ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೂ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೂ ನಮ್ಮ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೂ ಸಂಬಂಧವೇ ಇಲ್ಲ. ನಮ್ಮ ಪುತ್ತೂರು ತಾಲೂಕು ಪತ್ರಕರ್ತರ ಸಂಘ ಸ್ವತಂತ್ರ ಸಂಸ್ಥೆಯಾಗಿದ್ದು ರಾಜ್ಯ ಅಥವಾ ಜಿಲ್ಲಾ ಸಂಘದೊಂದಿಗೆ ಮರ್ಜ್ ಆಗಿಲ್ಲ ಎಂದು ಹೇಳಿಕೊಂಡಿದ್ದ, ಐ.ಬಿ.ಸಂದೀಪ್ ಕುಮಾರ್ ನೇತೃತ್ವದ ಪುತ್ತೂರು ತಾಲೂಕು ಪತ್ರಕರ್ತರ ಸಂಘದವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿರುವ ಪುತ್ತೂರು ತಾಲೂಕು ಘಟಕದ ಚುನಾವಣೆಗೆ ನಾಮಪತ್ರ ಸಲ್ಲಿಸಿ ಕುತೂಹಲ ಸೃಷ್ಠಿಸಿದ್ದಾರೆ.ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿಕೊಂಡಿದ್ದ ಐ.ಬಿ.ಸಂದೀಪ್ ಕುಮಾರ್‌ರವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿಯ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಗ್ಗೆ ಘೋಷಿಸಿಕೊಂಡಿದ್ದ ಅಜಿತ್ ಕುಮಾರ್ ಅವರು ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾಗಿ ಹೇಳಿದ್ದ ಕುಮಾರ್ ಕಲ್ಲಾರೆ, ಕೋಶಾಧಿಕಾರಿಯಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿಕೊಂಡಿದ್ದ ಕೃಷ್ಣಪ್ರಸಾದ್ ಬಲ್ನಾಡು ಮತ್ತು ಪತ್ರಿಕಾ ಭವನದ ವ್ಯವಸ್ಥಾಪಕರಾಗಿ ಆಯ್ಕೆಯಾಗಿರುವುದಾಗಿ ಘೋಷಿಸಲ್ಪಟ್ಟಿದ್ದ ಪ್ರವೀಣ್ ಕುಮಾರ್ ಬೊಳುವಾರು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿಯಮ ಪ್ರಕಾರ ಒಂದು ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಹೊಂದಿರುವವರು ಇನ್ನೊಂದು ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಪಡೆದುಕೊಳ್ಳುವಂತಿಲ್ಲ.ಪತ್ರಕರ್ತರ ಸಂಘಗಳಲ್ಲಿ ದ್ವಿಸದಸ್ಯತ್ವ ಪಡೆದುಕೊಂಡವರು ಒಂದು ಸಂಘದ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.ಈ ನಿಯಮದ ಪ್ರಕಾರ ಐ.ಬಿ.ಸಂದೀಪ್ ಕುಮಾರ್, ಅಜಿತ್ ಕುಮಾರ್, ಕುಮಾರ್ ಕಲ್ಲಾರೆ, ಕೃಷ್ಣಪ್ರಸಾದ್ ಬಲ್ನಾಡು ಮತ್ತು ಪ್ರವೀಣ್ ಕುಮಾರ್ ಬೊಳುವಾರುರವರು ಮುಂದಿನ ದಿನಗಳಲ್ಲಿ ತಮ್ಮದೇ ಸ್ವತಂತ್ರ ಪತ್ರಕರ್ತರ ಸಂಘವಾಗಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ರಾಜೀನಾಮೆ ನೀಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಂಗ ಸಂಸ್ಥೆಯಾಗಿರುವ ಪುತ್ತೂರು ತಾಲೂಕು ಘಟಕದಲ್ಲಿ ಉಳಿಯುತ್ತಾರೆಯೇ ಅಥವಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದಿಂದ ಹೊರ ನಡೆದು ತಮ್ಮದು ಸ್ವತಂತ್ರ ಸಂಸ್ಥೆ ಎಂದು ಅವರೇ ಹೇಳಿಕೊಂಡಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿಯೇ ಮುಂದುವರಿಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.ಪುತ್ತೂರು, ಕಡಬದಲ್ಲಿ ಮಾತ್ರವಲ್ಲದೆ, ಜಿಲ್ಲೆ ಮತ್ತು ರಾಜ್ಯಮಟ್ಟದ ಪತ್ರಕರ್ತರ ವಲಯದಲ್ಲಿಯೂ ಈ ವಿಚಾರ ಕುತೂಹಲ ಸೃಷ್ಠಿಸಿದೆ.
Home ಚಿತ್ರ ವರದಿ ರಾಜ್ಯ ಸಂಘಕ್ಕೂ ನಮಗೂ ಸಂಬಂಧವೇ ಇಲ್ಲ, ನಮ್ಮದು ಸ್ವತಂತ್ರ ಸಂಸ್ಥೆ ಎಂದಿದ್ದ ಸಂದೀಪ್ ತಂಡದ ಐವರಿಂದ...