ವೃತ್ತ ನಿರೀಕ್ಷಕ ಗಂಗಿರೆಡ್ಡಿಯವರನ್ನು ದೋಷಮುಕ್ತಗೊಳಿಸಿದ ಹೈಕೋರ್ಟ್
ಪುತ್ತೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಶಿಕ್ಷೆಯ ಆದೇಶಕ್ಕೊಳಗಾಗಿದ್ದ ಪೊಲೀಸ್ ವೃತ್ತ ನಿರೀಕ್ಷಕ ಗಂಗಿರೆಡ್ಡಿಯವರನ್ನು ದೋಷಮುಕ್ತಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಗಂಗಿ ರೆಡ್ಡಿಯವರ ಮನೆಗೆ 2009ರಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಪ್ರಕರಣದಲ್ಲಿ, ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಇದೀಗ ಹೈಕೋರ್ಟು ಗಂಗಿರೆಡ್ಡಿರವರನ್ನು ಖುಲಾಸೆಗೊಳಿಸಿ ಆದೇಶ ಮಾಡಿದೆ.
ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಗಂಗಿ ರೆಡ್ಡಿ ಅವರು ಲಾಲದಲ್ಲಿ ಹೊಂದಿದ್ದ ಮನೆಗೆ 2009 ರ ಆ.27 ರಂದು ಆಗಿನ ಲೋಕಾಯುಕ್ತ ಡಿವೈಎಸ್ಪಿ ಸದಾನಂದ ವರ್ಣೇಕರ್ ಮತ್ತು ಅವರ ತಂಡ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡು ವೇತನ ಆದಾಯ ಹೊರತುಪಡಿಸಿ ರೂ.19 ಲಕ್ಷ ಹೆಚ್ಚಿನ ಆಸ್ತಿ ಪತ್ತೆಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿತ್ತು.
ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಲೋಕಾಯುಕ್ತ ಡಿವೈಎಸ್ಪಿ ಎಂ. ವಿಟ್ಟಲ್ದಾಸ್ ಪೈ ಅವರು ಗಂಗಿ ರೆಡ್ಡಿ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಗಂಗಿರೆಡ್ಡಿರವರಿಗೆ 4 ವರ್ಷ ಸಾದಾ ಸಜೆ ಮತ್ತು ರೂ. 5 ಲಕ್ಷ ದಂಡ ವಿಧಿಸಿ 2020 ಆ.27 ರಲ್ಲಿ ತೀರ್ಪು ನೀಡಿತ್ತು.
ಈ ತೀರ್ಪಿನ ವಿರುದ್ಧ ಗಂಗಿ ರೆಡ್ಡಿಯವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ, ಕೃಷಿ ಆದಾಯ, ಊರಿನಲ್ಲಿರುವ ಕಟ್ಟಡಗಳ ಬಾಡಿಗೆ, ಕುಟುಂಬದ ಆದಾಯದಲ್ಲಿ ದೊರೆತ ಚಿನ್ನ ಮಾರಾಟದ ಹಣದ ಲೆಕ್ಕಾಚಾರವನ್ನು ಲೋಕಾಯುಕ್ತ ನ್ಯಾಯಾಲಯ ತನಿಖೆ ವೇಳೆ ಪರಿಗಣಿಸಿರಲಿಲ್ಲ ಎಂಬ ಅಂಶವನ್ನು ಮುಂದಿಟ್ಟಿದ್ದರು. ಇದನ್ನು ಪರಿಗಣಿಸಿ ಹೈಕೋರ್ಟ್ ಗಂಗಿ ರೆಡ್ಡಿಯವರ ಶಿಕ್ಷೆಯನ್ನು ರದ್ದುಗೊಳಿಸಿ ಆದೇಶಿಸಿದೆ. ಗಂಗಿ ರೆಡ್ಡಿ ಅವರ ಪರವಾಗಿ ನ್ಯಾಯವಾದಿಗಳಾದ ಪರಮೇಶ್ವರ ಎನ್. ಹೆಗ್ಡೆ ಮತ್ತು ಜಿನೇಂದ್ರ ವಾದ ಮಂಡಿಸಿದ್ದರು. ಗಂಗಿ ರೆಡ್ಡಿಯವರು ಇದೀಗ ಕರಾವಳಿ ಕಾವಲು ಪಡೆಯ (ಸಿ.ಎಸ್.ಪಿ) ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗಂಗಿರೆಡ್ಡಿಯವರು 8-12-1996ರಿಂದ 11- 7 -1998ರವರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಸ್ಐಯಾಗಿದ್ದರು.