ಪುತ್ತೂರು:ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಹಾಗೂ ತಾಲೂಕು ಪಂಚಾಯತ್ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಬನ್ನೂರು ಗ್ರಾ.ಪಂ ಮತ್ತು ಜನ ಶಿಕ್ಷಣ ಟ್ರಸ್ಟ್‌ನ ಸಹಯೋಗದಲ್ಲಿ `ಕಾನೂನು ಅರಿವಿನ ಮೂಲಕ ನಾಗರಿಕರಣ ಸಬಲೀಕರಣ ಅಭಿಯಾನದ ಅಂಗವಾಗಿ ಕಾನೂನು ಮಾಹಿತಿ ಕಾರ್ಯಾಗಾರವು ನ.10 ಬನ್ನೂರು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಶಿವಣ್ಣ ಹೆಚ್.ಆರ್ ಮಾತನಾಡಿ, ಮಹಿಳೆಯರ ಮೇಲೆ ದಾಳಿಯಾದಾಗ ಆತ್ಮ ರಕ್ಷಣೆಗೆ ಕ್ರಮ ಕೈಗೆತ್ತಿಕೊಂಡರೆ ಅದು ಅಪರಾಧವಾಗುವುದಿಲ್ಲ. ಆತ್ಮ ರಕ್ಷಣೆ ಮಹಿಳೆಯ ಅಧಿಕಾರ, ಹಕ್ಕು ಆಗಿರುತ್ತದೆ. ಮಹಿಳಾ ದೌರ್ಜನ್ಯ ಕಾಯಿದೆಯು ಮಹಿಳೆಯರ ರಕ್ಷಣೆಗೆ ಇರುವಂತದ್ದು. ಅದು ಕೆಲವು ಸಂದರ್ಭಗಳಲ್ಲಿ ದರ್ಬಳಕೆಯಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು. ನಿಜವಾಗಿ ದೌರ್ಜನ್ಯ ನಡೆದರೆ ನೇರವಾಗಿ ದೂರು ನೀಡಬಹುದು. ಕಾನೂನು ದುರ್ಬಲಕೆ ಮಾಡಬಾರದು. ಮಕ್ಕಳಲ್ಲಿ ವಾಹನ ಹಾಗೂ ಮೊಬೈಲ್ ನೀಡುವುದರಿಂದ ಆಗುವ ದುರಂತಗಳ ಬಗ್ಗೆ ವಿವರಿಸಿದ ಅವರು ಕಾನೂನುಗಳು ನಮ್ಮ ರಕ್ಷಣೆಗಾಗಿರುವಂತದ್ದು ಅದನ್ನು ಎಲ್ಲರೂ ಪಾಲಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯಾಯವಾದಿ ತೇಜಸ್ ಮಾತನಾಡಿ, ಕಾನೂನಿಗೆ ಜಾತಿ, ಧರ್ಮ ಬೇಧವಿಲ್ಲ. ಪ್ರತಿಯೊಬ್ಬರೂ ಕಾನೂನನ್ನು ಅರಿತು ಕೊಂಡಿರಬೇಕು. ಪ್ರತಿ ಮನೆ, ಮನಗಳಿಗೆ ಕಾನೂನಿನ ಅರಿವನ್ನು ಮುಟ್ಟಿಸುವುದಕ್ಕಾಗಿ ಕಾರ್ಯಾಗಾರ ಆಯೋಜಿಸಲಾಗಿದೆ. ಯಾರಿಗೂ ಅನ್ಯಾಯ, ಶೋಷಣೆ ತಪ್ಪಿಸಲು ಕಾನೂನು ಆವಶ್ಯಕ. ತಾಯಿ ಗರ್ಭದಲ್ಲಿಂದ ಸಾಯುವ ತನಕ ಕಾನೂನು ಅನ್ವಯವಾಗುತ್ತದೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಚಿನ್ಮಯ್ ರೈ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ರಾಕೇಶ್ ಮಸ್ಕರೇನಸ್, ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ, ಬನ್ನೂರು ಗ್ರಾ.ಪಂ ಅಧ್ಯಕ್ಷ ಜಯ ಏಕ., ಸದಸ್ಯರಾದ ರಾಘವೇಂದ್ರ, ಶೀನಪ್ಪ ಕುಲಾಲ್, ಶ್ರೀನಿವಾಸ ಪೆರ್ವೋಡಿ, ತಿಮ್ಮಪ್ಪ ಪೂಜಾರಿ, ವಿಮಲ, ಸ್ಮಿತಾ, ಸುಪ್ರೀತ ಪ್ರಭು, ಪಿಡಿಓ ಚಿತ್ರಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂವಿಧಾನ ಓದು ಎಂಬ ಪುಸ್ತಕವನ್ನು ವಿತರಿಸಲಾಯಿತು. ಆಶಯ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಪ್ಯಾರಾ ಲೀಗಲ್ ವಾಲೆಂಟಿಯರ್ ಶಾಂತಿ ಟಿ ಹೆಗಡೆ ಸ್ವಾಗತಿಸಿದರು. ಬೀರಿಗ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅರುಣ ಡಿ. ಕಾರ್ಯಕ್ರಮ ನಿರೂಪಿಸಿದರು.