ಕಾಣಿಯೂರಿನ ಹಿಂದೂ ಬೃಹತ್ ಜಾಗೃತಿ ಸಮಾವೇಶದಲ್ಲಿ ದ್ವೇಷ ಭಾಷಣ

0

 ಸುಮೋಟೋ ಕೇಸು ದಾಖಲಿಸುಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನಿಂದ ಡಿವೈಎಸ್‌ಪಿಗೆ ಮನವಿ

ಪುತ್ತೂರು: ಕಾಣಿಯೂರುನಲ್ಲಿ ನಡೆದ ಹಿಂದೂ ಬೃಹತ್ ಜಾಗೃತಿ ಸಮಾವೇಶದಲ್ಲಿ ದ್ವೇಷ ಭಾಷಣ ಮಾಡಿ, ಕೋಮು ಸಂಘರ್ಷ ನಡೆಸಲು ಹುನ್ನಾರ ನೆಡೆಸಿರುವ ವ್ಯಕ್ತಿಗಳ ವಿರುದ್ಧ ಸುಪ್ರೀಂ ಕೋರ್ಟ್ ಆದೇಶದಂತೆ ಸುಮೋಟೋ ಕೇಸು ದಾಖಲಿಸಬೇಕೆಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಯೋಗದಿಂದ ಪುತ್ತೂರು ಪೊಲೀಸ್ ಉಪಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಕಾಣಿಯೂರಿನಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃವಾಹಿನಿ ಹಾಗೂ ಹಿಂದೂ ಜಾಗರಣ ವೇದಿಕೆ ಎಂಬ ಹೆಸರಿನ ಸಂಘಟನೆಗಳು ಏರ್ಪಡಿಸಿದ್ದ ಹಿಂದೂ ಬೃಹತ್ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಮುರಲೀಕೃಷ್ಣ ಹಸಂತಡ್ಕ, ಚಿನ್ಮಯ ರೈ ಈಶ್ವರಮಂಗಲ ಹಾಗೂ ರಘು ಸಕಲೇಶಪುರ ಎಂಬವರು ಅನ್ಯ ಧರ್ಮಗಳನ್ನು ಹೀಯಾಳಿಸಿ ಅವರನ್ನು ದ್ವೇಷಿಸುವಂತೆ ಸ್ವಧರ್ಮೀಯರನ್ನು ಪ್ರೇರೇಪಿಸುವ ಮತ್ತು ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರ ಎಸಗುವಂತೆ ಜನರನ್ನು ಉದ್ರೇಕಿಸುವ ದ್ವೇಷ ಭಾಷಣವನ್ನು ಮಾಡಿರುತ್ತಾರೆ. ಆದರೂ ಇಲಾಖೆಯು ಈ ಪ್ರಕರಣದಲ್ಲಿ ಕೇಸು ದಾಖಲಿಸದೇ ಸುಮ್ಮನಿರುವುದು ಸುಪ್ರೀಂಕೋರ್ಟ್‌ನ ಆದೇಶದ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ. ಈ ಸಭೆಗೆ ಬೆಳ್ಳಾರೆ ಪೊಲೀಸರು ಬಂದೋ ಬಸ್ತ್ ಮಾಡಿರುತ್ತಾರೆ ಮತ್ತು ಈ ಸಭೆಯ ಭಾಷಣವನ್ನು ವಿಡಿಯೋ ರೆಕಾರ್ಡ್ ಮಾಡಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ದ್ವೇಷ ಬಾಷಣ ಮಾಡಿರುವ ಆರೋಪಿಗಳ ವಿರುದ್ದ ಕೇಸು ದಾಖಲಿಸಿ ಜಿಲ್ಲೆಯ ಕೋಮು ಸಾಮಾರಸ್ಯವನ್ನು ಕಾಪಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿದ ಪೊಲೀಸ್ ಉಪಅಧೀಕ್ಷಕರು ಮಾತನಾಡಿ ತಪ್ಪಿತಸ್ಥರ ವಿರುದ್ಧ ಅಗತ್ಯ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಚಂದ್ರಹಾಸ ಶೆಟ್ಟಿ, ಶರೂನ್ ಸಿಕ್ವೇರಾ, ಶಿವರಾಮ ಆಳ್ವ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಪ್ರವೀಣಚಂದ್ರ ಆಳ್ವ, ಶಶಿಕಿರಣ ರೈ ನೂಜಿಬೈಲು, ನಗರಸಭಾ ಸದಸ್ಯ ರಿಯಾರ, ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ, ಹಾರಿಸ್ ಸಂಟ್ಯಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾರದಾ ಅರಸ್, ಆಲಿಕುಂಞಿ ಕೊರಿಂಗಿಲ, ಕೇಶವ ಪಡೀಲು ಮನವಿ ಸಲ್ಲಿಕೆ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here