ಪುತ್ತೂರು: ಪುತ್ತೂರು ತಾ| ವಿದ್ಯಾರ್ಥಿ ಬಂಟರ ಸಂಘದ ಆಶ್ರಯದಲ್ಲಿ ಜರಗಲಿರುವ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಕ್ರಮವನ್ನು ಪುತ್ತೂರು ತಾಲ್ಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಯವರು ನ. 27 ರಂದು ಪುತ್ತೂರು ಬಂಟರ ಭವನದಲ್ಲಿ ಉದ್ಘಾಟಿಸಿ, ಮಾತನಾಡಿ ವಿದ್ಯಾರ್ಥಿ ಬಂಟರ ಸಂಘದ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮ ಎಲ್ಲರಿಗೂ ಆದರ್ಶ. ಪದವಿ ಪಡೆದ ಕೂಡಲೇ ನಾವು ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಮಾಡುವೆವು ಎಂದು ಬೀಗುವುದು ಸರಿಯಲ್ಲ. ಭಾಷೆ ಯಾವುದೇ ಇರಲಿ ನಿರರ್ಗಳವಾಗಿ, ನಿರ್ಭಯವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕವಾಗಿ ಪರೀಕ್ಷೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಬೇಕಾದರೆ ತರಬೇತಿ ಅಗತ್ಯ ಎಂದು ಹೇಳಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಯವರು ಮಾತನಾಡಿ ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಲತ್ತಡ್ಡ ಮತ್ತು ತಂಡ ತನ್ನ ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜದ ಇತರೇ ಯುವಕ ಯುವತಿಯರಿಗೆ ಉದ್ಯೋಗ ಭರವಸೆ ನೀಡುವ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ವಿಷಯ ಎಂದರು.
ಇಂಥ ಉತ್ತಮ ಕೆಲಸಕ್ಕೆ ಬೆಂಬಲವಾಗಿ ನಿಂತಿರುವ ಮತ್ತು ತರಬೇತಿ ನಡೆಸಿಕೊಡುವ ಭಾಗ್ಯೇಶ್ ರೈ ನೇತೃತ್ವದ ವಿದ್ಯಾಮಾತಾ ಫೌಂಡೇಶನ್ ಕೂಡಾ ಸಮಾಜದ ಮತ್ತು ಪುತ್ತೂರಿನ ಬೆಳವಣಿಗೆಗೆ ಒಂದು ಕೊಡುಗೆ ಎಂದು ಹೇಳಿ ಶುಭಹಾರೈಸಿದರು.
ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ನಿರ್ದೇಶಕ ದುರ್ಗಾಪ್ರಸಾದ್ ರೈ ಕುಂಬ್ರ, ವಿದ್ಯಾಮಾತಾ ಫೌಂಡೇಷನ್ ನ ಭಾಗ್ಯೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಿಕ್ರಮ್ ಆಳ್ವ ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ತರಬೇತಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.