ಅಕ್ಷಯ ಕಾಲೇಜು ವಿದ್ಯಾರ್ಥಿ ಸಂಘ ಪದ ಪ್ರದಾನ

0

ಶಿಕ್ಷಣದಿಂದ ಮನಸ್ಸುಗಳನ್ನು ಜೋಡಿಸುವ ಕೆಲಸವಾಗಬೇಕು-ಡಾ|ದೇರ್ಲ ನರೇಂದ್ರ ರೈ

ಪುತ್ತೂರು: ಬರೀ ತನ್ನ ಮನೆಯನ್ನು ಬೆಳಗಿಸುವ  ಶಿಕ್ಷಣವೀಯದೆ ಇತರರ ಮನೆಯನ್ನು ಕೂಡ ಬೆಳಗಿಸುವ ಶಿಕ್ಷಣ ಇಂದಿನದ್ದಾಗಬೇಕು. ಶಿಕ್ಷಣದಿಂದ ಮನಸ್ಸುಗಳನ್ನು ಜೋಡಿಸುವ ಕೆಲಸವಾಗಬೇಕಿದೆ ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಸಹಾಯಕ ಪ್ರಾಧ್ಯಾಪಕ ಡಾ|ನರೇಂದ್ರ ರೈ ದೇರ್ಲರವರು ಹೇಳಿದರು.

ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ 2022-23 ನೇ ಸಾಲಿನ ವಿದ್ಯಾರ್ಥಿ ಸಂಘದ ಪದ ಪ್ರದಾನ ಸಮಾರಂಭವು ನ.16 ರಂದು ಕಾಲೇಜಿನ ಆಡಿಟೋರಿಯಂನಲ್ಲಿ ನೆರವೇರಿದ್ದು, ಪದ ಪ್ರದಾನವನ್ನು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಮಾತನಾಡಿದರು.

ನಮ್ಮ ಕರಾವಳಿ ಜಿಲ್ಲೆಯು ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಂಡಿದೆ. ಇಲ್ಲಿ ಜಗತ್ಪ್ರಸಿದ್ಧ ಮೆಡಿಕಲ್ ಕಾಲೇಜುಗಳು, ಇಂಜಿನಿಯರ್ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಕಾರ್ಯಚರಿಸುತ್ತಿವೆ. ಆದರೆ ಮತೀಯ ಧಾರ್ಮಿಕ ಗಲಭೆಗಳು ಸೃಷ್ಟಿಯಾಗುತ್ತಾ ಮಾನವ ಎತ್ತ ಕಡೆಗೆ ಸಾಗುತ್ತಿದ್ದಾನೆ ಎಂಬುದು ದೌರ್ಭಾಗ್ಯವಾಗಿದೆ. ನಮ್ಮ ಪದವಿ ಹಾಗೂ ರ್‍ಯಾಂಕ್‌ಗಳು ನಮ್ಮ ಮನಸ್ಸುಗಳನ್ನು ಜೋಡಿಸದಿದ್ದರೆ ನಾವು ಪಡೆಯುವ ಶಿಕ್ಷಣಕ್ಕೆ ಏನರ್ಥವಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ|ರವಿ ಶೆಟ್ಟಿ ಹಾಗೂ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರು ಬಡತನದಿಂದ, ರೈತ ಕುಟುಂಬದ ಹಿನ್ನೆಲೆಯಿಂದ ಬಂದವರಾದರೂ, ಅವರು ಮಾಡಿರುವ ಸಾಧನೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದ ಅವರು ನಾವು ಪದವೀಧರರನ್ನು ಸೃಷ್ಟಿ ಮಾಡುತ್ತೇವೆ ಯಾಕೆ?. ನಮ್ಮಲ್ಲಿನ ಮನಸ್ಸು, ಆರೋಗ್ಯ ಹಾಳಾಗದಿರಲಿ ಎಂದು. ನಮ್ಮ ಮನಸ್ಥಿತಿ, ನಮ್ಮ ನೆಲದ ಸಂಸ್ಕೃತಿ, ಸಾಹಿತ್ಯ, ಸಂಗೀತ, ಪರಿಸರ, ಪುಸ್ತಕದ ಕಡೆಗೆ ನಿರಂತರ ಅಧ್ಯಯನದ ಜೊತೆಗೆ ಸಾಂಸ್ಕೃತಿಕ ಆಸಕ್ತಿ ಜೀವನದಲ್ಲಿ ಬೆಳೆಸಿಕೊಂಡಾಗ ಸಮಾಜವು ಅರ್ಥಪೂರ್ಣವಾಗಿ ಬೆಳೆಯಬಲ್ಲುದು ಎಂದು ಅವರು ಹೇಳಿದರು.

ಉತ್ತಮ ಶಿಕ್ಷಣವನ್ನು ಕಲಿತು ಹೆತ್ತವರ ಕನಸು ನನಸುಗೊಳಿಸಿ-ಡಾ|ರವಿ ಎಟ್ಟಿ:
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಎ.ಟಿ.ಎಸ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಡಾ|ರವಿ ಶೆಟ್ಟಿ ಮೂಡಂಬೈಲುರವರು ಮಾತನಾಡಿ, ನಾವು ಏನನ್ನೂ ಸಂಪಾದಿಸಬಹುದು ಆದರೆ ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎಂಬುದು ಬಹಳ ಮುಖ್ಯವೆನಿಸುತ್ತದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಕಲಿತು ಸಾಧನೆ ಮಾಡುವ ಮೂಲಕ ಹೆತ್ತವರ ಕನಸನ್ನು ನನಸು ಮಾಡುವತ್ತ ಹೆಜ್ಜೆಯಿಡುವುದರೊಂದಿಗೆ ಮಾನವೀಯತೆಯ ಗುಣವನ್ನೂ ಅಳವಡಿಸಿಕೊಳ್ಳಿ. ಫ್ಯಾಶನ್ ಡಿಸೈನ್ ಲೋಕದಲ್ಲಿ ಹಾಗೂ ಏವಿಯೇಶನ್‌ನಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಅಕ್ಷಯ ಕಾಲೇಜಿನ ಹೆಸರನ್ನು ಉತ್ತುಂಗಕ್ಕೇರಿಸಿ. ಅಬ್ದುಲ್ ಕಲಾಂ, ಮಹಾತ್ಮ ಗಾಂಧಿ, ರವೀಂದ್ರನಾಥ ಠಾಗೋರ್, ಮದರ್ ತೆರೆಸಾರಂತಹ ಮಹಾನ್ ವ್ಯಕ್ತಿಗಳ ಅರ್ಥಗರ್ಭಿತವಾದ ಮಾತುಗಳು ನಮಗೆ ರೋಲ್ ಮಾಡೆಲ್ ಆಗಲಿ ಎಂದರು.

ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಸ್ಥಾನ ಸಂಪಾದಿಸುವವರಾಗಿ-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಛೇರ್‌ಮ್ಯಾನ್ ಜಯಂತ್ ನಡುಬೈಲುರವರು ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ|ರವಿ ಶೆಟ್ಟಿಯವರು ಎಂದಿಗೂ ಪ್ರಶಸ್ತಿಯನ್ನು ಕೇಳಿಕೊಂಡವರಲ್ಲ. ಅವರು ಮಾಡಿದ ಸಾಧನೆಗೆ ಪ್ರಶಸ್ತಿಯು ಅವರನ್ನು ಅರಸಿಕೊಂಡು ಬಂದಿತ್ತು. ಈ ಪ್ರಶಸ್ತಿಯು ನಮ್ಮ ಜಿಲ್ಲೆಗೆ ಗೌರವದ ಆಸ್ತಿಯಾಗಿದೆ. ನಾಯಕತ್ವಕ್ಕೆ ಬಡವ-ಶ್ರೀಮಂತ ಎಂಬುದಿಲ್ಲ. ಕಠಿಣ ಪರಿಶ್ರಮಪಟ್ಟು ಸಾಧನೆ ಮಾಡಿದಾಗ ಸಮಾಜದಲ್ಲಿ ನಾಯಕತ್ವ ತನ್ನಿಂತಾನೇ ಲಭಿಸುತ್ತದೆ. ನಮ್ಮಿಂದ ತಪ್ಪುಗಳು ಆಗುವುದು ಸಹಜ. ಆದರೆ ತಪ್ಪಗಳನ್ನು ಒಪ್ಪಿಕೊಂಡು ಅವನ್ನು ತಿದ್ದಿ ಮುನ್ನೆಡೆಯುವವನೇ ಶ್ರೇಷ್ಟನು. ವಿದ್ಯಾರ್ಥಿಗಳು ಜೀವನದಲ್ಲಿ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಸ್ಥಾನ ಸಂಪಾದಿಸುವವರಾಗಿ ಎಂದು ಹೇಳಿ ಶುಭ ಹಾರೈಸಿದರು.

ಉದ್ಯಮಿ ಉಮೇಶ್ ನಾಡಾಜೆ, ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಆಡಳಿತಾಧಿಕಾರಿ ಅರ್ಪಿತ್ ಟಿ.ಎರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂತಿಮ ಬಿಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೋರೇಶನ್ಸ್‌ನ ಗಗನ್‌ದೀಪ್ ಎ.ಬಿ ಸ್ವಾಗತಿಸಿ, ಕಾರ್ಯದರ್ಶಿ ಅಂತಿಮ ಬಿಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೋರೇಶನ್ಸ್‌ನ ಲಿಖಿತ್ ಎ.ವಿ ವಂದಿಸಿದರು. ಅಂತಿಮ ಬಿಎಸ್ಸಿ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿನಿ, ಅಂತರ್ರಾಷ್ಟ್ರೀಯ ಯೋಗಾಸನಪಟು ಪ್ರಣಮ್ಯ ಸಿ.ಎ ಹಾಗೂ ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

ಪದಾಧಿಕಾರಿಗಳ ಪದ ಪ್ರದಾನ…
ಕಾಲೇಜಿನ ವಿದ್ಯಾರ್ಥಿ ಸಂಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಅಧ್ಯಕ್ಷ ಗಗನ್‌ದೀಪ್ ಎ.ಬಿ, ಕಾರ್ಯದರ್ಶಿ ಲಿಖಿತ್ ಎ.ವಿ, ಕೋಶಾಧಿಕಾರಿ ಸೃಷ್ಟಿ ಎಚ್.ಜಿ, ಉಪಾಧ್ಯಕ್ಷ ವಿನೋದ್ ಕೆ.ಸಿ, ಜೊತೆ ಕಾರ್ಯದರ್ಶಿ ಮಿಥುನ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ದಕ್ಷಿತಾ ಎಂ.ಕೆ, ಕ್ರೀಡಾ ಕಾರ್ಯದರ್ಶಿ ನವೀನ್, ಮೀಡಿಯಾ ಕಾರ್ಯದರ್ಶಿ ಮುಹಮದ್ ಮುಸ್ತಾಫ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿಗಳಾದ ಶ್ರದ್ಧಾ ಹಾಗೂ ಸಚಿನ್ ಟಿ.ಕೆ, ಜೊತೆ ಕ್ರೀಡಾ ಕಾರ್ಯದರ್ಶಿಗಳಾದ ಮಹೇಶ್ ಪಿ ಹಾಗೂ ಪ್ರಶಾಂತ್ ಎಸ್, ಮೀಡಿಯಾ ಜೊತೆ ಕಾರ್ಯದರ್ಶಿಗಳಾದ ಚಿಂತನ್ ಹಾಗೂ ಮನಸ್ವಿ ಎಚ್.ಸಿರವರಿಗೆ ಕಾಲೇಜಿನ ಛೇರ್‌ಮ್ಯಾನ್ ಜಯಂತ್ ನಡುಬೈಲುರವರು ಹೂ ನೀಡಿ ಪದ ಪ್ರದಾನ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳರವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಸನ್ಮಾನ/ಗೌರವ..
ಹಲವಾರು ಪ್ರಶಸ್ತಿಗಳ ಸರದಾರ, ಇತ್ತೀಚೆಗೆ ಸಮಾಜ ಸೇವೆಗೆ ರಾಜ್ಯ ಸರಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಎ.ಟಿ.ಎಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಡಾ|ರವಿ ಶೆಟ್ಟಿ ಮೂಡಂಬೈಲುರವರನ್ನು ಸಂಸ್ಥೆಯು ಗುರುತಿಸಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾಲೇಜಿನ ದ್ವಿತೀಯ ಬಿಎಸ್ಸಿ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿ, ಇತ್ತೀಚೆಗೆ ಉಡುಪಿಯಲ್ಲಿ ನಡೆದ ಮಿಸ್ಟರ್ ತುಳುನಾಡು 2022 ಮಾಡೆಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದ ವಚನ್ ಎಸ್.ರವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಕಾಲೇಜಿನ ಆಡಳಿತ ಮಂಡಳಿಗೆ, ಉಪನ್ಯಾಸಕ ಹಾಗೂ ಆಡಳಿತ ಸಿಬ್ಬಂದಿ ವರ್ಗದವರಿಗೆ, ಸಹಪಾಠಿಗಳಿಗೆ ಮನದಾಳದಿಂದ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ. ಎಲ್ಲಾ ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸದಿಂದ ಒಗ್ಗೂಡಿಸಿ, ಸಂಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಧನಾತ್ಮಕ ರೀತಿಯಲ್ಲಿ ಕಾಲೇಜಿನ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುನ್ನೆಡೆಯಲಿದ್ದೇವೆ. ಎಲ್ಲರ ಸಹಕಾರ ನಮ್ಮ ಮೇಲಿರಲಿ ಎಂಬ ಆಶಯ ನಮ್ಮದು.
-ಗಗನ್‌ದೀಪ್ ಎ.ಬಿ, ನೂತನ ಅಧ್ಯಕ್ಷರು, ವಿದ್ಯಾರ್ಥಿ ಸಂಘ, ಅಕ್ಷಯ ಕಾಲೇಜು

 

ಚಿತ್ರ: ನವೀನ್ ಪಂಜಳ

LEAVE A REPLY

Please enter your comment!
Please enter your name here