ದಿನ ಪುತ್ತೂರು ಜಿಲ್ಲಾ ಕೇಂದ್ರವಾಗುವಲ್ಲಿ ಪೂರಕವಾಗಲಿದೆ. ಜೊತೆಗೆ ಸರಕಾರವು ಮಹಾನುಭಾವರ ಹೆಸರಿನಲ್ಲಿ ಹಾಸ್ಟೆಲ್‌ಗಳನ್ನು ನಿರ್ಮಿಸುತ್ತಿದ್ದು ಪುತ್ತೂರಿನಲ್ಲೂ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಮಠಂದೂರು ಹೇಳಿದರು.

ಶಿಕ್ಷಣ ವ್ಯಾಪಾರೀಕರಣವಲ್ಲ ಅದು ಸೇವೆ-ವಂ|ಸ್ಟ್ಯಾನಿ ಪಿಂಟೋ:
ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಗ್ರಂಥಾಲಯವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ನಮ್ಮ ನೆರೆಕರೆಯ ಕಾಲೇಜು, ಪುತ್ತೂರಿನ ಕಾಲೇಜು ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ. ಪುತ್ತೂರು ದೊಡ್ಡ ಪಟ್ಟಣವಾಗಿ ಬೆಳೆಯುವ ನಿಟ್ಟಿನಲ್ಲಿ ಇದು ಪೂರಕವಾಗಿ ಪರಿಣಮಿಸುತ್ತದೆ ಮಾತ್ರವಲ್ಲ ಮುತ್ತಿನನಗರಿ ಪುತ್ತೂರಿಗೆ ಕೀರ್ತಿ ಕಿರೀಟವಾಗಿ ಮಾರ್ಪಡಿಸುವುದರಲ್ಲಿ ಸಂದೇಹವಿಲ್ಲ ಎಂದ ಅವರು ಮೊದಲು ಗ್ಲೋರಿಯಾ ಕಾಲೇಜು ಹೆಸರಿನಲ್ಲಿ ಆನಂದ ಆಚಾರ್‍ಯರವರು ಬೆವರಿನ ಹನಿಯನ್ನು ಹರಿಸಿದ್ದರು ಇದೀಗ ಜಯಂತ್ ನಡುಬೈಲುರವರು ಇದನ್ನ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಶಿಕ್ಷಣ ಎಂಬುದು ವ್ಯಾಪಾರೀಕರಣವಲ್ಲ ಅದು ಸೇವೆಯಾಗಿದೆ, ಸುಸಂಸ್ಕೃತ ಶಿಕ್ಷಣ ನೀಡುವುದೇ ಶಿಕ್ಷಣದ ಉದ್ಧೇಶವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಹಾಜಬ್ಬರವರಂತೆ ಜಯಂತ್ ನಡುಬೈಲುರವರು ದೇಶದಲ್ಲಿ ಪ್ರಜ್ವಲಿಸಲಿ-ಕಣಿಯೂರು ಸ್ವಾಮೀಜಿ:
ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿರವರು ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ಅಕ್ಷಯ ಕಾಲೇಜಿನಲ್ಲಿ ಕಲಿತಂತಹ ಶೇ. 100 ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಮಾತ್ರವಲ್ಲದೆ ಈ ಸಂಸ್ಥೆಯ ಪ್ರತಿಯೋರ್ವ ವಿದ್ಯಾರ್ಥಿಗಳು ಅತಿಥಿಗಳಿಗೆ ಎರಡೂ ಕೈಯಿಂದ `ನಮಸ್ತೆ’ ಎಂಬುದಾಗಿ ಸ್ವಾಗತಿಸುವ ಸಂಸ್ಕಾರವನ್ನು ಬೆಳೆಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಪ್ರೌಢಿಮೆಯನ್ನು ಬೆಳೆಸಿಕೊಳ್ಳುವತ್ತ ಈ ಸಂಸ್ಥೆ ಮಹತ್ತರ ಹೆಜ್ಜೆಯನ್ನಿಟ್ಟಿದೆ. ಜೀವನದ ಪ್ರತಿಯೊಂದು ಕಾಲಘಟ್ಟದಲ್ಲಿ ನಾವು ನಮ್ಮ ಪ್ರತಿಭೆಯನ್ನು ಅರಳಿಸುವತ್ತ ಕಾರ್ಯೋನ್ಮುಖರಾಗಬೇಕಿದೆ ಎಂದ ಅವರು ಶಿಕ್ಷಣದಲ್ಲಿ ವ್ಯಾಪಾರೀಕರಣವಾದರೆ ಶಿಸ್ತು ಮತ್ತು ನಿಯಮಗಳು ಗಾಳಿಗೆ ತೂರಿದಂತೆ. ಕಿತ್ತಳೆ ಹಣ್ಣನ್ನು ಮಾರುವ ಮೂಲಕ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತವಾಗಿರುವ ಹರೇಕಳ ಹಾಜಬ್ಬರವರಂತೆ ಜಯಂತ್ ನಡುಬೈಲುರವರು ಕೂಡ ದೇಶದಲ್ಲಿ ಪ್ರಜ್ವಲಿಸುವಂತಾಗಲಿ ಎಂದು ಅವರು ಹೇಳಿದರು.

ವಿದ್ಯಾಸಂಸ್ಥೆಯು ಮಾದರಿ ಸಂಸ್ಥೆಯಾಗಿ ಮೂಡಿ ಬರಲಿ-ಚಿತ್ತರಂಜನ್:
ಮಂಗಳೂರು ಕಂಕನಾಡಿ ಗರಡಿ ಮುಖ್ಯಸ್ಥರಾಗಿರುವ ಚಿತ್ತರಂಜನ್‌ರವರು ಮಾತನಾಡಿ, ನಮ್ಮ ಜಿಲ್ಲೆಯು ದೈವ-ದೇವರ ನೆಲೆವೀಡು. ಈ ದೈವ-ದೇವರ ದೇವಸ್ಥಾನಗಳಲ್ಲಿ ಜಯಂತ್ ನಡುಬೈಲುರವರು ಸಾಕಷ್ಟು ಜೀರ್ಣೋದ್ಧಾರದ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಇದೇ ದೈವ-ದೇವರುಗಳ ಆಶೀರ್ವಾದದಿಂದ ಜಯಂತ್‌ರವರಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವಿದ್ಯಾಸಂಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗಿದೆ. ಬಡವರ್ಗದ ಜನರ ಕಷ್ಟ-ಕಾರ್ಪಣ್ಯಗಳಿಗೆ ಸದಾ ನೆರವಾಗುತ್ತಿರುವ ಜಯಂತ್‌ರವರ ಈ ಸಂಸ್ಥೆಯು ಮಾದರಿ ಸಂಸ್ಥೆಯಾಗಿ ಮೂಡಿ ಬರಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.

ವಿದ್ಯಾರ್ಥಿಗಳು ತಂದೆ-ತಾಯಿ, ದೇಶವನ್ನು ಪ್ರೀತಿಸುವ ಮಕ್ಕಳಾಗಿ ಬೆಳೆಯಿರಿ-ಅಜೀಜ್ ಬುಶ್ರಾ:
ಬುಶ್ರಾ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷ ಅಜೀಜ್‌ರವರು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ಉತ್ತಮ ಸ್ಥಾನ ಸಂಪಾದಿಸಬೇಕಾದರೆ ವಿದ್ಯೆ ಎಂಬುದು ಪ್ರಾಮುಖ್ಯತೆಯಲ್ಲೊಂದಾಗಿದೆ. ಶಿಕ್ಷಣಕ್ಕೆ ಹೆತ್ತವರು ಪರಿಪೂರ್ಣ ಪ್ರೋತ್ಸಾಹ ನೀಡಬೇಕು ಮತ್ತು ವಿದ್ಯಾರ್ಥಿಗಳು ತಂದೆ-ತಾಯಿ, ದೇಶವನ್ನು ಪ್ರೀತಿಸುವ ಮಕ್ಕಳಾಗಿ ಬೆಳೆಯಬೇಕು ಎಂದರು.

ಜಯಂತ್‌ರವರಿಂದ ಬಿಲ್ಲವ ಸಮುದಾಯದ ಬಲವರ್ಧನೆ-ರಾಜಶೇಖರ್ ಕೋಟ್ಯಾನ್:
ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮುಲ್ಕಿ ಇದರ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಮಾತನಾಡಿ, ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎನ್ನುವ ನಾರಾಯಣ ಗುರುಗಳ ಧ್ಯೇಯವಾಕ್ಯದಂತೆ ಜಯಂತ್ ನಡುಬೈಲುರವರು ಹೆಜ್ಜೆಯನ್ನಿಟ್ಟಿದ್ದಾರೆ. ಅಕ್ಷಯ ಕಾಲೇಜು ಸ್ಥಾಪನೆ ಮಾಡುವ ಮೂಲಕ ವಿದ್ಯೆಗೆ, ಬಿಲ್ಲವ ಸಮುದಾಯದ ಬಲವರ್ಧನೆಗೆ ಸಹಕಾರ ನೀಡುವ ಮೂಲಕ ಸಂಘಟನೆಗೆ ಬಹಳಷ್ಟು ಮಹತ್ವವನ್ನು ನೀಡಿರುತ್ತಾರೆ. ವಿದ್ಯೆ ಮಾರಲು ಸಾಧ್ಯವಿಲ್ಲ, ವಿದ್ಯೆ ಖರ್ಚು ಮಾಡಿಸಲು ಸಾಧ್ಯವಿಲ್ಲ, ವಿದ್ಯೆ ಕಲಿತು ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಿದೆ ಎಂದರು.

ಸಾಧನೆಗೈಯುವ ಮೂಲಕ ಜಯಂತ್‌ರವರ ಮುಕುಟಕ್ಕೆ ಕಿರೀಟ ಪೋಣಿಸುವವರಾಗಿ-ಪದ್ಮರಾಜ್:
ಮಂಗಳೂರು ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್ ಮಾತನಾಡಿ, ಜಯಂತ್‌ರವರು ತಮ್ಮ ಜೀವನದಲ್ಲಿ ಕಲ್ಲು-ಮುಳ್ಳಿನ ಹಾದಿಯನ್ನು ತುಳಿದು, ನಾರಾಯಣಗುರುಗಳ ಆದರ್ಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆಯನ್ನು ಮಾಡುವ ಮೂಲಕ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ನಮ್ಮ ಕಾಲದಲ್ಲಿ ಇಂತಹ ಸುಸಜ್ಜಿತ ವಿದ್ಯಾಭ್ಯಾಸವಿರಲಿಲ್ಲ. ಆದರೆ ಇಂದಿನ ವಿದ್ಯಾರ್ಥಿಗಳಿಗೆ ಎಲ್ಲವೂ ಸಿಗುತ್ತಿರುವುದು ಭಾಗ್ಯವೆನಿಸಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ಸಾಧನೆ ಮಾಡುವ ಮೂಲಕ ಈ ಸಂಸ್ಥೆಗೆ ಹೆಸರು ತನ್ನಿ ಹಾಗೂ ಜಯಂತ್‌ರವರ ಮುಕುಟಕ್ಕೆ ಕಿರೀಟದ ಗರಿಯನ್ನು ಪೋಣಿಸುವವರಾಗಿ ಎಂದ ಅವರು ಬಿಲ್ಲವ ಸಮಾಜದಲ್ಲಿ ಶಿಕ್ಷಣ ಸಂಸ್ಥೆಗಳಿರುವುದು ಅಪರೂಪ. ಆದರೆ ಜಯಂತ್‌ರವರು ಶಿಕ್ಷಣ ಸಂಸ್ಥೆಯನ್ನು ಮುನ್ನೆಡೆಸುತ್ತಿರುವುದು ಬಿಲ್ಲವ ಸಮುದಾಯಕ್ಕೆ ಹೆಗ್ಗಳಿಕೆಯೆನಿಸಿದೆ ಎಂದು ಅವರು ಹೇಳಿದರು.

ಗೌರವಾರ್ಪಣೆ: ಕಾಲೇಜಿನ ಕಟ್ಟಡದ ನಿರ್ಮಾಣದಲ್ಲಿ ಸಹಕರಿಸಿದ ಕಾರ್ಪೆಂಟರ್ ನವೀನ್ ಕುಮಾರ್, ಮೇಸ್ತ್ರೀ ಗಗನ್ ಕನ್‌ಸ್ಟ್ರಕ್ಷನ್‌ನ ಚಂದ್ರಶೇಖರ, ಎಲೆಕ್ಟ್ರೀಶಿಯನ್ ಸುರೇಶ್ ಕುಮಾರ್, ಪೈಂಟರ್ ರಮೇಶ್, ಪ್ಲಂಬರ್ ಸತೀಶ್, ಟೈಲ್ಸ್‌ನ ಉದಯ್, ವೆಲ್ಡಿಂಗ್‌ನ ಸೀತಾರಾಮ ಇವರುಗಳನ್ನು ಗುರುತಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.
ಪೂರ್ಣ ಕುಂಭ ಸ್ವಾಗತ:
ಸಮಾರಂಭದ ಆರಂಭದಲ್ಲಿ ಆಗಮಿಸಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕಣಿಯೂರುಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಕಾಲೇಜಿನ ವಿದ್ಯಾರ್ಥಿನಿಯರು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತ ಮಾಡಲಾಯಿತು. ಸಮಾರಂಭದಲ್ಲಿ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಹಾಗೂ ಕಲಾವತಿ ಜಯಂತ್ ದಂಪತಿ ಮತ್ತು ಪ್ರಾಂಶುಪಾಲ ಸಂಪತ್ ಪಕ್ಕಳ ಹಾಗೂ ಪ್ರಿಯಾ ಪಕ್ಕಳ ದಂಪತಿ ಸ್ವಾಮೀಜಿಗಳಿಗೆ ಫಲ-ಪುಷ್ಪದೊಂದಿಗೆ ಹಾರಾರ್ಪಣೆ ಸಲ್ಲಿಸಿ ಗೌರವಿಸಿದರು.

ವೈದಿಕ/ಸಾಂಸ್ಕೃತಿಕ ಕಾರ್ಯಕ್ರಮಗಳು: ಅಕ್ಷಯ ವೈಭವದ ಪ್ರಯುಕ್ತ ಬೆಳಿಗ್ಗೆ ಗಣಹೋಮ, ಶಾರದಾಪೂಜೆ, ಭಜನಾ ಸಂಕೀರ್ತನೆ ನಡೆದಿದ್ದು, ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ ಸಾಂಸ್ಕೃತಿಕ ವೈಭವ, ಸಂಜೆ ದೀಪಾವಳಿ ವೈಭವ ವಿಜ್ರಂಭಣೆಯಿಂದ ನಡೆಯಿತು. ಬೆಳಿಗ್ಗೆ ಆಗಮಿಸಿದ ಗಣ್ಯರಿಗೆ ಹಾಗೂ ಇತರರಿಗೆ ಉಪಹಾರ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜು ಪ್ರಾಂಶುಪಾಲ ಸಂಪತ್ ಪಕ್ಕಳರವರು ಕಾಲೇಜು ಆರಂಭವಾದಾಗಿನಿಂದ ಈಗಿನವರೆಗೆ ನಡೆದು ಬಂದ ಹಾದಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಅಧ್ಯಕ್ಷ ಜಯಂತ್ ನಡುಬೈಲು ಸ್ವಾಗತಿಸಿ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವಂದಿಸಿದರು. ಉಪನ್ಯಾಸಕರಾದ ಸತೀಶ್, ಕಿಶೋರ್ ರೈ, ನಿವೇದಿತಾ, ರಕ್ಷಣ್, ಲಿಖಿತಾ, ವೀಣಾ, ಪ್ರಭಾವತಿ, ರಶ್ಮಿ, ಅಖಿಲಾ, ಮೇಘಶ್ರೀ, ಕವಿತಾ, ಚೈತ್ರಾ, ನಿವೇದಿತಾ, ಜಯಶ್ರೀರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಉಪನ್ಯಾಸಕಿಯರಾದ ಭವ್ಯಶ್ರೀ ಕೋಟ್ಯಾನ್ ಹಾಗೂ ಆಶಿಕಾ ಫರ್ಝಾನಾ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜು ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಆಡಳಿತ ಮಂಡಳಿ ಸದಸ್ಯರಾದ ನಿವೃತ್ತ ಸೂಪರಿಂಟೆಂಡೆಂತ್ ಆಫ್ ಪೊಲೀಸ್ ಪಿತಾಂಬರ ಹೆರಾಜೆ, ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ|ಸೂರ್ಯನಾರಾಯಣ ಬಿ.ವಿ, ಪ್ರಗತಿಪರ ಕೃಷಿಕ ವೈ ಸುನೀಲ್ ಕುಮಾರ್ ಶೆಟ್ಟಿ, ಪಟ್ಟೆ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ, ನಿವೃತ್ತ ಅರಣ್ಯ ಅಧಿಕಾರಿ ಕೆ.ಕೃಷ್ಣಪ್ಪ, ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ|ಝೇವಿಯರ್ ಡಿ’ಸೋಜ, ನ್ಯಾಯವಾದಿ ಚಿದಾನಂದ ಬೈಲಾಡಿ, ಧನ್ವಂತರಿ ಕ್ಲಿನಿಕ್‌ನ ಡಾ.ಶ್ಯಾಮ್‌ಪ್ರಸಾದ್ ಎಂ, ಭಾರತ್ ಆಗ್ರೋ ಇಂಡಸ್ಟ್ರೀಸ್‌ನ ಪ್ಲ್ಯಾಂಟ್ ಮ್ಯಾನೇಜರ್ ನವೀನ್ ಕೆ(ಬಿಇ), ಮಾಜಿ ಯೋಧ ಎನ್.ಕೆ ಸುಂದರ ಗೌಡ, ಹಿತೈಷಿಗಳು, ಪೋಷಕ ವೃಂದ, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸನ್ಮಾನ

ಪುತ್ತೂರಿನಲ್ಲಿ 2014ರಲ್ಲಿ ಸ್ಥಾಪನೆಯಾದ ಗ್ಲೋರಿಯಾ ಕಾಲೇಜು ಇದರ ಸ್ಥಾಪಕಾಧ್ಯಕ್ಷ ಎಸ್.ಆನಂದ ಆಚಾರ್ಯ ದಂಪತಿ, ರಾಷ್ಟ್ರೀಯ ವಾಲಿಬಾಲ್ ತರಬೇತುದಾರ ಹಾಗೂ ಕಾಲೇಜು ಆಡಳಿತ ಮಂಡಳಿ ಸದಸ್ಯ ಪಿ.ವಿ ನಾರಾಯಣನ್, ಅಂತರ್ರಾಷ್ಟ್ರೀಯ ಯೋಗ ಚಾಂಪಿಯನ್ ಹಾಗೂ ಕಾಲೇಜಿನ ತೃತೀಯ ಬಿಎಸ್ಸಿ ಫ್ಯಾಶನ್ ಡಿಸೈನ್ ವಿದ್ಯಾರ್ಥಿನಿ ಕು|ಪ್ರಣಮ್ಯ ಸಿ.ಎರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಮುಂಬರುವ
ಕೋರ್ಸ್‌ಗಳು…
ಬಿಸಿಎ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್)
ಬಿಬಿಎ(ಲಾಗಿಸ್ಟಿಕ್ಸ್ ಆಂಡ್ ಸಪ್ಲ್ಯಾ
ಚೈನ್ ಮ್ಯಾನೇಜ್‌ಮೆಂಟ್)
ಎಫ್‌ಎನ್‌ಡಿ(ಫುಡ್ ನ್ಯುಟ್ರಿಶನ್
ಆಂಡ್ ಡಯಾಟೆಟಿಕ್ಸ್)
ಬಿಎ(ಡಿಟೆಕ್ಟಿವ್ ಸೈನ್ಸ್)

ಗ್ರಾಮೀಣ ಭಾಗದಲ್ಲಿ ವೃತ್ತಿಪರ ಶಿಕ್ಷಣ ಹೆಗ್ಗಳಿಕೆ…
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡರವರು ಮಾತನಾಡಿ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಸುಲಭ ಆದರೆ ಅವನ್ನು ಮುಂದುವರೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಅದು ಕಲ್ಲು-ಮುಳ್ಳಿನ ಹಾದಿಯಾಗಿದೆ. ಸಂಸ್ಥೆಯ ಸಿಬ್ಬಂದಿಗಳೊಂದಿಗೆ ವಿಶ್ವಾಸಪೂರ್ಣತೆಯೊಂದಿಗೆ ಕಾರ್ಯ ಮಾಡುವುದು ಜೊತೆಗೆ ಸಾರ್ವಜನಿಕರೊಂದಿಗೆ ಆತ್ಮೀಯತೆಯೊಂದಿಗೆ ವರ್ತಿಸುವುದು ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೆಟ್ರೊ ಪಾಲಿಟಿಕ್ಸ್ ಸಿಟಿಯಲ್ಲಿ ಸಿಗುವಂತಹ ವೃತ್ತಿಪರ ಶಿಕ್ಷಣವನ್ನು ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಟ್ಟಿರುವುದು ಅಕ್ಷಯ ಕಾಲೇಜಿನ ಹೆಗ್ಗಳಿಕೆಯಾಗಿದೆ. ದಾರ್ಶನಿಕ ಗುರುಗಳಾದ ನಾರಾಯಣಗುರುಗಳ ಆದರ್ಶ ನುಡಿಗಳ ಮಾರ್ಗದಲ್ಲಿ ನಡೆದರೆ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ, ಸರ್ವೇ ಜನ ಸುಖಿನೋ ಭವಂತು, ಭಾವೈಕ್ಯತೆಯ ನಾಡು ಆಗುತ್ತದೆ ಮಾತ್ರವಲ್ಲದೆ ಇದನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಯಪಡಿಸಬೇಕಾಗುತ್ತದೆ. ಶಿಕ್ಷಣ ಸಂಸ್ಥೆಯು ನಮ್ಮ ನಿಮ್ಮೆಲ್ಲರ ಸಂಸ್ಥೆ ಎಂಬಂತೆ ಕಟ್ಟಿ ಬೆಳೆಸಬೇಕಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಭವಿಷ್ಯದಲ್ಲಿ ಉದ್ಯೋಗ-ಉದ್ಯಮಕ್ಕೆ ಪೂರಕವಾದ ಶಿಕ್ಷಣ ನೀಡುತ್ತಿರುವ ಪುತ್ತೂರಿನ ಅಕ್ಷಯ ಕಾಲೇಜು ವೃತ್ತಿಪರ ಕೋರ್ಸ್‌ಗಳನ್ನು ಅಳವಡಿಸುವ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಈ ಶಿಕ್ಷಣ ಸಂಸ್ಥೆ ಕಟಿಬದ್ಧವಾಗಿದೆ. ನಗರಭಾಗದಿಂದ ಅನತಿ ದೂರದಲ್ಲಿ ಕಲಿಕೆಗೆ ಬೇಕಾದ ಸುಂದರ ವಾತಾವರಣವಿರುವ ಪುತ್ತೂರಿನ ಸಂಪ್ಯದಲ್ಲಿರುವ ಅಕ್ಷಯ ಕಾಲೇಜು ಎಲ್ಲಾ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತ ವಿದ್ಯಾಸಂಸ್ಥೆಯಾಗಿ ಬೆಳೆಯುತ್ತಿದೆ. ಹಿಂದಿನ ವರ್ಷಗಳಲ್ಲಿ ಪಿಯುಸಿಯಾದ ಬಳಿಕ ಬಿಎ, ಬಿಎಸ್ಸಿ, ಬಿಬಿಎ, ಬಿಸಿಎ, ಇಂಜಿನಿಯರಿಂಗ್, ಮೆಡಿಕಲ್ ಮೊದಲಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಆದರೆ ಈಗ ಕಾಲ ಬದಲಾಗಿದ್ದು, ವೃತ್ತಿಪರ ಶಿಕ್ಷಣಗಳನ್ನು ಆಯ್ಕೆ ಮಾಡಿಕೊಂಡವನೇ ಭವಿಷ್ಯದಲ್ಲಿ ಉತ್ತಮ ಜೀವನ ಸಾಗಿಸುತ್ತಾನೆ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರ ಎಲ್ಲಾ ಗೊಂದಲಗಳಿಗೆ ಅಕ್ಷಯ ಕಾಲೇಜು ಉತ್ತರವನ್ನು ನೀಡುವ ಕಾರ್ಯ ಮಾಡುತ್ತಿದೆ.
-ಜಯಂತ್ ನಡುಬೈಲು, ಅಧ್ಯಕ್ಷರು, ಅಕ್ಷಯ ಕಾಲೇಜು, ಪುತ್ತೂರು

LEAVE A REPLY

Please enter your comment!
Please enter your name here