ವಿಟ್ಲ: ಗಂಡನ ಮನೆಗೆ ಬಂದ ವೇಳೆ ಗಂಡನ ಮನೆಯವರು ಹಲ್ಲೆಗೈದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಮಂಜೊಟ್ಟಿ ನಿವಾಸಿ ಆಸೀಪ್ ರವರ ಪತ್ನಿ ಬೀಪಾತುಮ್ಮ ದೂರುದಾರರಾಗಿದ್ದಾರೆ.
ನಾನು ನನ್ನ ತಾಯಿ ಮನೆಯಾದ ಪುತ್ತೂರಿನ ಕೆಯ್ಯೂರಿನಲ್ಲಿ ವಾಸವಿದ್ದು, ತನ್ನ ಮೊದಲ ಗಂಡ ಮಹಮ್ಮದ್ ಶರೀಫ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂತರ ಗಂಡನ ತಮ್ಮ ಆಸೀಫ್ ರವರು ನನ್ನನ್ನು ಎರಡನೇ ಮದುವೆಯಾಗಿದ್ದರು. ಮೊದಲನೆ ಗಂಡನ ಆಸ್ತಿಯನ್ನು ಆಸೀಫ್ ರವರು ಮಾರಾಟ ಮಾಡಿ ಅದರಲ್ಲಿ ಬಂದ ಹಣವನ್ನು ಅವರೇ ಖರ್ಚು ಮಾಡಿದ್ದಾರೆ. ಆ ಬಳಿಕ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಕಳೆದ 3 ತಿಂಗಳ ಹಿಂದೆ ಅವರು ವಿದೇಶಕ್ಕೆ ತೆರಳಿದ್ದಾರೆ.
ನನ್ನನ್ನು ಹಾಗೂ ಮಕ್ಕಳನ್ನು ಗಂಡನ ಮನೆಗೆ ಬಿಡಲೆಂದು ನನ್ನ ಅಣ್ಣಂದಿರಾದ ಹಮೀದ್ ಹಾಗೂ ಇಸ್ಮಾಯಿಲ್ ರವರು ಬಂದಿದ್ದರು. ಈ ವೇಳೆ ಮನೆಯಲ್ಲಿದ್ದ ಆಸೀಫ್ ರ ತಂದೆ ಮೋನು ಬ್ಯಾರಿ, ಗಂಡನ ತಂಗಿ ಖತೀಜಾ, ಆಕೆಯ ಗಂಡ ಬಶೀರ್ ರವರು ಸೇರಿಕೊಂಡು ನನ್ನನ್ನು ಮನೆಯ ಒಳಗೆ ಹೋಗದಂತೆ ತಡೆದು, ಮೈಗೆ ಕೈಹಾಕಿ ದೂಡಿರುತ್ತಾರೆ. ಆ ಸಮಯ ಅಲ್ಲೇ ಇದ್ದ ಗಂಡನ ತಂಗಿ ಖತೀಜಾ ನನಗೆ ಹಲ್ಲೆ ನಡೆಸಿದ್ದಾರೆ. ಅತ್ತೆ ಅಮೀನಾರವರು ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ. ಇದಕ್ಕೆಲ್ಲಾ ಗಂಡನ ದುಷ್ಪ್ರೇರಣೆಯೇ ಕಾರಣ ಎಂದು ಬೀಪಾತುಮ್ಮರವರು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಬೀಪಾತುಮ್ಮರವರು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.