ಪುತ್ತೂರು: ಪಶ್ಚಿಮ ವಲಯ ಐಜಿಪಿಯಾಗಿ ಡಾ. ಚಂದ್ರಗುಪ್ತ ನ.20ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲಾ ವ್ಯಾಪ್ತಿಯ ಪಶ್ಚಿಮ ವಲಯ ಐಜಿಪಿಯಾಗಿ ಕರ್ತವ್ಯಕ್ಕೆ ಹಾಜರಾಗಿರುವ ಡಾ. ಚಂದ್ರಗುಪ್ತ ಅವರು ಈ ಹಿಂದೆ ಪುತ್ತೂರು ಎಎಸ್ಪಿಯಾಗಿದ್ದರು. ಆ ಸಂದರ್ಭದಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸರಣಿ ಸ್ತ್ರೀ ಹಂತಕ ಸೈನೆಡ್ ಮೋಹನ್ ಪ್ರಕರಣದ ತನಿಖಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ವಿವಿದೆಡೆ ಕಾರ್ಯ ನಿರ್ವಹಿಸಿದ್ದ ಚಂದ್ರಗುಪ್ತರವರು ಮೈಸೂರು ಪೊಲೀಸ್ ಕಮೀಷನರ್ ಆಗಿದ್ದರು. ಅಲ್ಲಿಂದ ವರ್ಗಾವಣೆಗೊಂಡು ಪಶ್ಚಿಮ ವಲಯ ಐಜಿಯಾಗಿ ಮಂಗಳೂರು ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಚಂದ್ರಗುಪ್ತರವರು ನ.19ರಂದು ಮಂಗಳೂರು ನಾಗುರಿ ಸಮೀಪ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಫೋಟದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಹಿಂದೆ ಪುತ್ತೂರು ಎಸ್ಪಿಯಾಗಿ ಕಾರ್ಯ ನಿರ್ವಹಿಸಿ ಬಳಿಕ ವಿವಿದೆಡೆ ಕಾರ್ಯ ನಿರ್ವಹಿಸಿ ಎರಡು ವರ್ಷಗಳಿಂದ ಪಶ್ಚಿಮ ವಲಯ ಐಜಿಪಿಯಾಗಿದ್ದ ದೇವಜ್ಯೋತಿ ರೇಯವರು ಡಾ.ಚಂದ್ರಗುಪ್ತ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ದೇವಜ್ಯೋತಿ ರೇ ಅವರು ಬೆಂಗಳೂರಿನ ಮಾನವ ಹಕ್ಕು ಘಟಕಕ್ಕೆ ವರ್ಗಾವಣೆಗೊಂಡಿದ್ದಾರೆ.