ಪುತ್ತೂರು: ಗೇಣಿಗೆ ನೀಡಲಾಗಿದ್ದ ತಮ್ಮ ಜಮೀನಿನ ಸ್ವಾಧೀನಕ್ಕಾಗಿ ನಿವೃತ್ತ ಯೋಧರೊಬ್ಬರು ಹಲವು ವರ್ಷಗಳಿಂದ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ತೆರೆ ಎಳೆದಿರುವ ಹೈಕೋರ್ಟ್, 8 ವಾರಗಳೊಳಗೆ ಜಮೀನನ್ನು ಗೇಣಿದಾರರಿಂದ ಮಾಜಿ ಸೈನಿಕನ ಸುಪರ್ದಿಗೆ ಕೊಡಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಪುತ್ತೂರು ಬಳಿಯ ದರ್ಬೆ ಗ್ರಾಮದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ದಿವಾನ್ ಗೋಪಾಲಕೃಷ್ಣ ಭಟ್ ಅವರಿಗೆ ಸೇರಿದ ಜಮೀನಿನಲ್ಲಿ ಗೇಣಿ ಮಾಡುತ್ತಿದ್ದ ನಫೀಜಾ ಸೇರಿ 23 ಗೇಣಿದಾರರು ಜಮೀನಿನ ಮಾಲೀಕತ್ವ ಕೋರಿ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪ್ರಕರಣವೇನು?: ಅರ್ಜಿದಾರರ ಪೂರ್ವಜ ಉಮರ್ ಬ್ಯಾರಿ ಎಂಬಾತ ಗೋಪಾಲಕೃಷ್ಣ ಅವರ ತಂದೆಯ ಮಾಲೀಕತ್ವದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಜಮೀನಿನಲ್ಲಿ 1940ರಿಂದ ಗೇಣಿ ಮಾಡುತ್ತಿದ್ದರು ಎನ್ನಲಾಗಿದೆ. 1993ರಲ್ಲಿ ಸೇನೆಯಿಂದ ನಿವೃತ್ತರಾದ ಗೋಪಾಲಕೃಷ್ಣ ಅವರು 1994ರಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 15(4) ಅಡಿಯಲ್ಲಿ ಜಮೀನು ಹಿಂಪಡೆಯಲು ಅರ್ಜಿ ಸಲ್ಲಿಸಿದರು. ಈ ಸಂಬಂಧ ಅರ್ಜಿದಾರರಿಗೆ ನೋಟಿಸ್ ನೀಡಲಾಗಿತ್ತಾದರೂ, ಅವರು ನೋಟಿಸ್ಗೆ ಸ್ಪಂದಿಸಿರಲಿಲ್ಲ.
ಈ ಮಧ್ಯೆ, ಭೂ ನ್ಯಾಯಾಧಿಕರಣ ಜಮೀನಿನ ಹಕ್ಕುಪತ್ರವನ್ನು ಅರ್ಜಿದಾರರ ಹೆಸರಿಗೆ ನೋಂದಣಿ ಮಾಡಿಸಲು ಆದೇಶಿಸಿತ್ತು. ಆ ಆದೇಶವನ್ನು 2000ನೇ ಇಸವಿಯಲ್ಲಿ ರದ್ದುಪಡಿಸಿದ್ದ ಹೈಕೋರ್ಟ್, ಗೋಪಾಲಕೃಷ್ಣ ಅವರ ಅರ್ಜಿ ವಿಚಾರಣೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸ್ಥಳೀಯ ತಹಸೀಲ್ದಾರ್ಗೆ ನಿರ್ದೇಶಿಸಿತ್ತು. ತಹಸೀಲ್ದಾರ್ ಅವರು ಗೋಪಾಕೃಷ್ಣ ಭಟ್ ಪರವಾಗಿ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಆದೇಶ ಎತ್ತಿಹಿಡಿದಿದ್ದರು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.