ಪಂಚಾಯತ್ ಸವಲತ್ತು ಪಡೆಯಲು ಮಧ್ಯವರ್ತಿಗಳು ಬೇಡ, ಸಾರ್ವಜನಿಕರು ನೇರವಾಗಿ ಪಂಚಾಯತ್ ಜೊತೆ ವ್ಯವಹರಿಸಿ; ಆರ್ಯಾಪು ಗ್ರಾ.ಪಂ.ಸಾಮಾನ್ಯ ಸಭೆ

0

ಪುತ್ತೂರು: ಯಾವುದೇ ಮಧ್ಯವರ್ತಿಗಳ ಮೂಲಕ ಸಾರ್ವಜನಿಕರು ಪಂಚಾಯತ್ ಸವಲತ್ತುಗಳನ್ನು ಪಡೆಯಬಾರದು.ನೇರವಾಗಿ ಅರ್ಜಿ ಸಲ್ಲಿಸಿ ನೇರವಾಗಿ ಸೌಲಭ್ಯವನ್ನೂ ಪಡೆದುಕೊಳ್ಳುವಂತೆ ಸಾರ್ವಜನಿಕರನ್ನು ನಾವು ಉತ್ತೇಜಿಸಬೇಕೆಂದು ಹೇಳುವ ಮೂಲಕ, ಪಂಚಾಯತ್‌ಗಳಲ್ಲಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡದಂತೆ ದಿಟ್ಟ ನಿಲುವನ್ನು ಆರ್ಯಾಪು ಗ್ರಾ.ಪಂ.ನ ಪಿಡಿಒ ಅವಿನಾಶ್ ರವರು ವ್ಯಕ್ತಪಡಿಸಿದರು.

ಆರ್ಯಾಪು ಗ್ರಾ.ಪಂ. ಪಿಡಿಒ ಆದ ಬಳಿಕ ಮೊದಲ ಬಾರಿಗೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅವರು ಪಾರದರ್ಶಕ ಆಡಳಿತದ ಬಗ್ಗೆ ಪ್ರಸ್ತಾಪಿಸಿದರು.ಸಭೆಯು ಪಂಚಾಯತ್ ಅಧ್ಯಕ್ಷೆ ಸರಸ್ವತಿಯವರ ಅಧ್ಯಕ್ಷತೆಯಲ್ಲಿ ನ.30ರಂದು ನಡೆಯಿತು. ಸಾರ್ವಜನಿಕರಿಗೆ ಸರಕಾರದ ಸವಲತ್ತುಗಳನ್ನು ಕಾನೂನುಬದ್ಧವಾಗಿ ಕೊಡಲು ಮಾತ್ರ ಅಧಿಕಾರಿಗಳಾದ ನಮಗೆ ಅಧಿಕಾರವಿರುತ್ತದೆ. ಅರ್ಹ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ಪಂಚಾಯತ್ ಸಿಬ್ಬಂದಿಗಳ ಮೂಲಕ ವ್ಯವಹರಿಸಿ, ಅರ್ಜಿ ಸಲ್ಲಿಸಿ ಸವಲತ್ತುಗಳನ್ನು ಪಡೆಯುವಂತಾಗಬೇಕು ಎಂದು ಅವಿನಾಶ್‌ರವರು ಹೇಳಿದರು.

ಭೂ ಮಂಜೂರಾತಿ ಮುನ್ನ ಕಂದಾಯ ಇಲಾಖೆ ಮಾಹಿತಿ ಕೊಡಬೇಕು: ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಸರಕಾರ ಎಕರೆಗಟ್ಟಲೆ ಭೂಮಿ ಸಕ್ರಮಗೊಳಿಸಿಕೊಡುತ್ತಿದೆ.ಅದೇ ರೀತಿ ಬಡವರಿಗೂ ಮನೆಕಟ್ಟಲು 3 ಸೆಂಟ್ಸ್ ಆದರೂ ಭೂ ಮಂಜೂರಾತಿ ಮಾಡಿಕೊಡುವಂತಾಗಬೇಕೆಂದು ಸದಸ್ಯ ಪುರುಷೋತ್ತಮ ರೈ ಬೂಡಿಯಾರ್ ಹೇಳಿದರು.ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ಭೂ ಮಂಜೂರಾತಿಗೆ ಮುನ್ನ ಗ್ರಾ.ಪಂ.ಗೆ ಮಾಹಿತಿ ನೀಡುವಂತೆ ಹಾಗೂ ಪಂಚಾಯತ್ ರಸ್ತೆಗಳಿದ್ದಲ್ಲಿ ನಕ್ಷೆಯಲ್ಲಿ ನಮೂದಿಸುವಂತೆ ಕಂದಾಯ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು.

ನಿರ್ಣಯ ಅಂಗೀಕಾರವಾಗುವುದಿಲ್ಲ: ಪಿಡಿಒ ನಾಗೇಶ್‌ರವರ ವರ್ಗಾವಣೆ ವಿಚಾರದ ಚರ್ಚೆಯಾಗುತ್ತಿದ್ದ ವೇಳೆ ಸದಸ್ಯೆ ಪವಿತ್ರ ರೈಯವರು ಪಂಚಾಯತ್‌ನ ಇತರ ನಿರ್ಣಯಗಳಿಗೂ ಕೆಲವೊಮ್ಮೆ ಸ್ಪಂದನೆಗಳು ಇರುವುದಿಲ್ಲ.ಇದು ಗಂಭೀರ ಸಮಸ್ಯೆ ಎಂದರು.ನಿರ್ಣಯಕ್ಕೆ ಬೆಲೆ ಇಲ್ಲದಿದ್ದರೆ ಪಂಚಾಯತ್‌ಗೆ ಆಡಳಿತ ಮಂಡಳಿ ಯಾಕೆ? ಎಂದು ಸದಸ್ಯ ನೇಮಾಕ್ಷ ಸುವರ್ಣ ಪ್ರಶ್ನಿಸಿದರು.ಇದಕ್ಕೆ ಎಲ್ಲಾ ಸದಸ್ಯರೂ ಧ್ವನಿಗೂಡಿಸಿದರು.ನಿರ್ಣಯಗಳಿಗೆ ಸರಕಾರದ ಕಡೆಯಿಂದ ಸ್ಪಂದನೆ ಇಲ್ಲದಿದ್ದರೆ ನಿರ್ಣಯ ಮಾಡುವುದು ಯಾಕೆ? ಎಂದಾಗ ಪಿಡಿಒ ಅವಿನಾಶ್‌ರವರು ‘ನಿರ್ಣಯ ಮಾಡುವುದು ನಮ್ಮ ಜವಾಬ್ದಾರಿ. ಸರಕಾರ ಸಮಗ್ರ ದೃಷ್ಟಿಕೋನದಿಂದ ರಾಜ್ಯದ ಎಲ್ಲಾ ಕಡೆ ಅನ್ವಯವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ’ ಎಂದರು.ಇದೇ ವಿಷಯದಲ್ಲಿ ಮಾತನಾಡಿದ ಸದಸ್ಯ ಹರೀಶ್ ವಾಗ್ಲೆಯವರು ‘ನಾವು ಜನರ ಹತ್ತಿರದ ಮತ್ತು ತಳಮಟ್ಟದ ಜನಪ್ರತಿನಿಧಿಗಳು. ಜನರ ವಾಸ್ತವಿಕ ಸಮಸ್ಯೆಗಳು ನಮ್ಮ ಬಳಿಯೇ ಬರುವುದರಿಂದ ನಾವು ಕೈಗೊಂಡ ನಿರ್ಣಯಗಳು ಸರಕಾರದವರೆಗೂ ತಲುಪಬೇಕು.ಜನರಿಗೆ ಉತ್ತರಿಸಬೇಕಾದವರು ನಾವಾಗಿದ್ದೇವೆ’ ಎಂದರು. ರಾಜೀನಾಮೆ ವಿಷಯದಲ್ಲಿ ಆಡಳಿತ ಪಕ್ಷ-ವಿರೋಧ ಪಕ್ಷ ಎಂದು ತಗಾದೆ ತೆಗೆಯಲು ಆರಂಭಿಸಿದ ಪುರುಷೋತ್ತಮ ರೈಯವರಿಗೆ ಉತ್ತರಿಸಿದ ಪಿಡಿಒರವರು ಪಂಚಾಯತ್‌ನಲ್ಲಿ ಎಲ್ಲಾ ಸದಸ್ಯರೂ ಒಂದೇ.ಇಲ್ಲಿ ಆಡಳಿತ ಪಕ್ಷದವರು, ವಿರೋಧ ಪಕ್ಷದವರೆಂಬುದಿಲ್ಲ’ ಎಂದರು.

ಸರಕಾರದ ವಿವಿಧ ಸುತ್ತೋಲೆಗಳನ್ನು ಪಿಡಿಒ ಅವಿನಾಶ್ ಪ್ರಸ್ತಾಪಿಸಿದರು.ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪು ರಚನೆ, ದೂರದೃಷ್ಟಿ ಯೋಜನೆ, ಕ್ರಿಯಾಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಆಯ್ಕೆ ಪ್ರಕ್ರಿಯೆ, ಕೋವಿಡ್ ಬೂಸ್ಟರ್ ಡೋಸ್, ವಿಕಲಚೇತನರ, ಮಕ್ಕಳ ಹಾಗೂ ಕೊರಗ ಸಮುದಾಯದ ವಿಶೇಷ ಗ್ರಾಮ ಸಭೆ ಕರೆಯುವ ಬಗ್ಗೆ ಸುತ್ತೋಲೆ ಪ್ರಸ್ತಾಪ ಮಾಡಿದರು.

ರೈತರಿಗೆ, ಬಡವರಿಗೆ ಸಮಸ್ಯೆಯಾಗುತ್ತಿದೆ: ಕಾನೂನು ಬದ್ದವಾಗಿ ಜನರಿಗೆ ಸರಕಾರದ ಸವಲತ್ತು ಕೊಡಲು ನಾವು ಬದ್ದರಾಗಿದ್ದೇವೆ ಎಂದು ಪಿಡಿಒ ಹೇಳಿದರು.ಮಾನವೀಯತೆ ಆಧಾರದಲ್ಲಿ ಕೆಲವೊಮ್ಮೆ ಕಾನೂನು ಸಡಿಲಿಕೆ ಮಾಡಿ ಬಡವರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಬೇಕೆಂದು ಸದಸ್ಯರು ಹೇಳಿದಾಗ ಪಿಡಿಒರವರು ಈ ರೀತಿ ಉತ್ತರಿಸಿದರು.

ಕಂದಾಯ ಇಲಾಖೆ ಬಗ್ಗೆ ಆರೋಪ: ಬಡವರು ಮತ್ತು ರೈತರು ಅಕ್ರಮ ಸಕ್ರಮ ಪ್ಲಾಟಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ.ಅನೇಕ ಅಡೆತಡೆಗಳಿವೆ.ಇದಕ್ಕೆ ಕಂದಾಯ ಇಲಾಖೆಯೇ ಕಾರಣ.ಸರಿಯಾದ ಅರ್ಜಿ ವಿಲೇವಾರಿ ಮಾಡಿ ನಿಜವಾದ ಬಡವರಿಗೆ ಸರಕಾರ ಸ್ಪಂದಿಸಬೇಕೆಂದು ಸದಸ್ಯರು ಒತ್ತಾಯಿಸಿದರು.

ಸಾರ್ವಜನಿಕರೋರ್ವರಿಗೆ ಕರೆಂಟ್ ಕನೆಕ್ಷನ್‌ಗೆ ಪಂಚಾಯತ್‌ನಿಂದ ಎನ್‌ಒಸಿ ಕೊಡುವ ವಿಚಾರದಲ್ಲಿ ಕಾನೂನು ತೊಡಕು ಉಂಟಾಗಿರುವುದನ್ನು ಪಿಡಿಒ ಸಭೆಯ ಮುಂದಿಟ್ಟರು.ಅಲ್ಲದೇ ಅವರಿಗೆ ಪರ್ಯಾಯವಾಗಿ ಪರಿಹಾರ ಉಪಾಯ ಹೇಳಲಾಗಿದೆ.ಸಾರ್ವಜನಿಕರು ಏನೇ ಸಮಸ್ಯೆ, ಬೇಡಿಕೆಗಳಿದ್ದರೂ ನೇರವಾಗಿ ಪಂಚಾಯತ್‌ನಲ್ಲಿ ವ್ಯವಹರಿಸಿ.ಮಧ್ಯವರ್ತಿಗಳಿಗೆ ಇಲ್ಲಿ ಅವಕಾಶವಿಲ್ಲ’ ಎಂದಾಗ ಸದಸ್ಯೆರಲ್ಲರೂ ಮೇಜುಕುಟ್ಟಿ ಸಹಮತ ಸೂಚಿಸಿದರು.

ನೌಕರರ ಬೇಡಿಕೆಗಳಿಗೆ ನ್ಯಾಯ ದೊರಕುವಂತೆ ಬೆಂಬಲ: ಇದೇ ವೇಳೆ ಪಂಚಾಯತ್‌ನ ನೌಕರರು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರು.ಡಿ.19ರಂದು ಬೆಳಗಾವಿಯಲ್ಲಿ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ನಡೆಯಲಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡುವಂತೆಯೂ, ಮುಷ್ಕರದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ರಜೆ ನೀಡುವಂತೆಯೂ ಆಗ್ರಹಿಸಿ ನೌಕರರು ಮನವಿ ಸಲ್ಲಿಸಿದರು.ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ದರ್ಜೆಯ ಸ್ಥಾನಮಾನ ಕಲ್ಪಿಸುವಂತೆ, ಸೂಕ್ತ ಜೀವನ ಭದ್ರತೆ ಕಲ್ಪಿಸಲು ಸರಕಾರವನ್ನು ಒತ್ತಾಯಿಸಲು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.ನೌಕರರಿಗೆ ಸೂಕ್ತ ನ್ಯಾಯ ಸಿಗಲು ನಮ್ಮೆಲ್ಲರ ಬೆಂಬಲವಿದೆ ಎಂದು ಸದಸ್ಯರು ಬೆಂಬಲ ಸೂಚಿಸಿದರು.ಇದೇ ವೇಳೆ ನೌಕರರ ಜೀವನ ಭದ್ರತೆಗಾಗಿ ಜೀವ ವಿಮೆ ಮತ್ತು ಆರೋಗ್ಯ ವಿಮೆ ಮಾಡುವ ಬಗ್ಗೆ ಪಿಡಿಒ ಭರವಸೆ ನೀಡಿದರು.ಅಲ್ಲದೇ ಇಎಸ್‌ಐ ಯೋಜನೆಯನ್ನೂ ನೌಕರರಿಗೆ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಪ್ರತಿದಿನ ತ್ಯಾಜ್ಯ ವಿಲೇವಾರಿ: ಸ್ವಚ್ಛತೆಯ ಸಮರ್ಪಕ ನಿರ್ವಹಣೆಗಾಗಿ ಪಂಚಾಯತ್ ವ್ಯಾಪ್ತಿಯಲ್ಲಿ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ಪ್ರತಿದಿನ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಾಗಿ ವ್ಯವಸ್ಥೆ ಕಲ್ಪಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಡಾ|ಶಿವರಾಮ ಕಾರಂತ ಪ್ರಶಸ್ತಿಗಾಗಿ ಸಂಭ್ರಮ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್‌ರಾಜ್ ಮತ್ತು ನಗರ ಸ್ಥಳೀಯಾಡಳಿತ ಸಾಂಸ್ಕೃತಿಕ ಉತ್ಸವದಲ್ಲಿ ಆರ್ಯಾಪು ಗ್ರಾಮ ಪಂಚಾಯತ್‌ಗೆ ‘ಡಾ|ಶಿವರಾಮ ಕಾರಂತ ಪ್ರಶಸ್ತಿ 2021-22’ ಬಂದಿರುವುದಕ್ಕೆ ಮತ್ತು ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಪುತ್ತೂರು ತಾಲೂಕಿನ ಏಕೈಕ ಗ್ರಾ.ಪಂ.ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದಕ್ಕೆ ಸಭೆಯಲ್ಲಿ ಸಂಭ್ರಮ ಪಡಲಾಯಿತು.

ಉಪಾಧ್ಯಕ್ಷೆ ಪೂರ್ಣಿಮಾ ರೈ, ಸದಸ್ಯರಾದ ಗೀತಾ, ಶ್ರೀನಿವಾಸ ರೈ, ಚೇತನ್ ಡಿ.ಐ, ಕಸ್ತೂರಿ, ಪವಿತ್ರ ಎನ್., ಗಿರೀಶ್ ಕೆ., ನಳಿನಿ ಕುಮಾರಿ, ರಶೀದ ಬಿ., ರೇವತಿ ಬಿ.ಎಚ್., ಅಶೋಕ ನಾಯ್ಕ ಎನ್., ನಾಗೇಶ್ ಎಂ., ಕಲಾವತಿ, ಯಾಕೂಬ್ ವಿವಿಧ ವಿಷಯಗಳಲ್ಲಿ ಚರ್ಚಿಸಿದರು. ಕಾರ್ಯದರ್ಶಿ ಮೋನಪ್ಪ ಅರ್ಜಿಗಳನ್ನು ಸಭೆಯ ಮುಂದಿಟ್ಟು, ಸ್ವಾಗತಿಸಿ, ವಂದಿಸಿದರು.

ಪಾಲಿಸಿ ಮುಖ್ಯ, ವ್ಯಕ್ತಿ ಸ್ಥಳ ಮುಖ್ಯವಲ್ಲ:

‘ಸಾರ್ವಜನಿಕರ ಅರ್ಜಿಗಳನ್ನು ಯಾರು ಕೂಡ ಕೊಡಬಹುದು.ಆದರೆ ಸರಕಾರದ ಸವಲತ್ತನ್ನು ಅರ್ಹ ವ್ಯಕ್ತಿಯೇ ಪಡೆದುಕೊಳ್ಳಬೇಕು.ಮಧ್ಯವರ್ತಿಗಳಿಗೆ ಅವಕಾಶವಿಲ್ಲ.ನಮಗೆ ಪಾಲಿಸಿ ಮುಖ್ಯ. ವ್ಯಕ್ತಿ ಸ್ಥಳ ಮುಖ್ಯವಲ್ಲ.ಅಧಿಕಾರಿಗಳಾದ ನಾವು ಎಲ್ಲಿಯಾದರೂ ಸಾರ್ವಜನಿಕರ ಸೇವೆಯೇ ಮಾಡುವುದು.ಹಾಗಾಗಿ ಪಾರದರ್ಶಕವಾದ ಆಡಳಿತವೇ ನಮ್ಮ ಕರ್ತವ್ಯ’ ಎಂದು ಪಿಡಿಒ ಹೇಳಿದರು.

ವಸಂತರವರ ರಾಜೀನಾಮೆ ಹಿಂಪಡೆಯಲು ಮನವೊಲಿಕೆ:

ಪಂಚಾಯತ್‌ನ ಈ ಹಿಂದಿನ ಪಿಡಿಒ ನಾಗೇಶ್‌ರವರ ವರ್ಗಾವಣೆ ವಿಚಾರದಲ್ಲಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ವಸಂತರವರ ರಾಜೀನಾಮೆ ಅಂಗೀಕಾರ ಮಾಡದೆ ಅಧ್ಯಕ್ಷರು ಅವರ ಮನವೊಲಿಸುವಂತೆ ಎಲ್ಲಾ ಸದಸ್ಯರು ಸಲಹೆ ನೀಡಿದರು. ಪಿಡಿಒ ನಾಗೇಶ್‌ರವರನ್ನು ಸದ್ಯದ ಮಟ್ಟಿಗೆ ಏಪ್ರಿಲ್ ತಿಂಗಳಿನವರೆಗೆ ವರ್ಗಾವಣೆಗೊಳಿಸದಂತೆ ಈ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಂಡು ಶಾಸಕರಿಗೆ ಹಾಗೂ ಸರಕಾರಕ್ಕೆ ಕಳುಹಿಸಲಾಗಿತ್ತು. ಆದರೂ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ‘ನಮ್ಮ ನಿರ್ಣಯಕ್ಕೆ ಬೆಲೆ ಇಲ್ಲವೇ?’ ಎಂದು ಪ್ರಶ್ನಿಸಿ ಸದಸ್ಯ ವಸಂತ ‘ಶ್ರೀದುರ್ಗಾ’ ರವರು ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ರಾಜೀನಾಮೆ ಪತ್ರವನ್ನು ಸಭೆಯಲ್ಲಿ ಉಲ್ಲೇಖಿಸಲಾಗಿ, ವಸಂತರವರನ್ನು ಮನವೊಲಿಸಿ ರಾಜೀನಾಮೆ ಹಿಂಪಡೆಯಲು ಎಲ್ಲಾ ಸದಸ್ಯರು ಸಹಮತ ಸೂಚಿಸಿದರು. ರಾಜೀನಾಮೆ ಅಂಗೀಕಾರ ಮಾಡದಂತೆ ಸದಸ್ಯ ರುಕ್ಮಯ್ಯರು ಹೇಳಿದರು.

LEAVE A REPLY

Please enter your comment!
Please enter your name here