ಹೈ ಅಲರ್ಟ್ ಘೋಷಣೆ: ಪುತ್ತೂರು, ಕಡಬದಲ್ಲಿಯೂ ಕಟ್ಟೆಚ್ಚರ
ಪುತ್ತೂರು: ಮಂಗಳೂರಿನ ನಾಗುರಿ ಬಳಿ ನ.19ರಂದು ಸಂಜೆ ಅಟೋ ರಿಕ್ಷಾದಲ್ಲಿ ಬಾಂಬ್ ಸ್ಫೋಟ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿಯೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
ನ.19ರಂದು ಸಂಜೆ 5 ಗಂಟೆಯ ವೇಳೆಗೆ ಮಂಗಳೂರಿನ ನಾಗುರಿಯಲ್ಲಿ ರಿಕ್ಷಾ ಸಂಚರಿಸುತ್ತಿದ್ದಾಗಲೇ ಸ್ಫೋಟ ಸಂಭವಿಸಿತ್ತು. ಚಾಲಕ ಮತ್ತು ಪ್ರಯಾಣಿಕ ಸ್ಫೋಟದಿಂದಾಗಿ ಗಂಭೀರ ಗಾಯಗೊಂಡಿದ್ದರು. ಪ್ರಾರಂಭದಲ್ಲಿ ಇದು ರಿಕ್ಷಾದಲ್ಲಿದ್ದ ಕುಕ್ಕರ್ ಸಿಡಿದು ಸಾಮಾನ್ಯವಾಗಿ ನಡೆದ ಸ್ಫೋಟ ಎಂದು ಭಾವಿಸಲಾಗಿತ್ತು. ಬಳಿಕ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ತನಿಖೆ ನಡೆದಾಗ ಈ ಸ್ಫೋಟದ ಹಿಂದೆ ಉಗ್ರರ ಕರಿ ನೆರಳು ಇರುವುದು ಗೋಚರವಾಗಿತ್ತು.
ರಿಕ್ಷಾದಲ್ಲಿ ಸಾಗಿಸುತ್ತಿದ್ದ ಕುಕ್ಕರ್ ಜತೆ ಇತರ ಸ್ಫೋಟಕ ಸಾಮಾಗ್ರಿಗಳು ಪತ್ತೆಯಾಗಿರುವುದು ಇದಕ್ಕೆ ಪುಷ್ಠಿ ನೀಡಿತ್ತು. ರಿಕ್ಷಾ ಚಾಲಕ ಪುರುಷೋತ್ತಮ ಎಂಬವರ ಅರಿವಿಗೆ ಬಾರದೆ ರಿಕ್ಷಾದಲ್ಲಿ ಬಾಂಬ್ ಸಾಗಿಸಲಾಗಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿತ್ತು. ಅಲ್ಲದೆ, ರಿಕ್ಷಾದಲ್ಲಿ ಬಾಂಬ್ ಸಾಗಾಟ ಮಾಡಿ ಗಾಯಗೊಂಡಿರುವ ವ್ಯಕ್ತಿ ಹುಬ್ಬಳ್ಳಿಯ ಯುವಕನೋರ್ವನ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಹೊಂದಿರುವುದು ಬಯಲಾಗಿತ್ತು. ರಿಕ್ಷಾದಲ್ಲಿ ಬಾಂಬ್ ಸಾಗಿಸಿ ಜನನಿಬಿಡ ಪ್ರದೇಶದಲ್ಲಿ ಸ್ಫೋಟಿಸುವುದು ಉಗ್ರರ ಯೋಜನೆಯಾಗಿತ್ತು. ಆದರೆ, ರಿಕ್ಷಾದಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡು ಯೋಜನೆ ವಿಫಲವಾಗಿತ್ತು.
ಸ್ವಾತಂತ್ರ್ಯ ಹೋರಾಟಗಾರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಸಾವಿರಾರು ಮಂದಿ ಭಾಗವಹಿಸಿದ್ದ ಕಾರ್ಯಕ್ರಮದ ದಿನದಂದೇ ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು ಜನರನ್ನು ಬೆಚ್ಚಿ ಬೀಳಿಸಿತ್ತು. ಕೂಡಲೇ ಹೈ ಅಲರ್ಟ್ ಘೋಷಿಸಿದ್ದ ಪೊಲೀಸ್ ಇಲಾಖೆಯ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಆದೇಶಿಸಿದ್ದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು ಪೊಲೀಸರ ತಂಡ ರಚಿಸಲಾಗಿದೆ. ಗಂಭೀರ ಗಾಯಗೊಂಡಿರುವ ರಿಕ್ಷಾ ಚಾಲಕ ಪುರುಷೋತ್ತಮರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಮನೆಯವರಿಗೂ ಆಸ್ಪತ್ರೆಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿಲ್ಲ. ಇನ್ನೊಂದೆಡೆ ರಿಕ್ಷಾದಲ್ಲಿ ಬಾಂಬ್ ಸಾಗಿಸಿ ಸ್ಫೋಟದಲ್ಲಿ ಗಂಭೀರ ಗಾಯಗೊಂಡು ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ಶಂಕಿತ ಉಗ್ರನ ಗುರುತು ಪತ್ತೆಗೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇತ್ತೀಚೆಗೆ ಬಾಂಬ್ ಸ್ಫೋಟದ ಟ್ರಯಲ್ ನಡೆಸಿದ್ದ ಆರೋಪದಡಿ ಪೊಲೀಸ್ ವಶವಾಗಿದ್ದವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಲಾಗುತ್ತಿದೆ. ನಿಷೇಧಿತ ಪಿಎಫ್ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಮೈಸೂರು, ಬೆಂಗಳೂರಿಗೂ ತನಿಖೆಯನ್ನು ವಿಸ್ತರಿಸಿದ್ದಾರೆ.
ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆ ಕರ್ನಾಟಕ ಪೊಲೀಸರ ಜತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳೂ ಕೈ ಜೋಡಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಎಸ್ಪಿ ಹೃಷಿಕೇಶ್ ಸೋನಾವಣೆ ಮತ್ತು ಅಡಿಷನಲ್ ಎಸ್ಪಿ ಕುಮಾರಚಂದ್ರ ನೇತೃತ್ವದಲ್ಲಿ ಬಂದೋಬಸ್ತ್ ಕಾರ್ಯ ಏರ್ಪಡಿಸಲಾಗಿದೆ. ಪುತ್ತೂರು ಮತ್ತು ಕಡಬ ತಾಲೂಕಿನ ಆಯ್ದ ಸ್ಥಳಗಳಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಗುಪ್ತಚರ ಇಲಾಖೆ ಕೂಡ ವಿವಿದೆಡೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ