ಪುತ್ತೂರು; ವಿಪ್ರ ಸಾಧಕರನ್ನು ಗುರುತಿಸುವ, ಅಭಿನಂದಿಸುವ ಮತ್ತು ಆನಂದಿಸುವ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಈ ವಿನೂತನ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ನಡೆಸಬೇಕಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ನ.6ರಂದು ಮಂಗಳೂರಿನಲ್ಲಿ ಆಯೋಜಿಸಿದ್ದ ‘ನಮ್ಮವರು-ನಮ್ಮ ಹೆಮ್ಮೆ’ ಸಮಾಜದ ವಿಪ್ರ ಬಂಧುಗಳ ವಿಶೇಷವಾದ ಸಾಧನೆ, ಪ್ರತಿಭೆ ಗುರುತಿಸುವ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಾದ್ಯಂತ ಈ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಆಶಯ ವ್ಯಕ್ತಪಡಿಸಿದ ಅವರು ಇದು ರಾಜ್ಯಕ್ಕೆ ಮಾದರಿಯಾದ ಕಾರ್ಯಕ್ರಮ ಎಂದರು. ಹೊಸತನ್ನು ಅಚ್ಚುಕಟ್ಟಾಗಿ ವಿಶಿಷ್ಟವಾಗಿ ವಿನೂತನವಾಗಿ ಪ್ರಸ್ತುತಪಡಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಲ್ಲರಿಗೂ ಮಾದರಿಯಾಗಿದೆ. ಈ ಹಿಂದೆ ಬ್ರಹ್ಮಸಭೆ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ ದ ಕ ಜಿಲ್ಲಾ ಘಟಕ ಇದೀಗ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಮಾತ್ರವಲ್ಲ ರಾಜ್ಯದಲ್ಲಿ ಪ್ರಪ್ರಥಮ ಜಿಲ್ಲಾ ಕಚೇರಿಯನ್ನು ಹೊಂದಿರುವ ಜಿಲ್ಲೆ ದಕ್ಷಿಣ ಕನ್ನಡ ಎಂದ ಅವರು ಇಂತಹ ವೈಶಿಷ್ಟ ಪೂರ್ಣವಾದ ವಿಚಾರಗಳಿಂದಲೇ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಅನಿಸಿದೆ, ಇಂತಹ ಗುರುತಿಸುವಿಕೆಯಿಂದ ಸಾಧಕರಿಗೆ ಸಾರ್ಥಕತೆ ಬರುತ್ತದೆ ಮತ್ತು ಇತರರಿಗೆ ತಾವು ಸಾಧನೆ ಮಾಡಬೇಕೆಂಬ ಪ್ರೇರಣೆ ನೀಡುತ್ತದೆ. ಸಾಧಕರು ಮತ್ತಷ್ಟು ಸಮಾಜಮುಖಿಗಳಾಗುವಂತೆ ಮಾಡಲು ಈ ರೀತಿಯ ಕಾರ್ಯಕ್ರಮಗಳು ವೇದಿಕೆಯನ್ನು ನಿರ್ಮಾಣ ಮಾಡುತ್ತದೆ ಎಂದು ಹೇಳಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾದ್ಯಂತ ಇದೇ ಪರಿಕಲ್ಪನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯವರು ಅನುಮತಿಯ ಮೇರೆಗೆ ಅಳವಡಿಸಿಕೊಂಡು ಪ್ರಾಯೋಜಿಸಲು ಇಚ್ಚಿಸುತ್ತದೆ ಎಂದು ಅವರು ಹೇಳಿದರು. ವಿದುಷಿ ಗೀತಾ ಸರಳಾಯ ಮತ್ತು ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ ಭಾಜನರಾದ ವಿದುಷಿ ಪ್ರತಿಮಾ ಶ್ರೀಧರ್‌ರವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯದರ್ಶಿ ಬಿ.ಎಸ್. ರಾಘವೇಂದ್ರ ಭಟ್, ಸಹ ಕಾರ್ಯದರ್ಶಿ ಕಾರ್ತಿಕ್ ಬಾಪಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ಉಮೇಶ್ ಶಾಸ್ತ್ರಿ ಮತ್ತು ಪೊಳಲಿ ಗಿರಿ ಪ್ರಕಾಶ್ ತಂತ್ರಿ ಮತ್ತು ಯುವ ವಿಭಾಗದ ರಾಜ್ಯ ಸಹ ಸಂಚಾಲಕ ಸುಬ್ರಮಣ್ಯ ಪ್ರಸಾದ್ ಕೊರ್ಯಾರು ಭಾಗವಹಿಸಿದ್ದರು.
ಪದ್ಮ ಬಿಡೆ ವಂದಿಸಿದರು. ರಾಜ್ಯ ಮಹಿಳಾ ವಿಭಾಗದ ಸಹ ಸಂಚಾಲಾಕಿ ಚೇತನಾ ದತ್ತಾತ್ರೇಯ ಕಾರ್ಯಕ್ರಮ ನಿರೂಪಿಸಿದರು. ಶಶಿಪ್ರಭಾ ಐತಾಳ ಪ್ರಾರ್ಥಿಸಿದರು. ಪೂರ್ಣಿಮಾ ಪೇಜಾವರ ಮುಂತಾದವರು ಸಹಕರಿಸಿದರು.
ಪ್ರದೀಪ್ ಕುಮಾರ್ ಕಲ್ಕೂರ, ತಾರಾನಾಥ ಹೊಳ್ಳ, ಪುರುಷೋತ್ತಮ್ ಭಟ್, ನರಸಿಂಹ ಹೆಗಡೆ, ಕೃಷ್ಣ ಭಟ್ ಮೀನಗದ್ದೆ, ಕೃಷ್ಣ ಭಟ್ ಕದ್ರಿ, ಶ್ರೀಧರ ಹೊಳ್ಳ, ಚಂದ್ರಶೇಖರ ಮಯ್ಯ, ಆರ್. ಡಿ. ಶಾಸ್ತ್ರಿ, ಬಾಲಕೃಷ್ಣ ಐತಾಳ, ರವೀಶ್ ನಾರ್ಷ, ಎಲ್ಲೂರು ರಾಮಚಂದ್ರ ಭಟ್, ಪುರುಷೋತ್ತಮ ಭಟ್, ಅನಂತ ಪದ್ಮನಾಭ ಭಟ್, ರಶ್ಮಿ ಸರಳಾಯ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ವಿಪ್ರ ಬಾಂಧವರು ಆಗಮಿಸಿದ್ದರು.
ಜೀವ ನದಿಯಂತೆ ಮುಂದುವರಿಯುತ್ತದೆ-ಮಹೇಶ್ ಕಜೆ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಖ್ಯಾತ ವಕೀಲ ಮಹೇಶ್ ಕಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಇದು ನಮ್ಮವರನ್ನು ನಮ್ಮ ಮಧ್ಯದಲ್ಲಿ ಸರಳವಾಗಿ ಆಪ್ತವಾಗಿ ಅಭಿನಂದಿಸುವ ಕಾರ್ಯಕ್ರಮ. ನಾವು ಮಾಡಲಾರದ ಸಾಧನೆಯನ್ನು ನಮ್ಮವರು ಮಾಡಿದ್ದಾರೆ ಎಂಬಂತೆ ಆನಂದಿಸುವ ಕ್ಷಣ. ಈ ಪರಿಕಲ್ಪನೆಯ ಕಾರ್ಯಕ್ರಮ ನಿಂತ ನೀರಾಗುವುದಿಲ್ಲ. ನಿರಂತರ ಹರಿಯುವ ಜೀವ ನದಿಯಂತೆ ಮುಂದುವರಿಯುತ್ತದೆ. ಇನ್ನು ಮುಂದಕ್ಕೂ ವಿಪ್ರ ಸಮಾಜದ ಇನ್ನೂ ಹಲವು ಸಾಧಕರನ್ನು ಗುರುತಿಸುವ ಮತ್ತು ಅಭಿನಂದಿಸುವ ಹಾಗೂ ಆನಂದಿಸುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ‘ನಮ್ಮವರು ನಮ್ಮ ಹೆಮ್ಮೆ’ ಎಂಬ ಶಿರೋನಾಮೆಯಲ್ಲಿ ಮುಂದುವರಿಯುತ್ತದೆ ಎಂದು ಹೇಳಿದರು.