ಸಂಘದ ಯಶಸ್ವಿಯಲ್ಲಿ ತೊಡಗಿಸಿಕೊಂಡ ಮೋನಪ್ಪ ಗೌಡರ ಸಹಕಾರ ಸಂಘಕ್ಕೆ ನಿರಂತರ ಬೇಕಿದೆ- ಆನಂದ ಮೇಲ್ಮನೆ
ಕಪ್ಪು ಚುಕ್ಕಿಯಿಲ್ಲದೇ ಕಾರ್ಯನಿರ್ವಹಿಸಿದ ಕೀರ್ತಿ ಮೋನಪ್ಪ ಗೌಡರಿಗೆ ಸಲ್ಲುತ್ತದೆ- ಸಿ.ಜೆ ಚಂದ್ರಕಲಾ ಅರುವಗುತ್ತು
ನಗುಮುಖದ ಸೇವೆ ನೀಡಿದಾಗ ಮಾತ್ರ ಗ್ರಾಹಕರ ಮನ ಗೆಲ್ಲಲು ಸಾಧ್ಯ- ಪ್ರವೀಣ್ ಕುಂಟ್ಯಾನ
ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸಿ ಸಂಘದ ಅಭಿವೃದ್ಧಿಯಲ್ಲಿ ಮೋನಪ್ಪ ಗೌಡರ ಪಾತ್ರ ಮಹತ್ತರ- ಗಣೇಶ್ ಉದನಡ್ಕ
ಸಂಘದ ಅಭಿವೃದ್ಧಿಗಾಗಿ ಬೆವರನ್ನು ಸುರಿಸಿಕೊಂಡು ಕರ್ತವ್ಯ ನಿರ್ವಹಿಸಿದ್ದಾರೆ- ಅಶೋಕ್ ಗೌಡ
ಕಾಣಿಯೂರು: ಸಂಘದ ವ್ಯಾಪ್ತಿಯ ಮೂರು ಶಾಖೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾ ಹಂತ ಹಂತವಾಗಿ ಉನ್ನತ್ತ ಮೆಟ್ಟಿಲನ್ನೇರಿ ಮೋನಪ್ಪ ಗೌಡರು ಯಶಸ್ಸನ್ನು ಸಾಧಿಸಿದ್ದಾರೆ. ಯಾವುದೇ ಸಾಲ ವಸೂಲಾತಿ ಸಂದರ್ಭದಲ್ಲಿಯೂ ಮೋನಪ್ಪರವರ ಪಾತ್ರ ಪ್ರಮುಖವಾಗಿತ್ತು. ಸರಳ ಸಜ್ಜನಿಕೆಯೊಂದಿಗೆ ಸಂಘದ ಸದಸ್ಯರೊಂದಿಗೆ ಹೊಂದಾಣಿಕೆಯಿಂದ ಇರುತ್ತಾ, ಸಂಘದ ಯಶಸ್ವಿಯಲ್ಲಿ ತೊಡಗಿಸಿಕೊಂಡ ಮೋನಪ್ಪ ಗೌಡರ ಸಹಕಾರ, ಮಾರ್ಗದರ್ಶನ ಸಂಘಕ್ಕೆ ಮುಂದಿನ ದಿನಗಳಲ್ಲಿ ನಿರಂತರ ಬೇಕಾಗಿದೆ ಎಂದು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಹೇಳಿದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನ ೩೦ರಂದು ಸೇವೆಯಿಂದ ನಿವೃತ್ತಿಗೊಂಡ ಮೋನಪ್ಪ ಗೌಡ ಅಂಬುಲರವರಿಗೆ ಡಿ ೩ರಂದು ಸಂಘದ ಕಚೇರಿ ಕಾಣಿಯೂರಿನಲ್ಲಿ ಹಿತೈಷಿಗಳಿಂದ ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿ.ಜೆ ಚಂದ್ರಕಲಾ ಅರುವಗುತ್ತು ಮಾತನಾಡಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೩೭ವರ್ಷಗಳ ಕಾಲ ಸೇವೆ ಸಲ್ಲಿಸಿ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಕಾರ್ಯನಿರ್ವಹಿಸಿದ ಕೀರ್ತಿ ಮೋನಪ್ಪ ಗೌಡರಿಗೆ ಸಲ್ಲುತ್ತದೆ ಎಂದರು. ಪ್ರಗತಿಪರ ಕೃಷಿಕ ಪ್ರವೀಣ್ ಕುಂಟ್ಯಾನ ಮಾತನಾಡಿ, ಸಿಬ್ಬಂದಿಗಳ ವಿನಯ, ವಿಧೇಯತೆಯ ಗ್ರಾಹಕ ಸೇವೆಯಿಂದ ಸಹಕಾರಿ ಬ್ಯಾಂಕ್ಗಳ ಆರ್ಥಿಕ ವ್ಯವಹಾರ ಪ್ರಗತಿ ಸಾಧಿಸುತ್ತಲೇ ಸಾಗುತ್ತದೆ. ಸಂಸ್ಥೆಗೆ ಬಂದ ಗ್ರಾಹಕರಿಗೆ ಉತ್ತಮ, ನಗುಮುಖದ ಸೇವೆ ನೀಡಿದಾಗ ಮಾತ್ರ ಗ್ರಾಹಕರ ಮನ ಗೆಲ್ಲಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಿವೃತ್ತಿಗೊಂಡ ಮೋನಪ್ಪ ಗೌಡ ಅವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಸದಾ ನೆನಪಿನಲ್ಲಿ ಉಳಿಯುವಂತಾಗಿದೆ ಎಂದರು. ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಗ್ರಾಹಕರಿಗೆ ನಗುಮೊಗದ ಸೇವೆ ನೀಡುವ ಮೂಲಕ ಎಲ್ಲರಿಗೆ ಅಚ್ಚುಮೆಚ್ಚಿನವರಾಗಿ ಗುರುತಿಸಿಕೊಂಡ ಮೋನಪ್ಪ ಗೌಡರದ್ದು ಅಹಂ ಇಲ್ಲದ ಜೀವನವಾಗಿದೆ. ೩೭ ವರ್ಷಗಳ ಕಾಲ ಸಂಘದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ ಮೋನಪ್ಪ ಗೌಡರ ಮಹತ್ತರ ಪಾತ್ರ ಸಂಘದ ಅಭಿವೃದ್ಧಿಯಲ್ಲಿ ಇದೆ ಎಂದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಅದೇ ರೀತಿ ವೃತ್ತಿಯಿಂದ ನಿವೃತ್ತಿ ಹೊಂದಲೇ ಬೇಕಾಗುತ್ತದೆ. ಸಂಘದಲ್ಲಿ ವಿವಿಧ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಸಂಘದ ಅಭಿವೃದ್ಧಿಗಾಗಿ ತನ್ನ ಬೆವರನ್ನು ಸುರಿಸಿಕೊಂಡು ಮೋನಪ್ಪ ಗೌಡರವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದರು. ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಸವಣೂರು ಡಿಸಿಸಿ ಬ್ಯಾಂಕಿನ ಮ್ಯಾನೇಜರ್ ವಿಶ್ವನಾಥರವರು ಶುಭಹಾರೈಸಿದರು. ಮೋನಪ್ಪ ಗೌಡರ ಸಹೋದರರಾದ ಹಿರಿಯರಾದ ಲಿಂಗಪ್ಪ ಗೌಡ ಅಂಬುಲ, ನಿವೃತ್ತ ಮೋನಪ್ಪ ಗೌಡ ಅಂಬುಲರವರ ಪತ್ನಿ ಬಾಲಕಿ ಅಂಬುಲ, ಪುತ್ರಿ ಲಿಖಿತಾ ಎ.ಎಂ., ಪುತ್ರ ಸಂದೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮೋನಪ್ಪ ಗೌಡ ಅಂಬುಲರವರ ಹಲವಾರು ಅಭಿಮಾನಿಗಳು ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ವಸಂತ ಅಬಿಕಾರ, ಮಾಧವ ಕರಂದ್ಲಾಜೆ, ವಿಜಯ ಚಂದ್ರಶೇಖರ ಅಂಬುಲ, ಧರ್ಣಪ್ಪ ಗೌಡ ಅಂಬುಲ, ಧರ್ಮರಾಜ್ ಕುಂಬ್ರ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು ಅನಿಸಿಕೆ ವ್ಯಕ್ತಪಡಿಸಿದರು. ಬಾಲಕೃಷ್ಣ ಗೌಡ ಕೋಳಿಗದ್ದೆ ವೈಯುಕ್ತಿಕವಾಗಿ ಮೋನಪ್ಪ ಗೌಡರನ್ನು ಸನ್ಮಾನಿಸಿದರು. ಧರ್ಮಪಾಲ ರೈ ಪಿಜಕ್ಕಳ ಪ್ರಾರ್ಥಿಸಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಸರಪಾಡಿ ವಂದಿಸಿದರು.
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ ದೋಳ್ಪಾಡಿ, ಚಾರ್ವಾಕ ಮತ್ತು ಕಾಣಿಯೂರು ಶಾಖೆಗಳಲ್ಲಿ ೩೭ ವರ್ಷಗಳ ಕಾಲ ವಿವಿದ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸುವ ಯೋಗ ನನ್ನ ಪಾಲಿಗೆ ಬಂದಿತ್ತು. ಅತ್ಯಂತ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಯಾರಿಗೂ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಿದ್ದೇನೆ ಎಂಬ ತೃಪ್ತಿ ನನಗಿದೆ. ನನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ.ಷ
ಮೋನಪ್ಪ ಗೌಡ ಅಂಬುಲ
ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ, ಚಾರ್ವಾಕ ಪ್ರಾ.ಕೃ.ಪ.ಸ.ಸಂಘ