ತಿಂಗಳ 4 ನೇ ಶುಕ್ರವಾರ ಕಡತ ವಿಲೇವಾರಿ ಅಭಿಯಾನ

0

ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಜೀವಂಧರ್ ಜೈನ್

ಪುತ್ತೂರು:ರಾಜ್ಯಾದ್ಯಂತ ಸರ್ವರ್ ಸಮಸ್ಯೆಯಿಂದ ಕಡತ ವಿಲೇವಾರಿಗೆ ತೊಂದರೆ ಉಂಟಾಗಿದೆ.ಸರ್ವರ್ ಸಮಸ್ಯೆ ಆಗಿ 12 ದಿನ ಆಗಿದೆ.ಇನ್ನು ಮೂರು ದಿನದೊಳಗೆ ಸರ್ವರ್ ಸರಿಯಾಗಲಿದೆ. ಹಾಗಾಗಿ ಕಡತ ಪೆಂಡಿಂಗ್ ಆಗಿರುವ ಸಾಧ್ಯತೆ ಇರುವುದರಿಂದ ಮುಂದೆ ಪ್ರತಿ ತಿಂಗಳ 4ನೇ ಶುಕ್ರವಾರ ಕಡತ ವಿಲೇವಾರಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹೇಳಿದರು.

ಸಭೆಯು ನಗರಸಭಾ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನ.17ರಂದು ನಡೆಯಿತು.ಮುಂದಿನ ದಿನಗಳಲ್ಲಿ, ನಗರಸಭೆಯಲ್ಲಿ ಕಡತ ಬಾಕಿ ಆಗಿದೆ ಎಂದು ಯಾರಿಂದಲೂ ದೂರು ಬರಬಾರದು.ಈ ನಿಟ್ಟಿನಲ್ಲಿ ಪ್ರತಿ ತಿಂಗಳ ಶುಕ್ರವಾರ ಕಡತ ವಿಲೇವಾರಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಆ ದಿನ ಪೂರ್ತಿ ಕಡತ ವಿಲೇವಾರಿಯ ಕೆಲಸ ನಡೆಯಲಿದೆ ಎಂದರು.

ಆಸ್ತಿ ಸ್ವತ್ತು ಸಮೀಕ್ಷೆ ನಡೆಸುವ ಸಂಸ್ಥೆಗೆ ಪಾವತಿ ಮೊತ್ತ ಏರಿಕೆಗೆ ಪ್ರಸ್ತಾಪ:
ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಯಂತೆ ನಗರ ಸ್ಥಳೀಯ ಸಂಸ್ಥೆಯಲ್ಲಿನ ಎಲ್ಲಾ ಆಸ್ತಿಗಳನ್ನು ಪರಿವೀಕ್ಷಣೆ ನಡೆಸಿ ಅಧಿಕೃತ ಮತ್ತು ಅನಧಿಕೃತ ಸ್ವತ್ತು ಎಂಬ ಮಾಹಿತಿಯನ್ನು ದಾಖಲೀಕರಿಸಬೇಕಾಗಿದ್ದು, ಇದಕ್ಕಾಗಿ ಸಮೀಕ್ಷೆ ನಡೆಸಲು ಸ್ವಯಂ ಸೇವಾ ಸಂಸ್ಥೆಗೆ ಅಥವಾ ಸ್ವ ಸಹಾಯ ಸಂಘಗಳಿಗೆ ನೀಡಬೇಕಾಗಿದೆ.ಆದರೆ ಸಮೀಕ್ಷೆ ನಡೆಸಲು ಪ್ರತಿಯೊಂದು ನಮೂನೆಯ ದಾಖಲಾತಿ ಸಹಿತವಾದರೆ ತಲಾ ರೂ.30 ಹಾಗೂ ಸರಿಯಾದ ದಾಖಲಾತಿ ನೀಡದಲ್ಲಿ ರೂ.10 ಪಾವತಿಸಲು ಅವಕಾಶವಿದೆ.ಈ ಪಾವತಿ ಹಣವನ್ನು ಹೆಚ್ಚುಗೊಳಿಸಬೇಕು ಎಂದು ಸದಸ್ಯರು ಪ್ರಸ್ತಾಪಿಸಿದರು.ಸದಸ್ಯರಾದ ಭಾಮಿ ಅಶೋಕ ಶೆಣೈ ಮತ್ತು ಶಕ್ತಿ ಸಿನ್ಹಾ ಅವರು ಈ ಬಗ್ಗೆ ಸ್ಪಷ್ಟತೆಯನ್ನು ಬಯಸಿದರು.ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ನಗರಸಭೆಯಲ್ಲಿ ಒಟ್ಟು 24857 ಆಸ್ತಿ ಖಾತೆಗಳಿವೆ.ಈ ಪೈಕಿ ಈಗಾಗಲೇ ಶೇ.58ರಷ್ಟು ನೋಂದಣಿಯಾಗಿದೆ.ಈಗಾಗಲೇ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಯಂತೆ ಸ್ವಯಂ ಸೇವಾ ಸಂಸ್ಥೆ ಅಥವಾ ಸ್ವ ಸಹಾಯ ಸಂಘಗಳ ಮೂಲಕ ಈ ಬಗ್ಗೆ ಸಮರ್ಪಕ ಸಮೀಕ್ಷೆ ನಡೆಸಿ ದಾಖಲಿಸಿಕೊಳ್ಳಬೇಕಾಗಿದೆ.ಈ ಸಮೀಕ್ಷೆಗೆ ದಾಖಲೆ ಸಹಿತ ಪರಿವೀಕ್ಷಣಾ ನಮೂನೆಗೆ ರೂ.30 ಮತ್ತು ದಾಖಲೆರಹಿತ ಪರಿವೀಕ್ಷಣಾ ನಮೂನೆ ಸಂಗ್ರಹಕ್ಕೆ ರೂ.10ರಂತೆ ಪಾವತಿಸಲು ಸುತ್ತೋಲೆಯಲ್ಲಿ ತಿಳಿಸಿದೆ ಎಂದು ಮಾಹಿತಿ ನೀಡಿದರು.ಅದನ್ನು ಹೆಚ್ಚುಗೊಳಿಸುವಂತೆ ಅಥವಾ ರೂ.10ರ ಬದಲು ಸಮಾನವಾಗಿ ಪಾವತಿಸುವಂತೆ ಸದಸ್ಯರಾದ ಭಾಮಿ ಅಶೋಕ ಶೆಣೈ ಮತ್ತು ಶಕ್ತಿ ಸಿನ್ಹಾ ಪ್ರಸ್ತಾಪಿಸಿದರು.ಅಧ್ಯಕ್ಷರು ಮಾತನಾಡಿ ನಮೂನೆ ಸಂಗ್ರಹಕ್ಕೆ ಪಾವತಿ ಮೊತ್ತ ಕಡಿಮೆಯಾಗಿದೆ ಎಂಬುದು ನಮ್ಮ ಗಮನಕ್ಕೂ ಬಂದಿದೆ.ಕಾನೂನಿನ ಚೌಕಟ್ಟಿನಲ್ಲಿ ಅವಕಾಶವಿದ್ದಲ್ಲಿ ಅದನ್ನು ನಗರಸಭೆ ನಿಧಿಯಿಂದ ಕೊಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಾಡಿಗೆ ಜೊತೆ ತ್ಯಾಜ್ಯ ಸಂಗ್ರಹಣಾ ಶುಲ್ಕ ವಸೂಲಿ:
ನಗರಸಭಾ ವ್ಯಾಪ್ತಿಯ ಮಂಗಲ್‌ಪಾಂಡೆ ಚೌಕದ ಬಳಿ ಹಾಗೂ ಕಿಲ್ಲೆ ಮೈದಾನದಲ್ಲಿ ವಿವಿಧ ಸಂಘ ಸಂಸ್ಥೆ, ಸಂಘಟನೆಗಳೀಗೆ ಪ್ರತಿಭಟನೆ ಇನ್ನಿತರ ಕಾರ್ಯಕ್ರಮ ನಡೆಸಲು ಬಾಡಿಗೆ ಆಧಾರದಲ್ಲಿ ನೀಡಲಾಗುತ್ತಿದ್ದು, ಇದರೊಂದಿಗೆ ಈ ಸಂದರ್ಭದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ವಿಲೇವಾರಿಗಾಗಿ ರಾಜ್ಯ ನಗರಾಭಿವೃದ್ಧಿ ಇಲಾಖೆಯ ನಿರ್ದೇಶನದಂತೆ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ವಸೂಲಿ ಮಾಡುವ ಬಗ್ಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.ಪೌರ ಕಾರ್ಮಿಕರನ್ನು ನೇಮಕಾತಿ ಮಾಡುವ ಸಂದರ್ಭದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸದಸ್ಯ ಶಕ್ತಿ ಸಿನ್ಹಾ ಅವರು ಅಧ್ಯಕ್ಷರಲ್ಲಿ ವಿನಂತಿಸಿದರು.ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪೌರಾಯುಕ್ತ ಮಧು ಎಸ್ ಮನೋಹರ್ ಕಲಾಪ ನಿರ್ವಹಿಸಿದರು.ನಗರಸಭೆ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಮೋಹಿನಿ ವಿಶ್ವನಾಥ್, ಶಿವರಾಮ್ ಎಸ್, ವಸಂತ ಕಾರೆಕ್ಕಾಡು, ಗೌರಿ ಬನ್ನೂರು, ಫಾತಿಮತ್ ಝೋರಾ, ಲೀಲಾವತಿ, ಸುಂದರ ಪೂಜಾರಿ, ರೋಬಿನ್ ತಾವ್ರೋ, ಪ್ರೇಮ್ ಕುಮಾರ್, ಪದ್ಮನಾಭ ಪಡೀಲು,ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್, ಯಶೋಧ ಹರೀಶ್, ದೀಕ್ಷಾ ಪೈ, ಮನೋಹರ್ ಕಲ್ಲಾರೆ, ರೋಹಿಣಿ ಕೇಶವ ಪೂಜಾರಿ, ಮಮತಾರಂಜನ್, ಬಿ.ಶೈಲಾ ಪೈ, ಇಸುಬು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಉಚ್ಚ ನ್ಯಾಯಾಲಯದಲ್ಲಿ 19 ಮೊಕದ್ದಮೆಗಳು
ನಗರಸಭೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ 19 ಮೊಕದ್ದಮೆಗಳು ಉಚ್ಚ ನ್ಯಾಯಾಲಯ ಹಾಗೂ 30 ಮೊಕದ್ದಮೆಗಳು ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿವೆ.ಮುಂದಿನ ಸಭೆಯಲ್ಲಿ ಈ ಕುರಿತು ಸಮಗ್ರ ಮಾಹಿತಿಯನ್ನು ಎಲ್ಲಾ ಸದಸ್ಯರ ಗಮನಕ್ಕೆ ತರಲಾಗುವುದು ಎಂದು ಅಧ್ಯಕ್ಷರು ಸದಸ್ಯರ ಪ್ರಶ್ನಗೆ ಉತ್ತರಿಸುತ್ತಾ ತಿಳಿಸಿದರು.

LEAVE A REPLY

Please enter your comment!
Please enter your name here