ಡಾ.‌ಕೃಷ್ಣಮೂರ್ತಿಯವರ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಮನವಿ

0

ಪುತ್ತೂರು: ಡಾ. ಕೃಷ್ಣಮೂರ್ತಿ ಯವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸಿ.ಐ.ಡಿಗೆ ಒಪ್ಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಅರಗ ಜ್ಞಾನೇಂದ್ರರವರಿಗೆ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.‌ಮಹಮ್ಮದ್ ಆಲಿ ಮನವಿ ಸಲ್ಲಿಸಿದ್ದಾರೆ.

ನೋಂದಾಯಿತ ಅಂಚೆ ಮೂಲಕ ಮಹಮ್ಮದ್ ಆಲಿ ಮನವಿ ಸಲ್ಲಿಸಿದ್ದು ‘ಇತ್ತೀಚೆಗೆ ಬದಿಯಡ್ಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಜ್ಜನ ವ್ಯಕ್ತಿ ಪುತ್ತೂರು ಮೂಲದ ಡಾ. ಕೃಷ್ಣ ಮೂರ್ತಿಯವರ ಶವ ಉಡುಪಿ ಜಿಲ್ಲೆಯ ಕುಂದಾಪುರದ ಕುತಲ್ಲೂರು ಎಂಬಲ್ಲಿ ರೈಲ್ವೆ ಹಳಿಯ ಪಕ್ಕ ಪತ್ತೆಯಾಗಿದ್ದು, ಇವರ ಈ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕಾಗಿದೆ.‌ ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕೆಂದು ಪುತ್ತೂರು ಕಾಂಗ್ರೆಸ್ ಸಮಿತಿ ವತಿಯಿಂದ ತಮ್ಮಲ್ಲಿ ಕೇಳಿ ಕೊಳ್ಳುತ್ತಿದ್ದೇವೆ. ಡಾ. ಕೃಷ್ಣಮೂರ್ತಿಯವರ ಸಹೋದರರಾದ ಡಾ. ರಾಮಮೋಹನ್ ಹಾಗೂ ಡಾ. ಅರವಿಂದರವರು ಪುತ್ತೂರಿನಲ್ಲಿ ವೈದ್ಯರಾಗಿದ್ದು, ಇವರಿಬ್ಬರು ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದು, ತಮ್ಮ ಪ್ರಾಮಾಣಿಕ ಸೇವೆಯಿಂದ ಪುತ್ತೂರಿನಲ್ಲಿ ಜನಪ್ರಿಯ ವೈದ್ಯರಾಗಿ ಹೆಸರು ವಾಸಿಯಾಗಿರುತ್ತಾರೆ.

ಇವರ ಒಡಹುಟ್ಟಿದ ಸಹೋದರರಾಗಿರುವ ಡಾ. ಕೃಷ್ಣಮೂರ್ತಿಯವರು ಕೂಡ ವೈದ್ಯರಾಗಿ ಜನಪ್ರಿಯರಾಗಿದ್ದವರು ಇವರ ಈ ದುರಂತ ಸಾವು ನಮಗೆಲ್ಲರಿಗೂ ಅಘಾತ ತಂದಿರುತ್ತದೆ. ಡಾ.‌ಕೃಷ್ಣ ಮೂರ್ತಿಯವರು ಕೇರಳ ರಾಜ್ಯದ ಬದಿಯಡ್ಕ ನಿವಾಸಿಯಾಗಿರುತ್ತಾರೆ. ಆದರೆ ಇವರ ಶವ ಸಿಕ್ಕಿರುವುದು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪರಿಸರದಲ್ಲಾಗಿರುತ್ತದೆ. ಇವರ ಸಾವಿನ ಪ್ರಕರಣ ಕೇರಳ ಹಾಗೂ ಕರ್ನಾಟಕ ಈ ಎರಡು ರಾಜ್ಯಗಳಿಗೆ ಸಂಬಂಧ ಪಡುತ್ತದೆ. ಇವರ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸ ಬೇಕಾಗಿರುತ್ತದೆ. ಆದುದರಿಂದ ಈ ಸಾವಿನ ಸಮಗ್ರ ತನಿಖೆಗಾಗಿ ಈ ಪ್ರಕರಣವನ್ನು ಸಿಐಡಿ ಒಪ್ಪಿಸಬೇಕಾಗಿ ಸರಕಾರವನ್ನು ಈ ಮೂಲಕ ಆಗ್ರಹಿಸುತ್ತಿದ್ದೇನೆ’ ಎಂದು ಮನವಿಯಲ್ಲಿ‌ ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here