ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 2022-23 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್‍ಯಕ್ರಮ ನಡೆಯಿತು.
ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಉದ್ಗಾಟಿಸಿದ ವಿವೇಕಾನಂದ ವಿದ್ಯಾವರ್ದಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಮಾತನಾಡಿ ನಾಯಕತ್ವದ ಗುಣ ವಿದ್ಯಾರ್ಥಿ ದೆಸೆಯಲ್ಲಿಯೇ ರೂಪುಗೊಳ್ಳುತ್ತದೆ. ವಿದ್ಯಾಸಂಸ್ಥೆಯ ಹುಟ್ಟು ಹಾಗು ಬೆಳವಣಿಗೆಗೆ ವಿದ್ಯಾರ್ಥಿಗಳು ಆದರ್ಶರಾಗಬೇಕು, ಸಾಮಾಜಿಕ ಮೌಲ್ಯಗಳ ಕಲ್ಪನೆ, ಕಾರ್‍ಯಕ್ರಮಗಳನ್ನು ಓದಿನ ಜೊತೆಗೆ ಜೋಡಿಸಿಕೊಂಡು ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು ಎಂದು ಶುಭಹಾರೈಸಿದರು. ವಿದ್ಯಾರ್ಥಿಸಂಘದ ಪ್ರತಿನಿಧಿಗಳಾದ ಅಸ್ಮಿತ್‌ಬಾರ್ಯ, ಮಹೇಶ್‌ಬಾಬು, ವಿಖ್ಯಾತ್‌ಶೆಟ್ಟಿ, ಕಿಶನ್‌ಕುಮಾರ್, ಆಶ್ರಯ್ ಹಾಗೂ ಚೈಶ್ಮಾರವರಿಗೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಮುರಳಿಧರ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರಭಟ್ ಬಂಗಾರಡ್ಕ ಮಾತನಾಡಿ ವಿದ್ಯಾರ್ಥಿಗಳು ಶ್ರಮಪಟ್ಟಲ್ಲಿ ಏನನ್ನು ಸಾಧಿಸಬಹುದು ವ್ಯಕ್ತಿತ್ವ ನಿರ್ಮಾಣಮಾಡಲು ನಿರಂತರ ಪ್ರಯತ್ನ ಮಾಡಿದರೆ ಜೀವನ ಸುಖಮಯವಾಗುತ್ತದೆ ಎಂದರು. ಅದ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಖಜಾಂಜಿ ನರಸಿಂಹ ಮಾತನಾಡಿ ಗುರಿ, ನಾಯಕತ್ವ ಹಾಗೂ ಕ್ರೀಯಾಶೀಲತೆಯನ್ನು ಬೆಳೆಸಿಕೊಳ್ಳಿ, ಒಳ್ಳೆಯ ವಿದ್ಯಾರ್ಥಿಗಳಾಗಿ ಎಂದು ಶುಭಹಾರೈಸಿದರು.
2021-22ನೇ ಸಾಲಿನಲ್ಲಿ ತಾಂತ್ರಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಟೋಮೊಬೈಲ್ ವಿಭಾಗದ ವಿದ್ಯಾರ್ಥಿ ಅಂಕಿತ್ ಶೆಟ್ಟಿರವರನ್ನು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರಭಟ್ ಬಂಗಾರಡ್ಕ ಸನ್ಮಾನಿಸಿದರು. ವಿಜ್ಞಾನ ವಿಭಾಗದ ಉಪನ್ಯಾಸಕರಿಂದ ವಿವೇಕಾನಂದ ಪಾಲಿಟೆಕ್ನಿಕ್‌ಗೆ ಕಲರ್‌ಪ್ರಿಂಟರ್‌ನ್ನು ಹಸ್ತಾಂತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.
ಆಡಳಿತ ಮಂಡಳಿಯ ಸಂಚಾಲಕರಾದ ಮಹದೇವ ಶಾಸ್ತ್ರಿ, ಸದಸ್ಯರಾದ ಈಶ್ವರಚಂದ್ರ, ಅಚ್ಯುತಪ್ರಭು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಚಂದ್ರಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪುಷ್ಪಾ ಬಿ.ಎನ್. ವಂದಿಸಿದರು. ಸಿವಿಲ್ ವಿದ್ಯಾರ್ಥಿಗಳಾದ ಶೀಮಾನಸ ತಂಡದವರು ಪ್ರಾರ್ಥಿಸಿದರು, ರ್‍ಯಾಂಕ್ ವಿಜೇತ ವಿದ್ಯಾರ್ಥಿಯ ಹೆತ್ತವರಾದ ಪುರಂದರ ಶೆಟ್ಟಿ, ಶಿಕ್ಷಕರು, ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕ ಗುರುಪ್ರಸನ್ನ ನಿರೂಪಿಸಿದರು.