ಸುದ್ದಿ ಕೃಷಿ ಸೇವಾ ಕೇಂದ್ರದಿಂದಲೂ ಸ್ಟಾಲ್-ಕೃಷಿಕರಿಗೆ ಮಾಹಿತಿ
ಪುತ್ತೂರು: ಕಡಬ ತಾಲೂಕಿನ ಕಿದು ಐಸಿಎಆರ್ – ಸಿಪಿಸಿಆರ್‌ಐ ಸಂಶೋಧನಾ ಕೇಂದ್ರದಲ್ಲಿ ನ. 19ರಿಂದ 23ರವರೆಗೆ ನಡೆಯಲಿರುವ ಮೆಗಾ ಕಿಸಾನ್ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ ಮೇಳದ ಧ್ಯೇಯವಾಕ್ಯ ಕೃಷಿ ಜೈವಿಕ ವೈವಿಧ್ಯ. ಈ ಹಿನ್ನೆಲೆಯಲ್ಲಿ ಕೃಷಿಯಲ್ಲಿ ಜೈವಿಕ ವೈವಿಧ್ಯಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಉಚಿತ ವ್ಯವಸ್ಥೆ ಮಾಡಲಾಗಿದೆ ಎಂದು ಕಾಸರಗೋಡು ಸಿಪಿಸಿಆರ್‌ಐನ ಅನುವಂಶಿಯ ತಳಿಶಾಸ ವಿಭಾಗದ ಪ್ರಧಾನ ವಿಜ್ಞಾನಿ ನರೋಲ್ ಹೇಳಿದರು.
ಸುದ್ದಿ ನ್ಯೂಸ್ ಜೊತೆ ಮಾತನಾಡಿದ ಅವರು, ಕಿದು ಕಿಸಾನ್ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ ಮೇಳದಲ್ಲಿ ಕೃಷಿ ಜೈವಿಕ ವೈವಿಧ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಹಣ್ಣು ಹಂಪಲು, ತರಕಾರಿ, ದವಸಧಾನ್ಯ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಮಳಿಗೆಯನ್ನು ಇಡಲಾಗಿದೆ. ಇದರಲ್ಲಿ ಜೈವಿಕ ವೈವಿಧ್ಯಕ್ಕೆ ಸಂಬಂಧಪಟ್ಟ ಕೃಷಿಯ ಮಾರಾಟ ಮತ್ತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಪ್ರತ್ಯೇಕ ಮಳಿಗೆಯನ್ನೇ ತೆರೆದು, ಅದರಲ್ಲಿ ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕಿಸಾನ್ ಮೇಳದಲ್ಲಿ ಸ್ಟಾಲ್‌ಗಳನ್ನು ಹಾಕಲು ಅವಕಾಶವಿದ್ದು, 4 ವಿಭಾಗದಲ್ಲಿ ಸ್ಟಾಲ್‌ಗಳನ್ನು ಹಂಚಲಾಗಿದೆ. ಎಲ್ಲಾ ಸ್ಟಾಲ್‌ಗಳು 3 ಮೀ. * 3 ಮೀ. ವಿಸ್ತೀರ್ಣ ಹೊಂದಿದೆ. ಸಾಮಾನ್ಯ ಸ್ಟಾಲ್‌ಗಳಿಗೆ 5 ಸಾವಿರ ರೂ. ದರ ನಿಗದಿ ಮಾಡಿದ್ದು, 1 ಟೇಬಲ್, 1 ಕುರ್ಚಿ, 1ಪ್ಲಗ್ (5 ಆಂಪ್ಸ್) ನೀಡಲಾಗುವುದು. ಸ್ಟಾಂಡರ್ಡ್ ವಿಭಾಗಕ್ಕೆ 10 ಸಾವಿರ ರೂ. ದರ ನಿಗದಿ ಮಾಡಿದ್ದು, 2 ಟೇಬಲ್, 2 ಕುರ್ಚಿ, 2 ಪ್ಲಗ್ ಹಾಗೂ 1 ಫ್ಯಾನ್‌ನ ವ್ಯವಸ್ಥೆ ಹೊಂದಿದೆ. ಪ್ರೀಮಿಯಮ್ ವಿಭಾಗಕ್ಕೆ 25 ಸಾವಿರ ರೂ. ದರ ನಿಗದಿ ಮಾಡಿದ್ದು, 3 ಟೇಬಲ್, 3 ಕುರ್ಚಿ, 2 ಪ್ಲಗ್ ಹಾಗೂ 1 ಫ್ಯಾನ್‌ನ ವ್ಯವಸ್ಥೆ ಇದೆ. ಇದೇ ರೀತಿಯಲ್ಲಿ ನರ್ಸರಿಗಳಿಗೆ 3 ಮೀ * 6 ಮೀ. ಸ್ಥಳಾವಕಾಶದ ಸ್ಟಾಲ್ ಇದ್ದು, 10 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಇದರಲ್ಲಿ 1 ಟೇಬಲ್, 2 ಕುರ್ಚಿ, 1 ಪ್ಲಗ್ ಹಾಗೂ ನೀರಾವರಿ ಸೌಲಭ್ಯ ನೀಡಲಾಗುವುದು ಎಂದು ವಿವರಿಸಿದರು.
ಕಾಸರಗೋಡು ಸಿಪಿಸಿಆರ್‌ಐನ ಸಸ್ಯ ಶರೀರಶಾಸ್ತ್ರ ಜೀವರಸಾಯನಶಾಸ್ತ್ರ ಮತ್ತು ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೆ.ಬಿ. ಹೆಬ್ಬಾರ್ ಮಾತನಾಡಿ, ಕಿದು ಐಸಿಎಆರ್ – ಸಿಪಿಸಿಆರ್‌ಐ ಸಂಶೋಧನಾ ಕೇಂದ್ರ ಈ ವರ್ಷ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು, ಅನೇಕ ಸಂಸ್ಮರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಸಮುದಾಯಕ್ಕೆ ನೆರವಾಗುವ ಹಾಗೂ ಕೃಷಿ ತಂತ್ರಜ್ಞಾನಗಳ ಇತ್ತೀಚಿನ ಆವಿಷ್ಕಾರಗಳನ್ನು ಪರಿಚಯಿಸುವ ಉದ್ದೇಶದಿಂದ ಮೆಗಾ ಕೃಷಿ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಇದರಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ನೆರೆಯ ಹಾಗೂ ಪ್ರಮುಖ ಉತ್ಪಾದಕ ರಾಜ್ಯಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಮೊದಲನೆ ದಿನವಾದ ನವಂಬರ್ 19ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಜೀವವೈವಿಧ್ಯ ಸಂರಕ್ಷಣಾ ಮೇಳದ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 2ಕ್ಕೆ ರೈತರ – ವಿಜ್ಞಾನಿಗಳ ಸಮಾವೇಶ ಹಾಗೂ ಡ್ರೋನ್ ತಂತ್ರಜ್ಞಾನದ ಪ್ರದರ್ಶನ ಏರ್ಪಡಿಸಲಾಗಿದೆ. ನ. 20ರಂದು ಬೆಳಿಗ್ಗೆ 10ಕ್ಕೆ ಸುಸ್ಥಿರ ಅಡಿಕೆ ಕೃಷಿ ಮತ್ತು ಸಸ್ಯ ಸಂರಕ್ಷಣಾ ತಂತ್ರಜ್ಞಾನಗಳು ಹಾಗೂ ಮಧ್ಯಾಹ್ನ 2ಕ್ಕೆ ಹೈಟೆಕ್ ತೋಟಗಾರಿಕಾ ತಂತ್ರಜ್ಞಾನಗಳ ಕುರಿತ ವಿಚಾರ ಸಂಕಿರಣ ನಡೆಯಲಿದೆ. ನ. 21ರಂದು ಬೆಳಿಗ್ಗೆ 10ಕ್ಕೆ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಹಾಗೂ ಮಧ್ಯಾಹ್ನ ೨ಕ್ಕೆ ಕೋಕೋ ಕೃಷಿ ಮತ್ತು ಸಂಸ್ಕರಣೆ ಕುರಿತು ವಿಚಾರ ಸಂಕಿರಣ ನಡೆಯಲಿದೆ. ನ. 22ರಂದು ಬೆಳಿಗ್ಗೆ 10ಕ್ಕೆ ಪ್ಲಾಂಟೇಶನ್ ಮತ್ತು ಸಾಂಬಾರು ಬೆಳೆಗಳಲ್ಲಿ ಮೌಲ್ಯವರ್ಧನೆ ಮತ್ತು ಯಾಂತ್ರೀಕರಣ ಹಾಗೂ ಮಧ್ಯಾಹ್ನ 2ಕ್ಕೆ ರೈತರ ಉತ್ಪಾದಕ ಸಂಸ್ಥೆಗಳ ವ್ಯಾಪ್ತಿ ಮತ್ತು ಅವಕಾಶಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ. ನ. 23ರಂದು ಬೆಳಿಗ್ಗೆ 10ಕ್ಕೆ ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಬಗ್ಗೆ ಜಾಗೃತಿ ಹಾಗೂ ಮಧ್ಯಾಹ್ನ ೨ಕ್ಕೆ ಸಮಾರೋಪ ಜರಗಲಿದೆ ಎಂದು ಮಾಹಿತಿ ನೀಡಿದರು.
ಅತಿಥಿಗಳು: ಕಿಸಾನ್ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ನವದೆಹಲಿ ಐಸಿಎಆರಿನ ಎಡಿಜಿ ಹಾಗೂ ಡಿಡಿಜಿ ಅವರು ಪಾಲ್ಗೊಳ್ಳಲಿರುವರು. ಇವರ ಜೊತೆಗೆ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ ಎಂದು ಸಿಪಿಸಿಆರ್ ಐನ ಸಸ್ಯ ಶರೀರಶಾಸ ಜೀವರಸಾಯನಶಾಸ ಮತ್ತು ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೆ.ಬಿ. ಹೆಬ್ಬಾರ್ ಮಾಹಿತಿ ನೀಡಿದರು.
ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಕೃಷಿಕರಿಗೆ ಮಾಹಿತಿ
ಕಿದು ಕಿಸಾನ್ ಮೇಳದಲ್ಲಿ ಸುದ್ದಿ ಕೃಷಿ ಸೇವಾ ಕೇಂದ್ರದಿಂದಲೂ ಸ್ಟಾಲ್ ಹಾಕಲಾಗುವುದು.ಮಾತ್ರವಲ್ಲದೆ ಮೇಳದಲ್ಲಿ ಭಾಗವಹಿಸಲಿರುವ ವಿವಿಧ ಸ್ಟಾಲ್‌ಗಳು, ಸ್ಟಾಲ್ ಹಾಕುವವರಿಗೆ ನೀಡಲಾಗುವ ವಸತಿ, ಮತ್ತಿತರ ಸೌಲಭ್ಯಗಳು ಹಾಗೂ ಮೇಳದ ಇತರ ವ್ಯವಸ್ಥೆಗಳ ಕುರಿತು ಮಾಹಿತಿಗಳನ್ನು ಸುದ್ದಿ ಕೃಷಿ ಸೇವಾ ಕೇಂದ್ರದ ಮೂಲಕ ಸಂಗ್ರಹಿಸಿ ಕೃಷಿಕರಿಗೆ ನೀಡಲು ಪ್ರಯತ್ನಿಸಲಾಗುವುದು.
ಮಾಹಿತಿಗಾಗಿ 6364570738 ಸಂಪರ್ಕಿಸಬಹುದು.