ದಂತ ವೈದ್ಯ ಡಾ.ಕೃಷ್ಣಮೂರ್ತಿಯವರ ನಿಗೂಢ ಸಾವಿನ ಪ್ರಕರಣ : ಮುಂದುವರಿದ ಪೊಲೀಸ್ ತನಿಖೆ; ಕನ್ನಡಕ, ಚಪ್ಪಲಿ, ಬೆಲ್ಟ್ ಪತ್ತೆ, ನಾಪತ್ತೆಯಾಗಿರುವ ಬ್ಯಾಗ್‌ಗಾಗಿ ಹುಡುಕಾಟ

0

  • ಡಾ.ಕೃಷ್ಣಮೂರ್ತಿ ಬಸ್ಸಿನಲ್ಲಿ ಹೋಗುವ ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆ

 


ಡಾ.ಕೃಷ್ಣಮೂರ್ತಿ

ಪುತ್ತೂರು: ಮೂಲತ: ಪುತ್ತೂರಿನವರಾಗಿದ್ದು ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಸುಮಾರು 30 ವರ್ಷಗಳಿಂದ ದಂತ ವೈದ್ಯರಾಗಿದ್ದ ಡಾ. ಕೃಷ್ಣಮೂರ್ತಿ ಸರ್ಪಂಗಳ(57ವ.)ರವರ ನಿಗೂಢ ಸಾವಿಗೆ ಸಂಬಂಧಿಸಿ ಕುಂದಾಪುರ ಮತ್ತು ಬದಿಯಡ್ಕ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಡಾ.ಕೃಷ್ಣಮೂರ್ತಿಯವರ ಬ್ಯಾಗ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ನ.8ರಂದು ಬದಿಯಡ್ಕದ ತಮ್ಮ ಕ್ಲಿನಿಕ್‌ನಿಂದ ನಾಪತ್ತೆಯಾಗಿದ್ದ ಡಾ.ಕೃಷ್ಣಮೂರ್ತಿಯವರ ಛಿದ್ರಗೊಂಡ ದೇಹ ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲು ಹಳಿಯಲ್ಲಿ ನ.10ರಂದು ಪತ್ತೆಯಾಗಿತ್ತು. ಅವರ ಪುತ್ರಿ ವರ್ಷಾ ಸಹಿತ ಕುಟುಂಬಿಕರು ಮೃತದೇಹವನ್ನು ಗುರುತಿಸಿದ್ದರು. ಡಾ.ಕೃಷ್ಣಮೂರ್ತಿ ಅವರು ಸಾವು ಸಂಭವಿಸುವ ಮುನ್ನ ಕುಂದಾಪುರದಿಂದ ಬಸ್ಸಿನಲ್ಲಿ ಸಿದ್ದಾಪುರದ ಕಡೆಗೆ ಬಂದಿದ್ದರು ಎಂದು ಪೊಲೀಸರ ತಂಡ ಮಾಹಿತಿ‌ ಕಲೆ ಹಾಕಿದೆ. ಕೃಷ್ಣಮೂರ್ತಿ ಅವರು ಬ್ಯಾಗ್ ಹೊಂದಿದ್ದರು ಎನ್ನುವುದು ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿರುವ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಆದರೆ ಬ್ಯಾಗ್ ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಗ್‌ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಬ್ಯಾಗ್ ಸಿಕ್ಕರೆ ಅದರಲ್ಲಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದಾದರೂ ಮಹತ್ತರವಾದ ಸುಳಿವು ಸಿಗಬಹುದು ಎಂಬುದು ಪೊಲೀಸರ ಆಲೋಚನೆಯಾಗಿದೆ. ತನಿಖೆ ಕುರಿತಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ಅವರು ಕುಂದಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ತನಿಖೆ ಹಂತದಲ್ಲಿರುವುದರಿಂದ ಈಗಲೇ ಏನು ಹೇಳಲು ಆಗುವುದಿಲ್ಲ. ತನಿಖೆ ಪೂರ್ಣವಾದ ಬಳಿಕವೇ ಮಾಹಿತಿ ನೀಡಲಾಗುವುದು ಎಂದಿದ್ದಾರೆ.

ರೈಲು ನಿಲ್ದಾಣದ ದಾರಿ ವಿಚಾರಿಸಿದ್ದರು:
ಕುಂದಾಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಬಂದ ಕೃಷ್ಣಮೂರ್ತಿ ಅವರು ಕುಂದಾಪುರ ಬಸ್ ನಿಲ್ದಾಣ ತಲುಪಿದ್ದು ಬಳಿಕ ಶಾಸ್ತ್ರಿ ಸರ್ಕಲ್‌ಗೆ ಬಂದು ಸಾರ್ವಜನಿಕರೊಬ್ಬರ ಬಳಿ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದ್ದರು. ಬಳಿಕ ಸಿದ್ದಾಪುರ ಕಡೆಗೆ ತೆರಳುವ ಖಾಸಗಿ ಬಸ್ಸಿನಲ್ಲಿ ತೆರಳಿರುವುದು ಸಿಸಿ ಕೆಮೆರಾದಲ್ಲಿ ಸೆರೆಯಾಗಿದೆ. ಮೂಡ್ಲಕಟ್ಟೆ ಅಥವಾ ದಾರಿಮಧ್ಯೆ ಎಲ್ಲಿಯೋ ಇಳಿದು ಅಲ್ಲಿಂದ ರೈಲು ಹಳಿಯಲ್ಲಿಯೇ ಹಟ್ಟಿಯಂಗಡಿಯವರೆಗೆ ನಡೆದು ಹೋಗಿರಬಹುದೇ ಅನ್ನುವ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಡಾ.ಕೃಷ್ಣಮೂರ್ತಿಯವರ ಛಿದ್ರಗೊಂಡ ದೇಹ ಪತ್ತೆಯಾದ ರೈಲು ಹಳಿಯಲ್ಲಿ ಮರು ಪರಿಶೀಲನೆ ವೇಳೆ ಕೃಷ್ಣಮೂರ್ತಿ ಅವರು ಧರಿಸಿದ್ದ ಕನ್ನಡಕ, ಚಪ್ಪಲಿ ಹಾಗೂ ಬೆಲ್ಟ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

*ಬೇಕಲ್ ಪೊಲೀಸರಿಂದ ಬಂಧಿತರ ಕಾಲ್‌ಲಿಸ್ಟ್ ಪರಿಶೀಲನೆ*

ಪುತ್ತೂರಿನ ಖ್ಯಾತ ವೈದ್ಯರಾದ ಡಾ. ರಾಮಮೋಹನ್ ಮತ್ತು ಡಾ. ಅರವಿಂದ್ ಅವರ ಸಹೋದರ ಡಾ.ಕೃಷ್ಣಮೂರ್ತಿಯವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದಲ್ಲಿ ತ‌ನಿಝೆ ನಡೆಯುತ್ತಿದ್ದು ಇತ್ತ ಬೇಕಲ್ ಡಿವೈಎಸ್ಪಿ ಸುನಿಲ್‌ಕುಮಾರ್ ನೇತೃತ್ವದಲ್ಲಿ ಕಾಸರಗೋಡು ಬದಿಯಡ್ಕದಲ್ಲಿ ತನಿಖೆ ಮುಂದುವರಿಯುತ್ತಿದೆ. ಈಗಾಗಲೇ ಪ್ರಾಥಮಿಕ ತನಿಖೆ ಪೂರ್ಣಗೊಳಿಸಿರುವ ಬೇಕಲ್ ಪೊಲೀಸರು, ಸಿಸಿ ಕೆಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಡಾ. ಕೃಷ್ಣಮೂರ್ತಿ ಅವರು ಕುಂಬಳೆ ತನಕ ಬೈಕ್‌ನಲ್ಲಿ ತೆರಳಿರುವುದು ದೃಢಗೊಂಡಿದೆ. ಈ ಮಧ್ಯೆ ವೈದ್ಯರಿಗೆ ಬೆದರಿಕೆ, ಸಾವಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಐವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಆರೋಪಿಗಳ ಮೊಬೈಲ್ ಫೋನ್ ಕಾಲ್‌ಲಿಸ್ಟ್‌ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇವರು ಯಾವುದಾದರೂ ಸಂಘಟನೆಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆಯೇ ಹಾಗೂ ವೈದ್ಯರಿಗೆ ಮೊಬೈಲ್ ಫೋನ್ ಮೂಲಕ ಬೆದರಿಕೆ ನೀಡಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ, ಡಾ.ಕೃಷ್ಣಮೂರ್ತಿ ಅವರ ನಿಗೂಢ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕಾಸರಗೋಡು ಪೈವಳಿಕೆಯಲ್ಲಿ ನಡೆದ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು ೫೬ ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಅವರ ಮೇಲೆ ಸಾರಿಗೆ ಸಂಚಾರಕ್ಕೆ ಅಡಚಣೆ ಮಾಡಿರುವ ಆರೋಪ ಹೊರಿಸಲಾಗಿದೆ.

LEAVE A REPLY

Please enter your comment!
Please enter your name here