ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ನಿರ್ಧಾರ
ಪುತ್ತೂರು: ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ನಿಟ್ಟಿನಲ್ಲಿ ಅಭಿಯಾನಕ್ಕೆ ವೇದಿಕೆ ರಚಿಸಲಾಗಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡುವ ಮೂಲಕ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.
ಈ ಅಭಿಯಾನದಲ್ಲಿ ಎಲ್ಲಾ ಪಕ್ಷದವರನ್ನು ಸೇರಿಸಿಕೊಂಡು ಸರಕಾರದ ವಿರುದ್ಧ ಹೋರಾಟ ಮಾಡದೆ ಸರಕಾರಕ್ಕೆ ಮನವರಿಕೆ ಮಾಡಿ ಯೋಜನೆ ಮಂಜೂರು ಮಾಡುವುದು. ಪುತ್ತೂರು ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಮೆಗಾ ಕಂಪನಿಗಳ ಸಿಎಸ್ಆರ್ ನಿಧಿ ಬಳಸುವಂತೆ ಮನವರಿಕೆ ಮಾಡುವುದು. ಈ ಉದ್ದೇಶ ಈಡೇರುವವರೆಗೆ ಹಂತ ಹಂತವಾಗಿ ಅಭಿಯಾನ ನಡೆಸುವುದು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳವಣಿಗೆಗೆ ಏನು ಬೇಕು ಎಂಬುದನ್ನು ಪಟ್ಟಿ ಮಾಡಿ ಭವಿಷ್ಯದಲ್ಲಿ ಹಂತ ಹಂತವಾಗಿ ಜಾಗೃತಿ ಮೂಡಿಸಲು ವೇದಿಕೆ ಮುಂದಾಗಿದೆ.
ಈ ಸಂಬಂಧ ಡಿ.6ರಂದು ಪುತ್ತೂರು ವಾರ್ತಾಇಲಾಖೆ ಕಟ್ಟಡದಲ್ಲಿ ಅಭಿಯಾನ ಸಮಿತಿಯ ಪ್ರಮುಖರಿಂದ ಸಂವಾದ ನಡೆಯಿತು. ಪುತ್ತೂರು ಸರಕಾರಿ ಕಾಲೇಜು ಅಭಿಯಾನ ಸಮಿತಿಯ ಗೌರವಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರರವರು ಮಾತನಾಡಿ, ಎಲ್ಲಾ ಪಕ್ಷಗಳ, ಜಾತಿ-ಧರ್ಮಗಳ ಮುಖಂಡರನ್ನು ಸೇರಿಸಿಕೊಂಡು ಸಮಿತಿ ರಚಿಸಲಾಗಿದೆ. ನಮ್ಮ ಅಭಿಯಾನವು ರಾಜಕೀಯ ರಹಿತವಾಗಿಯೇ ಇರುತ್ತದೆ. ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಿಗೆ ಕೇಂದ್ರವಾಗಿ ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕಿದೆ. ಈಗಾಗಲೇ ಪುತ್ತೂರಿನಲ್ಲಿ 40 ಎಕರೆ ಜಾಗವನ್ನು ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಮೀಸಲಿಡಲಾಗಿದೆ. ಇದರ ಅನುಷ್ಠಾನ ಆಗುವಲ್ಲಿ ಹಂತ ಹಂತದ ಅಭಿಯಾನವನ್ನು ಸಮಿತಿ ಮಾಡಲಿದೆ ಎಂದರು.
ಮುಖ್ಯಮಂತ್ರಿ ಭೇಟಿ: ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಮಿತಿ ಭೇಟಿ ಮಾಡಲಿದೆ. ಶಾಸಕ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಅಗತ್ಯತೆಯ ಬಗ್ಗೆ ಮನವರಿಕೆ ಮಾಡಲಾಗುವುದು. ಮೆಡಿಕಲ್ ಕಾಲೇಜಿಗೆ ಮುನ್ನ ಪುತ್ತೂರು ಸರಕಾರಿ ಆಸ್ಪತ್ರೆಯನ್ನು 400 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು. ಹೊಸ ಕಟ್ಟಡ ಒದಗಿಸಬೇಕು. ಈ ಬಗ್ಗೆ ಸಲ್ಲಿಕೆಯಾಗಿರುವ ಪ್ರಸ್ತಾವನೆಗೆ ಮಂಜೂರಾತಿ ನೀಡುವಂತೆಯೂ ಒತ್ತಾಯಿಸಲಾಗುವುದು ಎಂದು ಅಣ್ಣಾ ವಿನಯಚಂದ್ರ ಹೇಳಿದರು.
ಆಂದೋಲನ ರೀತಿಯಲ್ಲಿ ಅಭಿಯಾನ: ಸಮಿತಿಯ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಅವರು ಮಾತನಾಡಿ, ಇದೊಂದು ಜನಪರ ಅಭಿಯಾನವಾಗಿ ಆರಂಭವಾಗಿ ಮುಂದಿನ ಹಂತದಲ್ಲಿ ಆಂದೋಲನವಾಗಲಿದೆ. ವೈದ್ಯರು, ವಕೀಲರು, ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲಾ ವರ್ಗದವರ ಜತೆ ಸಂವಾದ ನಡೆಸಲಿದ್ದೇವೆ. ವಿದ್ಯಾರ್ಥಿ ಆಂದೋಲನವೂ ನಡೆಯಲಿದೆ ಎಂದರು. ಸಮಿತಿಯ ಉಪಾಧ್ಯಕ್ಷರಾದ ಬಾಲಕೃಷ್ಣ ಬೋರ್ಕರ್, ಝೇವಿಯರ್ ಡಿಸೋಜ, ರೂಪೇಶ್ ರೈ ಅಲಿಮಾರ್, ವಿಶ್ವಪ್ರಸಾದ್ ಸೇಡಿಯಾಪು, ಕಾರ್ಯದರ್ಶಿ ರಂಜಿತ್ ಬಂಗೇರ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್. ಮಹಮ್ಮದ್ ಆಲಿ, ಅಮಳ ರಾಮಚಂದ್ರ, ಪುರುಷೋತ್ತಮ ಕೋಲ್ಪೆ ಮಾತನಾಡಿದರು.
ಪಿಪಿಪಿ ಮಾದರಿ ಆಸ್ಪತ್ರೆಗೆ ಬೇಡ
ಜಿಲ್ಲಾ ಸರಕಾರಿ ಆಸ್ಪತ್ರೆಗಳನ್ನು ಮೆಡಿಕಲ್ ಕಾಲೇಜ್ ಆಗಿ ಪರಿವರ್ತಿಸಲು ಪಿಪಿಪಿ (ಸರಕಾರಿ- ಖಾಸಗಿ ಪಾಲುದಾರಿಕೆ) ಯೋಜನೆ ಜಾರಿಗೆ ಬಂದಿದ್ದು, ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಮಾಡಿದರೆ ಅದು ಮತ್ತೊಂದು ಖಾಸಗಿ ಮೆಡಿಕಲ್ ಕಾಲೇಜ್ ಆಗುವ ಸಾಧ್ಯತೆ ಇದೆ. ಇದನ್ನು ವಿರೋಧಿಸಲಾಗುವುದು. ಪುತ್ತೂರಿನಲ್ಲಿ ಪೂರ್ಣ ಪ್ರಮಾಣದ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಲು ಸಮಿತಿ ನಿರ್ಧರಿಸಿದೆ ಎಂದು ಮುಖಂಡರು ತಿಳಿಸಿದರು.