ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ಗ್ರಂಥಾಲಯ ಸಪ್ತಾಹ ಹಾಗೂ ಪತ್ರ ಅಭಿಯಾನ ಕಾರ್ಯಕ್ರಮವನ್ನು ನ.24 ರಂದು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರು ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥ್‌ರವರ ಭಾವಚಿತ್ರಕ್ಕೆ ಹೂ ಹಾಕಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಂಡಲ್ಲಿ ನಮ್ಮ ಮನಸ್ಸು ನೆಮ್ಮದಿಯಿಂದ ಇರಲು ಸಾಧ್ಯವಿದೆ. ಒಳ್ಳೆಯ ಸಾಹಿತ್ಯಕ್ಕೆ ಮನಸ್ಸನ್ನು ಅರಳಿಸುವ ಗುಣ ಇದೆ ಆದ್ದರಿಂದ ಮಕ್ಕಳಿಂದ ಹಿಡಿದು ವೃದ್ಧರ ತನಕವೂ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ಕೃಷ್ಣ ಕುಮಾರ್ ಇದ್ಯಪೆ, ವಿಠಲ ರೈ ಮಿತ್ತೋಡಿ, ಜಯಲಕ್ಷ್ಮೀ ಬಲ್ಲಾಳ್, ರೇವತಿ ಬೋಳೋಡಿ ಹಾಗೂ ಶಾಲಾ ಕ್ಲಸ್ಟರ್ ಮಟ್ಟದ ಅಧಿಕಾರಿ ನಿರಂಜನ್ ಹಾಗೂ ತಿಂಗಳಾಡಿ ಮತ್ತು ಕೆದಂಬಾಡಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತಿಂಗಳಾಡಿ ಹಿರಿಯ ಪ್ರಾಥಮಿಕ ಶಾಲೆಯ 45 ವಿದ್ಯಾರ್ಥಿಗಳು ಹಾಗೂ ಕೆದಂಬಾಡಿ ಶಾಲೆಯ 20 ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. 45 ವಿದ್ಯಾರ್ಥಿಗಳಿಗೆ ಗ್ರಾಪಂ ಅಧ್ಯಕ್ಷರು ಬಹುಮಾನ ವಿತರಿಸಿದರು. ಗ್ರಾಪಂ ಗ್ರೇಡ್ 1 ಕಾರ್ಯದರ್ಶಿ ಸುನಂದ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಂಥಾಲಯ ಸಿಬ್ಬಂದಿ ಸಾರಿಕ ಎಂ. ವಂದಿಸಿದರು. ಗ್ರಾಪಂ ಸಿಬ್ಬಂದಿಗಳು ಸಹಕರಿಸಿದ್ದರು.