ಪುತ್ತೂರು : ಬೀರಿಗ ಅಂಗನವಾಡಿ ಕೇಂದ್ರದ ವ್ಯಾಪ್ತಿಯ ದಾರಂದಕುಕ್ಕು ಶ್ರೀಮಹಾಗಣಪತಿ ಪಾನಿಪುರಿ ಮಾಲಕ ಮನೋಜ್‌ರವರ ಮನೆಯಲ್ಲಿ ಸ್ವಚ್ಛ ಮನಸು, ಸ್ವಚ್ಛಮನೆ, ಮಾಹಿತಿ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನಶೆಟ್ಟಿ ಮಾತನಾಡಿ ನಮ್ಮ ಮನಸ್ಸು ಸ್ವಚ್ಛವಾಗಿದ್ದರೆ ನಮ್ಮ ಮನೆ, ಗ್ರಾಮ ರಸ್ತೆ, ಚರಂಡಿ, ಬೀದಿ ಸ್ವಚ್ಛವಾಗಿರುತ್ತದೆ. ಸ್ವಚ್ಚತೆಗೆ ನಾವೆಲ್ಲರೂ ಆದ್ಯತೆ ನೀಡಬೇಕೆಂದರು.
ಬನ್ನೂರು ಗ್ರಾಮಪಂಚಾಯತ್ ಅಧ್ಯಕ್ಷೆ ಜಯ ಏಕ ಮಾತನಾಡಿ ನಮ್ಮ ಗ್ರಾಮ ಪಂಚಾಯತನ್ನು ಸ್ವಚ್ಛ ಪಂಚಾಯತ್ ಮಾಡಲು ಎಲ್ಲರೂ ಸಹಕರಿಸಬೇಕು. ಇತರ ತ್ಯಾಜ್ಯಗಳನ್ನು ಬೀದಿಗೆ ಎಸೆಯದೆ, ಗೋಣಿ ಚೀಲದಲ್ಲಿ ತುಂಬಿಸಿ, ಗ್ರಾಮಪಂಚಾಯತ್‌ಗೆ ಒಪ್ಪಿಸುವಂತೆ ಹೇಳಿದರು. ಪುತ್ತೂರು ಸೆಲ್ಕೊ ಸೋಲಾರ್‌ನ ವ್ಯವಸ್ಥಾಪಕ ಸುಧಾಕರ್ ಆಳ್ವ ಮಾತನಡಿ ತಮ್ಮ ಸಂಸ್ಥೆಯಿಂದ ಮನೆಯಲ್ಲಿ ಸೋಲಾರ್ ಅಳವಡಿಸಲು ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಬನ್ನೂರು ಗ್ರಾಮಪಂಚಾಯತ್ ಅಭಿವೃಧ್ಧಿ ಅಧಿಕಾರಿ ಚಿತ್ರಾವತಿ ಮಾತನಾಡಿ ಕಸವನ್ನು ಬೀದಿಗೆ ಎಸೆದವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಪುತ್ತೂರು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಟಿ. ಹೆಗ್ಗಡೆ ಶುಭಹಾರೈಸಿದರು. ಬನ್ನೂರು ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಸ್ಮಿತಾ, ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿಶಾಪ್ರಿಯ, ಪಾನಿಪೂರಿ ಮಾಲಕ ಮನೋಜ್, ಧನ್ಯರವರು ಸ್ವಚ್ಛತೆಯ ಬಗ್ಗೆ ಅನಿಸಿಕೆ ತಿಳಿಸಿದರು.
ಗ್ರಾಮಪಂಚಾಯತ್ ಸದಸ್ಯರಾದ ತಿಮ್ಮಪ್ಪಪೂಜಾರಿ, ಆಶಾಕಾರ್‍ಯಕರ್ತರಾದ ಚಂದ್ರಾವತಿ, ಸಂಧ್ಯಾ, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಗೀತಾ, ಸ್ವಸಹಾಯ ಸಂಘದವರು, ಊರವರು, ಭಾಗವಹಿಸಿದರು. ಬೀರಿಗ ಅಂಗನವಾಡಿ ಕಾರ್‍ಯಕರ್ತೆ ಅರುಣಾ ಡಿ. ಕಾರ್‍ಯಕ್ರಮ ನಿರೂಪಿಸಿದರು. ಮೋಹಿನಿ ಸಹಕರಿಸಿದರು.