ಜಿಲ್ಲೆಯ ಬಿಪಿಎಲ್ ಕಾರ್ಡ್‌ದಾರರಿಗೆ ಜ.1ರಿಂದ ಪಡಿತರ ಕುಚಲಕ್ಕಿ ವಿತರಣೆ

0

ಬೆಂಗಳೂರು: ‘ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಜನವರಿ 1ರಿಂದ ಪಡಿತರ ಮೂಲಕ ಕುಚಲಕ್ಕಿ ವಿತರಿಸಲು ನಿರ್ಧರಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.‘ಈ ಮೂರೂ ಜಿಲ್ಲೆಗಳಲ್ಲಿ ವಿತರಿಸಲು ಒಟ್ಟು 13 ಲಕ್ಷ ಕ್ವಿಂಟಾಲ್ ಕುಚಲಕ್ಕಿ ಅವಶ್ಯಕತೆ ಇದೆ.ಅದಕ್ಕೆ ಪೂರಕವಾಗಿ ಡಿ.1ರಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಬೆಂಬಲ ಬೆಲೆ ನೀಡಿ ಭತ್ತ ಖರೀದಿ ಕೇಂದ್ರ ತೆರೆಯಲಾಗುವುದು. ರೂ.2,540 ಬೆಂಬಲ ಬೆಲೆ ನೀಡಿ ಭತ್ತ ಖರೀದಿಸಿ ಸ್ಥಳೀಯವಾಗಿ ಸಂಸ್ಕರಿಸಲು ಉದ್ದೇಶಿಸಲಾಗಿದೆ.ಕೆಂಪು ಕುಚಲಕ್ಕಿಯ ಭತ್ತವನ್ನೇ ಖರೀದಿ ಮಾಡಲಾಗುವುದು’ ಎಂದವರು ಹೇಳಿದರು.

‘ಐದು ಕಿಲೋ ಕುಚಲಕ್ಕಿ ಪಡಿತರ ಮೂಲಕ ವಿತರಿಸಲಾಗುವುದು.ನಮ್ಮಲ್ಲಿರುವ ಕುಚಲಕ್ಕಿಯ ಭತ್ತ ವರ್ಷ ಪೂರ್ತಿ ಸಿಗುವುದು ಕಷ್ಟ. ಹೀಗಾಗಿ ರಾಜ್ಯದ ಬೇರೆ ಜಿಲ್ಲೆಗಳಿಂದ ಭತ್ತ ಖರೀದಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ’ ಎಂದು ಸಚಿವ ಕೋಟ ಹೇಳಿದರು. ‘ನಾವು ಊಟ ಮಾಡುವ ಕುಚಲಕ್ಕಿಯನ್ನು ಪಡಿತರ ಮೂಲಕ ಕೊಡಬೇಕು ಎಂದು ಕರಾವಳಿ ಜಿಲ್ಲೆಗಳ ಜನರು ಬೇಡಿಕೆ ಇಟ್ಟಿದ್ದರು. ಬೇರೆ ಬೇರೆ ಕಾರಣಗಳಿಂದ ಜಾರಿ ಸಾಧ್ಯವಾಗಿರಲಿಲ್ಲ.ಅವರ ಬೇಡಿಕೆ ಗಮನಿಸಿ ಮುಖ್ಯಮಂತ್ರಿ ಸ್ಥಳೀಯ ಕುಚಲಕ್ಕಿಯನ್ನು ವಿತರಿಸುವ ಭರವಸೆ ನೀಡಿದ್ದಾರೆ.ಆ ನಿಟ್ಟಿನಲ್ಲಿ ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು. ಖರೀದಿಸಿದ ಭತ್ತಕ್ಕೆ ಹೆಚ್ಚುವರಿ ಮೊತ್ತವನ್ನು ಸರ್ಕಾರ ಕೊಡಲಿದೆ’ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ನಾವು ಕುಚಲಕ್ಕಿ ಮಾಡುವ ತಳಿಗಳಾದ ಜಯ, ಅಭಿಲಾಷ ಜ್ಯೋತಿ, ಎಂಒ 4ಗೆ ಬೆಂಬಲ ಬೆಲೆ ಘೋಷಿಸಿದ್ದೇವೆ.13 ಲಕ್ಷ ಕ್ವಿಂಟಾಲ್ ಭತ್ತ ಖರೀದಿಯ ಗುರಿ ಇದೆ. ಈ ಪೈಕಿ, 8.50 ಲಕ್ಷ ಕ್ವಿಂಟಾಲ್ ಭತ್ತ ಬರುವ ಅಂದಾಜಿದೆ. ಅದನ್ನು ವಿತರಿಸಲಾಗುವುದು.ಕೇಂದ್ರ ಸರ್ಕಾರ ಕೊಡುವ ಬೆಂಬಲ ಬೆಲೆಗೆ ಭತ್ತ ಸಿಗದ ಕಾರಣ, ಪ್ರತಿ ಕ್ವಿಂಟಾಲ್‌ಗೆ ರೂ.500 ಹೆಚ್ಚುವರಿ ಬೆಲೆ ಕೊಡಲಾಗುವುದು. ಇದನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಇದಕ್ಕೆ ರೂ.132 ಕೋಟಿ ಆಗುವ ಅಂದಾಜಿದೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ಕೃಷಿ ಇಲಾಖೆ ಜೊತೆಗೆ ಸಭೆ ಮಾಡಿದ್ದೇನೆ‘ ಎಂದು ಸಚಿವ ಕೋಟ ಹೇಳಿದರು.ಉಡುಪಿಯಲ್ಲಿ ನಡೆದ ಬಿಜೆಪಿ ಜನಸ್ಪಂದನ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ, ಜಿಲ್ಲೆಯ ಬಿಪಿಎಲ್ ಕಾರ್ಡ್‌ದಾರರಿಗೆ ಕುಚಲಕ್ಕಿ ವಿತರಣೆ ಮಾಡಲಾಗುವುದು ಎಂದು ಹೇಳಿದ್ದರು.

ಪಡಿತರ ಮೂಲಕ 5 ಕೆಜಿ ಕುಚಲಕ್ಕಿ

ಐದು ಕಿಲೋ ಕುಚಲಕ್ಕಿ ಪಡಿತರ ಮೂಲಕ ವಿತರಿಸಲಾಗುವುದು. ನಮ್ಮಲ್ಲಿರುವ ಕುಚಲಕ್ಕಿಯ ಭತ್ತ ವರ್ಷ ಪೂರ್ತಿ ಸಿಗುವುದು ಕಷ್ಟ. ಹೀಗಾಗಿ ರಾಜ್ಯದ ಬೇರೆ ಜಿಲ್ಲೆಗಳಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ

– ಕೋಟ ಶ್ರೀನಿವಾಸ ಪೂಜಾರಿ
ಸಚಿವರು, ಸಮಾಜ ಕಲ್ಯಾಣ ಇಲಾಖೆ

LEAVE A REPLY

Please enter your comment!
Please enter your name here