ದಿನಸಿ, ಪಾತ್ರೆ ಸಾಮಾಗ್ರಿ ದಾಸ್ತಾನು ಕೊಠಡಿ ಉದ್ಘಾಟನೆ, ಅನ್ನಪೂರ್ಣೇಶ್ವರಿ ಆರಾಧನೆ
ಪುತ್ತೂರು: ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದ ವಠಾರದಲ್ಲಿ ಸುಮಾರು 42 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯವಾದ ಭೋಜನಾಲಯದ ಒಂದು ಭಾಗದಲ್ಲಿರುವ ಪಾಕಶಾಲೆಯ ಪ್ರಾರಂಭೋತ್ಸವ ದ.14ರಂದು ಬೆಳಿಗ್ಗೆ ನಡೆಯಿತು. ವೇದಮೂರ್ತಿ ಕೃಷ್ಣಕುಮಾರ್ ಉಪಾಧ್ಯಾಯ ಪಟ್ಲಮೂಲೆರವರ ನೇತೃತ್ವದಲ್ಲಿ ಅರ್ಚಕರಾದ ವೆಂಕಟೇಶ ಉಪಾಧ್ಯಾಯ ಮತ್ತು ರವಿರಾಮ ಭಟ್ ಸನ್ಯಾಸಿಗುಡ್ಡೆರವರು ವೈಧಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ದ.13ರಂದು ಸಂಜೆ ವಾಸ್ತು ಪೂಜೆ ನಡೆದು ದ.14ರಂದು ಬೆಳಿಗ್ಗೆ ಗಣಪತಿ ಹೋಮ ಬಳಿಕ ಅನ್ನಪೂರ್ಣೆಶ್ವರಿ ಆರಾಧನೆಯೊಂದಿಗೆ ಪಾಕಶಾಲೆಯಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ ನಡೆಯಿತು. ಶ್ರೀರಾಮ ಮಂದಿರದಲ್ಲಿ ಭಗವಾನ್ ಶ್ರೀರಾಮಚಂದ್ರ ಸಪರಿವಾರ ದೇವರಿಗೆ ಮಂಗಳಾರತಿಯ ಬಳಿಕ ಅನ್ನಪೂರ್ಣೇಶ್ವರಿ ದೇವಿಗೆ ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆ ನಡೆಯಿತು.

ಬೆಂಗಳೂರಿನ ಬೊಳ್ಳಾಡಿ ಡೆಕೊರೇಟರ್ಸ್ನ ಮಾಲಕರಾದ ವೆಂಕಪ್ಪ ಗೌಡ ಬೊಳ್ಳಾಡಿಯವರು ಪಾಕಶಾಲೆಯನ್ನು ದೀಪ ಬೆಳಗಿಸುವ ಮೂಲಕ ಪ್ರಾರಂಭೋತ್ಸವ ಮಾಡಿದರು. ದಿನಸಿ ಸಾಮಾಗ್ರಿ ದಾಸ್ತಾನು ಕೊಠಡಿಯನ್ನು ಉದ್ಯಮಿ ಕೊಡಂಕೀರಿ ಶಶಿಧರ ರೈ ಗೋವಾರವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಪಾತ್ರೆ ಸಾಮಾಗ್ರಿ ಕೊಠಡಿಯನ್ನು ಪುತ್ತೂರು ಕಿರಣ್ ಎಂಟರ್ಪ್ರೈಸಸ್ ಮಾಲಕ ಕೇಶವ ನಾೖಕ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅತಿಥಿಗಳಿಗೆ ಮಂದಿರದ ವತಿಯಿಂದ ಶಾಲು ಹಾಕಿ ಪ್ರಸಾದ ನೀಡಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು ಹಾಗೆಯೇ ಭಜನಾ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರುಗಳು, ಭೋಜನಾಲಯ ನಿರ್ಮಾಣದ ಹಿಂದೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿರುವ ಊರಪರವೂರ ದಾನಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
ಭರದಿಂದ ಸಾಗುತ್ತಿದೆ ಭೋಜನಾಲಯದ ಕಾಮಗಾರಿ
ಊರಪರವೂರ ದಾನಿಗಳ ಸಹಕಾರದೊಂದಿಗೆ ಸುಮಾರು 42 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಭೋಜನಾಲಯದ ಕಾಮಗಾರಿ ಭರದಿಂದ ಸಾಗುತ್ತಿದ್ದು ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ಪಾಕಶಾಲೆ, ದಾಸ್ತಾನು ಕೊಠಡಿ, ಪಾತ್ರೆ ಸಾಮಾಗ್ರಿ ಕೊಠಡಿಯ ಕೆಲಸ ಸಂಪೂರ್ಣಗೊಂಡಿದ್ದು ಇವುಗಳ ಉದ್ಘಾಟನೆಯೊಂದಿಗೆ ಪಾಕಶಾಲೆಯ ಪ್ರಾರಂಭೋತ್ಸವ ಕೂಡ ನಡೆಯಿತು. ಇನ್ನುಳಿದಂತೆ ಮುಂದಿನ ಮಾರ್ಚ್ ತಿಂಗಳಾಂತ್ಯಕ್ಕೆ ಕಾಮಗಾರಿಗಳು ಸಂಪೂರ್ಣಗೊಳ್ಳಲಿದ್ದು ಎಪ್ರಿಲ್ ತಿಂಗಳಿನಲ್ಲಿ ಭೋಜನಾಲಯದ ವಿಜೃಂಭಣೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಅತ್ಯಂತ ಕಾರಣಿಕದ ಕ್ಷೇತ್ರ
ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯ ಶ್ರೀರಾಮ ಮಂದಿರದಲ್ಲಿ ಭಗವಾನ್ ಶ್ರೀರಾಮಚಂದ್ರ ದೇವರು ಸಪರಿವಾರ ಸಹಿತ ಪ್ರತಿಷ್ಠಾಪನೆಗೊಂಡು ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಅತ್ಯಂತ ಕಾರಣಿಕತೆಯ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದುಕೊಂಡಿದ್ದು ಇಲ್ಲಿ ಬಂದು ಭಕ್ತಿಯಿಂದ ಕೈಮುಗಿದು ಬೇಡಿಕೊಂಡರೆ ನಾವು ನೆನೆಸಿಕೊಂಡ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹಲವು ನಿದರ್ಶನಗಳು ಕೂಡ ನಮ್ಮ ಕಣ್ಣಮುಂದೆ ಸಿಗುತ್ತವೆ.