ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿ ಸಮಗ್ರ ಒಣತ್ಯಾಜ್ಯ ನಿರ್ವಹಣಾ ಘಟಕದ ಶಿಲಾನ್ಯಾಸ

ಹಳ್ಳಿಯ ಮೂಲೆ ಮೂಲೆಯಲ್ಲೂ ಸ್ವಚ್ಚಮೇವ ಜಯತೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು: ಶಾಸಕ ಮಠಂದೂರು

ಪುತ್ತೂರು: ಸ್ವಚ್ಚ ಭಾರತ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯಾಗಿದೆ, ಸ್ವಚ್ಚ ಭಾರತವೇ ಜಗದ್ಗುರು ಭಾರತವಾಗಬೇಕಿದ್ದು ಇದಕ್ಕಾಗಿ ಹಳ್ಳಿಯ ಮೂಲೆ ಮೂಲೆಗಳಲ್ಲಿ ಸ್ವಚ್ಚಮೇವ ಜಯತೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದ್ದು ಜನತೆಯ ಸಂಪೂರ್ಣ ಸಹಕಾರ ಅತ್ಯಗತ್ಯವಾಗಿದೆ ಎಂದು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಹೇಳಿದರು.

ಅವರು ನ.18 ರಂದು ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ ಕ ಜಿಲ್ಲಾ ಪಂಚಾಯತ್, ಪುತ್ತೂರು, ಸುಳ್ಯ, ಕಡಬ ತಾಲೂಕು ಪಂಚಾಯತ್ ಮತ್ತು ಕೆದಂಬಾಡಿ ಗ್ರಾಪಂ ಇದರ ಸಹಯೋಗದಲ್ಲಿ ನಡೆದ ಸಮಗ್ರ ಒಣತ್ಯಾಜ್ಯ ನಿರ್ವಹಣಾ ಘಟಕದ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಧಾನಿಯವರು ಮಿಸ್ಟರ್ ಕ್ಲೀನ್ ಮೋದಿ ಎಂಬಂತೆ ಭಾರತವೂ ಸ್ಚಚ್ಚವಾಗುವತ್ತ ದಾಪುಗಾಲಿಡುತ್ತಿದೆ. ಸ್ವಚ್ಚ ಭಾರತ ಕಲ್ಪನೆ ಯಂತೆ ಕೇಂದ್ರ ಸರಕಾರವು ಗ್ರಾಮಗಳಲ್ಲಿ ಸ್ವಚ್ಚತೆಗೆ ಹೆಚ್ಚು ಆಧ್ಯತೆ ನೀಡುತ್ತಿದ್ದು ರಾಜ್ಯ ಸರಕಾರಕ್ಕಿಂತ ಹೆಚ್ಚು ಅನುದಾನವನ್ನು ಕೇಂದ್ರ ಸರಕಾರ ನೀಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಉದ್ಯೋಗ ಖಾತರಿ ಯೊಜನೆ , ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿಗಾಗಿ ಪುತ್ತೂರು ತಾಲೂಕಿಗೆ 67 ಕೋಟಿ ರೂ ಅನುದಾನವನ್ನು ಸರಕಾರ ನೀಡಿದೆ.ಕೇಂದ್ರ ಮತ್ತು ರಾಜ್ಯ ಸರಕಾರದ ಸಹಬಾಗಿತ್ವದಲ್ಲಿ ಗ್ರಾಮಗಳಲ್ಲಿ ಸ್ವಚ್ಚತೆ, ಆರೋಗ್ಯ ಮತ್ತು ಶುದ್ದ ಕುಡಿಯುವ ನೀರು ಪೂರೈಕೆಯಲ್ಲಿ ಉತ್ತಮ ಕೆಲಸಕಾರ್ಯಗಳು ನಡೆಯುತ್ತಿದ್ದು ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಸ್ವಚ್ಚತೆಯಲ್ಲಿ ವಿಶ್ವಗುರುವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.

ತ್ಯಾಜ್ಯ ಘಟಕದಿಂದ ಯಾವುದೇ ತೊಂದರೆಯಿಲ್ಲ
ಬೋಳೋಡಿಯಲ್ಲಿ ನಿರ್ಮಾಣವಾಗುತ್ತಿರುವ ಘಟಕ ಮುಂಡೂರು ಗ್ರಾಮಕ್ಕೆ ಮಂಜೂರಾಗಿತ್ತು. ಸರ್ವೆಯಲ್ಲಿ ಜಾಗ ಗುರುತಿಸಿದ್ದರೂ ಅಲ್ಲಿ ಕೆಲವರಿಂದ ಆಕ್ಷೇಪ ವ್ಯಕ್ತವಾದ ಕಾರಣ ಕೆದಂಬಾಡಿ ಗ್ರಾಮಕ್ಕೆ ಸ್ಥಳಾಂತರವಾಗಿದೆ. ಇಲ್ಲಿ ನಿರ್ಮಾಣವಾಗುವ ಘಟಕದಿಂದ ಪರಿಸರಕ್ಕೆ ಯಾವುದೇ ತೊಂದರೆಯಿಲ್ಲ, ಹತ್ತಿರದಲ್ಲಿರುವ ಮನೆಗಳಿಗೂ ಯಾವುದೇ ತೊಂದರೆಯಾಗುವುದಿಲ್ಲ. ಸಂಪೂರ್ಣವಾಗಿ ವೈಜ್ಞಾನಿಕವಾಗಿ ಘಟಕದಲ್ಲಿ ಕೆಲಸಗಳು ನಡೆಯಲಿದೆ. ಇಲ್ಲಿನ ಘಟಕದಿಂದ ಸ್ಥಳೀಯವಾಗಿ 25 ಮಂದಿಗೆ ಸಾಮಾಜಿಕ ಭದ್ರತೆಯುಳ್ಳ ಉದ್ಯೋಗವೂ ಲಭಿಸಲಿದೆ. ಇದೇ ಕಾರಣಕ್ಕೆ ಗ್ರಾಮದಲ್ಲಿರುವ ರಸ್ತೆಗಳು ಅಬಿವೃದ್ದಿಯಾಗಲಿದೆ. ಒಟ್ಟಿನಲ್ಲಿ ಇಲ್ಲಿ ನಿರ್ಮಾಣವಾಗುತ್ತಿರುವ ತ್ಯಾಜ್ಯ ನಿರ್ವಹಣಾ ಘಟಕವು ಗ್ರಾಮದ ಅಭಿವೃದ್ದಿಗೆ ಪೂರಕವಾಗಿದೆ ಎಂದು ಹೇಳಿದರು.

ಶಾಸಕರಿಂದ ಕ್ಷೇತ್ರಕ್ಕೆ 1100 ಕೋಟಿ ಅನುದಾನ: ಚನಿಲ ತಿಮ್ಮಪ್ಪ ಶೆಟ್ಟಿ
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರಾವಳಿ ಪ್ರಾಧಿಕಾರ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ ಸಂಜೀವ ಮಠಂದೂರು ಶಾಸಕರಾದ ಬಳಿಕ ಪುತ್ತೂರು ಅತೀ ಹೆಚ್ಚು ಅಭಿವೃದ್ದಿ ಕಂಡಿದೆ. ನಾಲ್ಕೂವರೆ ವರ್ಷದಲ್ಲಿ 1100 ಕೋಟಿ ಅನುದಾನವನ್ನು ತಂದಿದ್ದು ಕ್ಷೇತ್ರದ ಪ್ರತೀಯೊಂದು ಗ್ರಾಮಕ್ಕೂ ಅನುದಾನವನ್ನು ಹಂಚುವ ಮೂಲಕ ರಾಜಧರ್ಮವನ್ನು ಪಾಲಿಸಿದ್ದಾರೆ.

ಪ್ರಧಾನಿ ಮೋದಿಯವರ ಕಲ್ಪನೆ ಹಳ್ಳಿಹಳ್ಳಿಗಳಲ್ಲಿ ಸಾಕಾರಗೊಳ್ಳುತ್ತಿದೆ. ದೇಶ ಇಂದು ಬಯಲು ಶೌಚಾಲಯ ಮುಕ್ತವಾಗುತ್ತಿದೆ. ಸ್ವಚ್ಚತೆ, ಆರೋಗ್ಯ ಮತ್ತು ಶುದ್ದ ಕುಡಿಯುವ ನೀರು ಪೂರೈಕೆಯನ್ನು ಮಾಡುವಲ್ಲಿ ಕೇಂದ್ರ ಸರಕಾರ ಮುತುವರ್ಜಿವಹಿಸುತ್ತಿದ್ದು ಜಲಜೀವನ್ ಯೋಜನೆಯಲ್ಲಿ ಗ್ರಾಮದ ಪ್ರತೀ ಮನೆ ಮನೆಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಇದಕ್ಕಾಗಿ ಕೋಟ್ಯಂತರ ಅನುದಾನವನ್ನು ಕೇಂದ್ರ ಸರಕಾರ ಒದಗಿಸಿದೆ ಎಂದು ಹೇಳಿದರು.ಒಣ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯಿಂದ ಪರಿಸರಕ್ಕೆ ಹಾನಿಯಿಲ್ಲ ಎಂಬುದನ್ನು ಪರಿಶೀಲನೆ ಮಾಡಿಯೇ ಇಲ್ಲಿ ಘಟಕಕ್ಕೆ ಅನುಮತಿಯನ್ನು ನೀಡಲಾಗಿದೆ. ಕಸವನ್ನು ಇಲ್ಲಿ ತಂದು ಸುರಿಯುವುದಲ್ಲ ಅದನ್ನು ಬೇರ್ಪಡಿಸುವ ಕಾರ್ಯ ಮಾತ್ರ ಇಲ್ಲಿ ನಡೆಯಲಿದ್ದು ಸ್ಥಳೀಯರಿಗೆ ಉದ್ಯೋಗವೂ ಲಭಿಸುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.

30 ವಿಧಗಳಾಗಿ ತ್ಯಾಜ್ಯದ ವಿಂಗಡನೆ
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಬಿಎಂ ಜಿಲ್ಲಾ ಸಮಾಲೋಚಕರಾದ ನವೀನ್ ರವರು  ಮಾತನಾಡಿ ಘಟಕವು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿನ 68 ಗ್ರಾಮಗಳಿಂದ ಸಂಗ್ರಹವಾದ ತ್ಯಾಜ್ಯಗಳನ್ನು ಟ್ರಕ್‌ಗಳ ಮೂಲಕ ತರಲಾಗುತ್ತದೆ. ಇಲ್ಲಿ ಬಂದ ತ್ಯಾಜ್ಯವನ್ನು 30 ವಿಧವಾಗಿ ವಿಂಗಡಿಸಿ ಅದರಲ್ಲಿ ಉಳಿದ ವೇಸ್ಟ್ ತ್ಯಾಜ್ಯವನ್ನು ಸಿಮೆಂಟ್ ಉತ್ಪಾದನಾ ಕಾರ್ಖಾನೆಗಳಿಗೆ ನೀಡಲಾಗುತ್ತದೆ. ಮಾನವ ಶಕ್ತಿ ಮತ್ತು ಯಂತ್ರಗಳನ್ನು ಬಳಸಿ ಇಲ್ಲಿ ತ್ಯಾಜ್ಯವನ್ನು ವಿಂಗಡಿಸಲಾಗುತ್ತದೆ. 7000 ಚ.ಅಡಿಯ ಬೃಹತ್ ಕಟ್ಟಡ ನಿರ್ಮಾಣವಾಗಲಿದೆ.

ತ್ಯಾಜ್ಯ ನಿರ್ವಹಣಾ ಘಟಕ ಕೇಂದ್ರ ಸರಕಾರದ ಯೋಜನೆಯಾಗಿದ್ದು ಘಟಕದ ಆರಂಭವಾದ ಬಳಿಕ ಮೂರು ತಾಲೂಕಿನ ಪ್ರತೀ ಗ್ರಾಮಗಳ ಕಸಗಳು ಇಲ್ಲಿಗೆ ರವಾನೆಯಗುತ್ತದೆ. ಪರಿಸರಕ್ಕೆ ಹಾನಿಯಾಗುವ ಯಾವುದೇ ವಸ್ತುಗಳನ್ನು ಇಲ್ಲಿ ಬಳಕೆ ಮಾಡುತ್ತಿಲ್ಲ. ಘಟಕದಿಂದ ಯರಿಗೂ ಯಾವುದೇ ತೊಂದರೆಯುಂಟಾಗುವುದಿಲ್ಲ. ಇಲ್ಲಿ ಕಾರ್ಮಿಕರಾಗಿ ಸ್ಥಳೀಯರನ್ನೇ ನೇಮಕ ಮಾಡಲಿದ್ದೇವೆ, ಸಾಮಾಜಿಕ ಭದ್ರತೆಯುಳ್ಳ ಉದ್ಯೋಗವನ್ನು ನೀಡಲಾಗುತ್ತದೆ ಎಂದು ಹೇಳಿದ ಅವರು ಯಾವುದೇ ಕಾರಣಕ್ಕೂ ಹಸಿ ತ್ಯಾಜ್ಯವನ್ನು ಇಲ್ಲಿ ಬಳಸುತ್ತಿಲ್ಲ . ಹಸಿ ತ್ಯಾಜ್ಯವನ್ನು ಗ್ರಾಮಸ್ಥರೇ ಗೊಬ್ಬರವಾಗಿ ಬಳಸುವ ಮೂಲಕ ತ್ಯಾಜ್ಯ ಮುಕ್ತ ಗ್ರಾಮಕ್ಕೆ ಸಹಕಾರ ನೀಡಬೇಕೆಂದು ಹೇಳಿದರು.

100% ವೇಸ್ಟಲ್ಲಿ 90% ಬಳಕೆ: ನವೀನ್ ಭಂಡಾರಿ
ಇಲ್ಲಿನ ಘಟಕಕ್ಕೆ ಬರುವ 100% ಒಣ ತ್ಯಾಜ್ಯದಲ್ಲಿ ಶೇ. 90 ನ್ನು ಬಳಕೆ ಮಾಡಲಾಗುತ್ತದೆ. ವೈಜ್ಞಾನಿಕ ರೀತಿಯ ಪ್ರಯೋಗದಿಂದ ತ್ಯಾಜ್ಯವನ್ನು ಮರುಬಳಕೆ ಯೋಗ್ಯವಾಗಿ ಮಾಡಲಾಗುತ್ತದೆ. ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ ಪ್ರತೀ ಗ್ರಾಮಗಳೂ ತ್ಯಾಜ್ಯ ಮುಕ್ತವಾಗಬೇಕು, ಪರಿಸರ ಸ್ವಚ್ಚತೆಯಿಂದ ಇರಬೇಕು ಎಂಬ ಉದ್ದೇಶವೂ ಇದರ ಹಿಂದಿದ್ದು, ಮೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ತ್ಯಾಜ್ಯ ಘಟಕ ನಿರ್ಮಾಣಕ್ಕೆ ನಿವೇಶನವನ್ನು ಒದಗಿಸಲಾಗಿದೆ. ಶಾಸಕರ ಸಹಕಾರದಿಂದ ದೊಡ್ಡ ಮಟ್ಟದ ಯೋಜನೆಯೊಂದು ಪುತ್ತೂರು ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಗ್ರಾಮಸ್ಥರು, ಸಾರ್ವಜನಿಕರ ಸಂಪೂರ್ಣವಾದ ಸಹಕಾರದಿಂದ ಯೋಜನೆ ಯಸಶ್ವಿಯಾಗಲು ಸಾಧ್ಯವಾಗುತ್ತದೆ ಎಂದು ಪುತ್ತೂರು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತ್ಯಾಜ್ಯ ಘಟಕ ನಿರ್ಮಾಣದ ರುವಾರಿಯೂ ಆಗಿರುವ ಎಚ್ ನವೀನ್ ಭಂಡಾರಿ ಹೇಳಿದರು.


ಕೆದಂಬಾಡಿ ಗ್ರಾಮಕ್ಕೆ 15 ಕೋಟಿ ಅನುದಾನ; ರತನ್ ರೈ
ಸಂಜೀವ ಮಠಂದೂರು ಶಾಸಕರಾದ ನಾಲ್ಕೂವರೆ ವರ್ಷದಲ್ಲಿ ಒಟ್ಟು 15 ಕೋಟಿ ಅನುದಾನವನ್ನು ಕೆದಂಬಾಡಿ ಗ್ರಾಮಕ್ಕೆ ನೀಡಿದ್ದಾರೆ ಇದಕ್ಕಾಗಿ ಗ್ರಾಮಸ್ಥರ ಪರವಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುವುದಾಗಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ಹೇಳಿದರು.ಈ ಯೋಜನೆಯಿಂದ ಕೆದಂಬಾಡಿ ಗ್ರಾಮ ಅಭಿವೃದ್ದಿಯಾಗಲಿದೆ. ಮೂರು ತಾಲೂಕಿನ ತ್ಯಾಜ್ಯ ಸಾಗಾಟದ ಟ್ರಕ್‌ಗಳು ನಮ್ಮ ರಸ್ತೆಯಲ್ಲೇ ಸಾಗುವುದರಿಂದ ಇಲ್ಲಿನ ರಸ್ತೆಗಳು ಅಭಿವೃದ್ದಿಯಾಗಲಿದೆ ಎಂದು ಹೇಳಿದ ಅವರು ಯೋಜನೆಯಿಂದ ಗ್ರಾಮಕ್ಕೆ , ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಇಲ್ಲಿ ಘಟಕ ನಿರ್ಮಾಣಕ್ಕೆ ಕೆದಂಬಾಡಿ ಗ್ರಾಮಸ್ಥರ ಸಹಕಾರವೇ ಕಾರಣವಾಗಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

6 ತಿಂಗಳಲ್ಲಿ ಘಟಕ ಕಾರ್ಯಾರಂಭ: ರೂಪ್ಲಾ ನಾಯಕ್
ಇಲ್ಲಿನ ಘಟಕ ಆರು ತಿಂಗಳಲ್ಲೇ ಕಾರ್ಯಾರಂಭಗೊಳ್ಳಿದೆ. ಘಟಕದಲ್ಲಿ ಅಗತ್ಯವಿರುವ ಹುದ್ದೆಗಳಿಗೆ ಸ್ಥಳೀಯರನ್ನೇ ನೇಮಕ ಮಾಡಲಾಗುವುದು. ಶಾಸಕರ ಮುತುವರ್ಜಿಯಿಂದ ಇಂಥಹದೊಂದು ಘಟಕ ಪುತ್ತೂರಿಗೆ ಬಂದಿದೆ. ಈ ಘಟಕದಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಜನರಯ ಘಟಕದ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ಪುತ್ತೂರು ತಹಶಿಲ್ದಾರ್ ನಿಸರ್ಗಪ್ರಿಯ ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅತಿಥಿಗಳನ್ನು ಸವಾಗತಿಸಿದರು. ಕೆದಂಬಾಡಿ ಪಂಚಾಯತ್ ಅಭಿವೃದ್ದಿ ಅದಿಕಾರಿ ಅಜಿತ್ ವಂದಿಸಿದರು.ತಾಪಂ ಸಿಬಂದಿ ಭರತ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಕಡಮಜಲು ಸುಬಾಶ್ ರೈ, ಬೂಡಿಯಾರ್ ರಾಧಾಕೃಷ್ಣ ರೈ, ನಿತೀಶ್‌ಕುಮಾರ್ ಶಾಂತಿವನ, ಹರೀಶ್ ಬಿಜತ್ರೆ, ಅರುಣ್ ಆಳ್ವ ಬೋಳೋಡಿ, ಲೋಕೇಶ್ ಹೆಗ್ಡೆ ಪುತ್ತೂರು, ಕೆದಂಬಾಡಿ ಗ್ರಾಪಂ ಉಪಾಧ್ಯಕ್ಷ ಭಾಸ್ಕರ್ ರೈ ಮಿತ್ರಂಪಾಡಿ, ಕೆದಂಬಾಡಿ ಗ್ರಾಪಂ ಸದಸ್ಯರುಗಳು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

ಶಿಲಾನ್ಯಾಸ
ನೂತನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಶಾಸಕ ಸಂಜೀವ ಮಠಂದೂರುರವರು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಗುತ್ತಿಗೆದಾರ ರಝಾಕ್‌ರವರು ಕಲ್ಲು ಇಡುವ ಮೂಲಕ ಸಾಂಕೇತಿಕವಾಗಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು. ರವೀರಾಮ ಭಟ್ ಸನ್ಯಾಸಿಗುಡ್ಡೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಶಾಸಕ ಸಂಜೀವ ಮಠಂದೂರು ಹಾಗೂ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿಯವರನ್ನು ಶಾಲು ಹೊದಿಸಿ, ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು. ಶಾಸಕ ಸಂಜೀವ ಮಠಂದೂರು ಕಾಮಗಾರಿಯ ನಾಮಫಲಕವನ್ನು ಅನಾವರಣಗೊಳಿಸಿದದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.