ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಮುದಾಯ ಆರೋಗ್ಯ ಅಧಿಕಾರಿ (ಸಿಎಚ್‌ಓ)ಗಳಿಂದ ಮಂಗಳೂರು ಆರೋಗ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ

0

ಪುತ್ತೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ನಾಟಕದಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿ(ನೌಕರರು)ಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದಿಂದ ನ.18ರಂದು ರಾಜ್ಯದಾದ್ಯಂತ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲಾ ಸಂಘದ ವತಿಯಿಂದ ಮಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಮುಂಭಾಗದಲ್ಲಿ ಎಲ್ಲಾ ಸಮುದಾಯ ಆರೋಗ್ಯಾಧಿಕಾರಿಗಳು ಕರ್ತವ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.


ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ನಾಟಕದಾದ್ಯಂತ ಎಲ್ಲಾ ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಿ, ಇವುಗಳ ನಿರ್ವಹಣೆಗಾಗಿ ರಾಜ್ಯದಲ್ಲಿ ಪ್ರಸ್ತುತ 6182 ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಒಳಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ಜವಾಬ್ದಾರಿ, ಕರ್ತವ್ಯ ಹಾಗೂ ಕಾರ್ಯಚಟುವಟಿಕೆ ನಿಭಾಯಿಸಲು ಕೇಂದ್ರ ಸರಕಾರವು ಪ್ರತ್ಯೇಕ ನಿಯಮ ರಚಿಸಿ ಕಾಲಕಾಲಕ್ಕೆ ಸಿಪಿಎಚ್‌ಸಿ-ಯುಎಚ್‌ಸಿ ಹಾಗೂ ಎಬಿ-ಹೆಚ್‌ಡಬ್ಯೂಸಿ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದರೂ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ದಿನನಿತ್ಯದ ಕರ್ತವ್ಯವನ್ನು ಹೊರತುಪಡಿಸಿ ನಮ್ಮನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇತರ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಉದ್ದೇಶಿತ ಯೋಜನೆಗೆ ಅಡ್ಡಿಪಡಿಸುತ್ತಿದ್ದು, ನಮ್ಮನ್ನು ನೇಮಕ ಹುದ್ದೆಯಲ್ಲಿಯೇ ಮುಂದುವರೆಸಬೇಕು. ಕೇಂದ್ರ ಸರ್ಕಾರದ ಸಲಹೆಯಂತೆ ಹಾಗೂ ಮಾರ್ಗಸೂಚಿ ನಿಯಮಾವಳಿಗಳ ಪ್ರಕಾರ ಖಾಯಂಗೊಳಿಸಬೇಕು ಅಥವಾ ಅಲ್ಲಿಯವರೆಗೆ ಎಲ್ಲಾ ಸಿಎಚ್‌ಒಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ’ ಜಾರಿಗೆ ತರಬೇಕು. ಸಿಎಚ್‌ಒಗಳ ಕಾರ್ಯಕ್ಷಮತೆ ಆಧಾರಿತ ತಿಂಗಳ ಮಾಸಿಕ ಪ್ರೋತ್ಸಾಹಧನ 15000 ರೂಪಾಯಿಗಳನ್ನು ಇತರೆ ಬೇರೆ ರಾಜ್ಯಗಳಲ್ಲಿ ಪಾವತಿಸುತ್ತಿದ್ದು ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ನೀಡಬೇಕು, ಜನ್ ಆರೋಗ್ಯ ಸಮಿತಿ ರಚಿಸಿ ನಿಯಮಾವಳಿ ಪ್ರಕಾರ ಮುಕ್ತ ನಿಧಿ ಹಾಗೂ ಆರೋಗ್ಯ, ಮತ್ತು ಕ್ಷೇಮ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು ಮತ್ತು ಕೇಂದ್ರ ನಿರ್ವಹಣೆಗೆ ಬೇಕಾಗುವ ಸಾಮಾಗ್ರಿಗಳನ್ನು ಒದಗಿಸಲು ಮುಂದಾಗಬೇಕು, ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಿಬ್ಬಂದಿ ಕೆಲಸದ ನಿಯಮಗಳ ಮಾದರಿಯನ್ನು ಅಧಿಕೃತವಾಗಿ ರಾಜ್ಯಮಟ್ಟದಿಂದ ಬಿಡುಗಡೆಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಪುತ್ತೂರಿನಲ್ಲಿ 54 ಮಂದಿ ಸಮುದಾಯ ಆರೋಗ್ಯ ಅಧಿಕಾರಿಗಳು ಸೇರಿದಂತೆ ಜಿಲ್ಲೆಯಲ್ಲಿ 317 ಮಂದಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲರೂ ತಮ್ಮ ಕರ್ತವ್ಯವವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದಾಗಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷೆ ಜ್ಯೋತಿ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here