ಪೆರಿಯಶಾಂತಿ; ರಾಜ್ಯ ಹೆದ್ದಾರಿ ಬದಿಯ ಅನಧಿಕೃತ ಅಂಗಡಿಗಳ ತೆರವು
ನೆಲ್ಯಾಡಿ: ನ.23 ರಂದು ಧರ್ಮಸ್ಥಳದ ಕುದ್ರಾಯ ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಅಂಗಡಿ ಪಕ್ಕ ನಿಂತಿದ್ದವರಿಗೆ ಹಾಗೂ ಬೊಲೇರೋ ವಾಹನಕ್ಕೆ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು 7 ಮಂದಿ ಗಂಭೀರ ಗಾಯಗೊಂಡಿದ್ದರು.
ಈ ಘಟನೆಗೆ ರಾಜ್ಯ ಹೆದ್ದಾರಿ ಬದಿಯ ಅನಧಿಕೃತ ಅಂಗಡಿಗಳೇ ಕಾರಣವಾಗುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಸೂಚನೆಯಂತೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಕುದ್ರಾಯದಿಂದ ನೆಲ್ಯಾಡಿ ಸಮೀಪದ ಪೆರಿಯಶಾಂತಿ ತನಕದ ರಾಜ್ಯ ಹೆದ್ದಾರಿ ಬದಿಯ ಅನಧಿಕೃತ ಅಂಗಡಿಗಳನ್ನು ನ.24 ರಂದು ಬೆಳಿಗ್ಗೆಯೇ ತೆರವುಗೊಳಿಸಲಾಗಿದೆ.
ಧರ್ಮಸ್ಥಳದಿಂದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರಿಯಶಾಂತಿ ತನಕ ಹೆದ್ದಾರಿಯ ಎರಡೂ ಬದಿಯಲ್ಲಿ ಇದ್ದ ಸುಮಾರು 50 ಕ್ಕೂ ಹೆಚ್ಚು ಅನಧಿಕೃತ ಅಂಗಡಿಗಳ ತೆರವುಗೊಳಿಸಲಾಗಿದೆ. ಆರಂಭದಲ್ಲಿ ವ್ಯಾಪಾರಿಗಳಿಂದ ಅಂಗಡಿ ತೆರವಿಗೆ ವಿರೋಧ ವ್ಯಕ್ತವಾಗಿದ್ದರೂ ಆ ಬಳಿಕ ವ್ಯಾಪಾರಿಗಳೇ ಅಂಗಡಿಯೊಳಗಿನ ಹಣ್ಣು ಹಂಪಲು ಹಾಗೂ ಇತರೇ ಸಾಮಾನುಗಳನ್ನು ತೆರವುಗೊಳಿಸಿದರು.
ಜೆಸಿಬಿ ಸಹಾಯದಿಂದ ಅಂಗಡಿ ನೆಲಸಮಗೊಳಿಸಲಾಗಿದೆ. ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗುರುಪ್ರಸಾದ್, ಕಿರಿಯ ಇಂಜಿನಿಯರ್ ತೌಸಿಫ್, ಉಪ್ಪಿನಂಗಡಿ ಎಸ್.ಐ.ರಾಜೇಶ್, ಧರ್ಮಸ್ಥಳ ಎಎಸ್‌ಐ, ಬೆಳ್ತಂಗಡಿ ತಹಶೀಲ್ದಾರ್, ಕಡಬ ಕಂದಾಯ ನಿರೀಕ್ಷಕ ಪೃಥ್ವಿರಾಜ್, ಸ್ಥಳೀಯ ಗ್ರಾಮಕರಣಿಕರು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು. ತೆರವು ಕಾರ್ಯಾಚರಣೆ ಕುರಿತಂತೆ ‘ಸುದ್ದಿ’ಯೊಂದಿಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗುರುಪ್ರಸಾದ್‌ರವರು, ಧರ್ಮಸ್ಥಳ-ಪೆರಿಯಶಾಂತಿ ನಡುವಿನ ರಾಜ್ಯ ಹೆದ್ದಾರಿ ಬದಿ ಟೆಂಟ್ ಹಾಕಿ ವ್ಯಾಪಾರ ಮಾಡುತ್ತಿರುವವರಿಗೆ ಈ ಹಿಂದೆಯೇ ಮೌಖಿಕವಾಗಿ ಸೂಚನೆ ನೀಡಲಾಗಿತ್ತು. ನಿಡ್ಲೆ ಪಂಚಾಯತ್ ವ್ಯಾಪ್ತಿಯಲ್ಲಿನ ಅಂಗಡಿಗಳನ್ನು ಅಲ್ಲಿನ ಗ್ರಾಮ ಪಂಚಾಯಿತಿಯವರು ತೆರವು ಮಾಡಿದ್ದರು. ಆದರೆ ಪೆರಿಯಶಾಂತಿ ಸೇರಿದಂತೆ ಇತರೇ ಕಡೆಗಳಲ್ಲಿ ತೆರವುಗೊಳಿಸಿರಲಿಲ್ಲ.
ನ.23ರಂದು ಧರ್ಮಸ್ಥಳದ ಕುದ್ರಾಯದಲ್ಲಿ ಅಂಗಡಿ ಮುಂದೆ ನಿಂತಿದ್ದವರಿಗೆ ಹಾಗೂ ಬೊಲೆರೋ ವಾಹನಕ್ಕೆ ಬಸ್ ಡಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಹೆದ್ದಾರಿ ಬದಿಯಲ್ಲಿನ ಅನುಮತಿ ರಹಿತ ಅಂಗಡಿಗಳ ತೆರವುಗೊಳಿಸಲಾಗಿದೆ. ಮುಂದೆ ರಾಜ್ಯ ಹೆದ್ದಾರಿ ಬದಿ ಟೆಂಟ್ ಹಾಕಿ ವ್ಯಾಪಾರ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪೊಲೀಸ್ ಹಾಗೂ ಗ್ರಾಮ ಪಂಚಾಯತ್‌ಗಳಿಗೂ ಸೂಚನೆ ನೀಡಲಾಗುವುದು ಎಂದಿದ್ದಾರೆ.
ಅಂಗಡಿ ತೆರವಿಗೆ ವರ್ತಕರಿಂದ ವಿರೋಧ ವ್ಯಕ್ತವಾಗದೇ ಇದ್ದರೂ ಏಕಾಏಕಿ ಅಂಗಡಿ ತೆರವುಗೊಳಿಸಲಾಗಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದವರು ಹಾಗೂ ವ್ಯಾಪಾರಿಗಳು ಆರೋಪಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡದೇ ಇದ್ದಲ್ಲಿ ತೆರವುಗೊಂಡ ಜಾಗದಲ್ಲೇ ವಾಹನದಲ್ಲಿ ಹಣ್ಣು ಹಂಪಲು ಇಟ್ಟು ವ್ಯಾಪಾರ ಮಾಡುವುದಾಗಿಯೂ ಹೇಳಿದ್ದಾರೆ.
1 ಅಂಗಡಿ ಬಾಕಿ:ಪೆರಿಯಶಾಂತಿಯಲ್ಲಿ ಇಚ್ಲಂಪಾಡಿ ತಿರುವುನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಇರುವ 1 ಅಂಗಡಿ ತೆರವುಗೊಳಿಸಿಲ್ಲ. ಈ ಅಂಗಡಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿದೆ ಎಂದು ಲೋಕೋಪಯೋಗಿ ಇಲಾಖೆಯವರು ತೆರವುಗೊಳಿಸದೇ ತೆರಳಿದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮತ್ತೆ ಅನಧಿಕೃತ ಅಂಗಡಿಗಳು ತಲೆಯೆತ್ತುವ ಸಾಧ್ಯತೆಯೂ ಇದೆ ಎಂಬ ಮಾತು ಕೇಳಿಬಂದಿದೆ.