ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ

0

  • ಮನಸ್ಸಿನ ವಿಕಸನವಾಗುವ ಶಿಕ್ಷಣ ಅತೀ ಮುಖ್ಯ – ವಸಂತ ಮಾಧವ
  • ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಯತ್ನಿಸೋಣ – ಲೋಕೇಶ್ ಎಸ್.ಆರ್.
  • ವಿವೇಕಾನಂದ ವಿದ್ಯಾಸಂಸ್ಥೆ ಸಮಾಜಕ್ಕೆ ಉತ್ತಮ ನಾಗರಿಕನನ್ನಾಗಿಸಿದೆ-ಡಾ. ಅರ್ಚನಾ ಕಾವೇರಿ
  • ಸಂಸ್ಕೃತಿ ಸಂಸ್ಕಾರದ ಜೊತೆಗೆ ಕೆಜಿಯಿಂದ ಪಿಜಿಯವರೆಗಿನ ಶಿಕ್ಷಣ – ಅಚ್ಚುತ ನಾಯಕ್

ಪುತ್ತೂರು: ಇಲ್ಲಿನ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಂಭ್ರಮ ದ. 8 ರಂದು ಆರಂಭಗೊಂಡಿತು. ಅಪರಾಹ್ನ ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯ ಬಿರ್ಮಣ್ಣ ಗೌಡರವರು ದೀಪ ಪ್ರಜ್ವಲಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಭಾ ಕಾರ್ಯಕ್ರಮ: ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯಾಭಾರತಿ ಕರ್ನಾಟಕದ ಕಾರ್ಯದರ್ಶಿ ವಸಂತ ಮಾಧವ ಕಲ್ಲಡ್ಕರವರು ’ಪ್ರಸ್ತುತ ಜಗತ್ತಿನ ಅನೇಕ ಕೆಟ್ಟ ವಿದ್ಯಮಾನಗಳನ್ನು ಗಮನಿಸಿದಾಗ ಅದಕ್ಕೆ ಮೂಲ ಕಾರಣ ಮನಸ್ಸಿನ ವಿಕಸನದ ಕೊರತೆಯಾಗಿದೆ. ಮನಸ್ಸು ವಿಕಸನಗೊಂಡಾಗ ಶರೀರವೂ ಬುದ್ದಿಯೂ ವಿಕಸನಗೊಳ್ಳುತ್ತದೆ. ಇದರಿಂದ ಜ್ಞಾನವೂ ತನ್ನಿಂದತಾನೇ ವೃದ್ದಿಯಾಗುತ್ತದೆ. ಗ್ರಾಮವಿಕಾಸ ಮತ್ತು ಕುಟುಂಬ ಪ್ರಬೋಧನ ವ್ಯವಸ್ಥೆಯ ಮೂಲಕ ಮಗುವಿನಲ್ಲಿ ಮಾತ್ರವಲ್ಲದೇ ಕುಟುಂಬದಲ್ಲಿಯೂ ಭಾರತೀಯ ಸಂಸ್ಕೃತಿಯ ಅಳವಡಿಕೆಯಾಗುವ ರೀತಿಯಲ್ಲಿ ವಿದ್ಯಾಭಾರತಿಯ ಅಧೀನದಲ್ಲಿರುವ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ’ ಎಂದರು.

ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ರವರು ಮಾತನಾಡಿ ’ಮಗುವಿನ ಗುಣಮಟ್ಟದ ಶಿಕ್ಷಣಕ್ಕಾಗಿ ಪೋಷಕರೂ ಶಿಕ್ಷಕರು ಜೊತೆಗೂಡಿ ಪ್ರಯತ್ನಿಸೋಣ’ ಎಂದರು.

ಮುಖ್ಯ ಅತಿಥಿಯಾಗಿದ್ದ ಪುತ್ತೂರು ಸರಕಾರಿ ಆಸ್ಪತ್ರೆಯ ಪ್ರಸೂತಿ ಹಾಗು ಸ್ತ್ರೀರೋಗ ತಜ್ಞೆ ಡಾ. ಅರ್ಚನಾ ಕಾವೇರಿಯವರು ಮಾತನಾಡಿ ’ವ್ಯಕ್ತಿತ್ವ ನಿರ್ಮಾಣ ಮತ್ತು ಸಂಸ್ಕೃತಿ ರೂಪುಗೊಳ್ಳುವಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ಗುರುಗಳ ಪಾತ್ರ ಅಮೋಘವಾದುದು. ಸಮಾಜಕ್ಕೆ ಉತ್ತಮ ನಾಗರಿಕನನ್ನಾಗಿಸಿದ ಇಲ್ಲಿನ ಎಲ್ಲಾ ಅನುಭವ ನಮ್ಮ ಜೀವನ ನಿರ್ಮಿಸಿವೆ’ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಜಿ ಅಚ್ಚುತ ನಾಯಕ್ ರವರು ಮಾತನಾಡಿ ’ವಿವೇಕಾನಂದ ಶಾಲೆ ದ.ಕ. ಜಿಲ್ಲೆಯಲ್ಲಿಯೇ ವಿಶೇಷ ಗೌರವ ಅಭಿಮಾನಕ್ಕೆ ಪಾತ್ರವಾದ ಶಾಲೆಯಾಗಿದೆ. ಹಿಂದು ಸಂಸ್ಕೃತಿ ಸಂಸ್ಕಾರಕ್ಕೆ ಅನುಗುಣವಾದ ಆಂಗ್ಲಮಾಧ್ಯಮ ಶಾಲೆಯಾಗಿದೆ. ಕೆಜಿಯಿಂದ ಪಿಜಿಯವರೆಗಿನ ಶಿಕ್ಷಣ ನೀಡುತ್ತಿರುವ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಏರುವಲ್ಲಿ ತಮ್ಮೆಲ್ಲರ ಸಹಕಾರವಿರಲಿ’ ಎಂದರು.

ಪ್ರತಿಭಾ ಪುರಸ್ಕಾರ: 2022-23 ನೇ ಸಾಲಿನಲ್ಲಿ ಶೈಕ್ಷಣಿಕ, ಕ್ರೀಡೆ, ವಿಜ್ಞಾನ, ಸ್ಕೌಟ್ ಗೈಡ್ಸ್ ಗಳಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಅವರ ಪೋಷಕರ ಜೊತೆಗೂಡಿ ಗೌರವಿಸಲಾಯಿತು.

ಮನೆನಿರ್ಮಾಣಕ್ಕೆ ಧನಸಹಾಯ: ಶಾಲಾ ಸಹಾಯಕಿ ನಾಗಮ್ಮರವರಿಗೆ ಮನೆ ನಿರ್ಮಾಣದ ಸಲುವಾಗಿ ಶಿಕ್ಷಕರು ಮತ್ತು ಮಕ್ಕಳು ಸಂಗ್ರಹಿಸಿದ ಧನಸಹಾಯ ಮೊತ್ತವನ್ನು ಈ ಸಂದರ್ಭದಲ್ಲಿ ನಾಗಮ್ಮರವರಿಗೆ ಹಸ್ತಾಂತರಿಸಲಾಯಿತು.

ವೇದಿಕೆಯಲ್ಲಿ ಶಾಲಾ ಸಂಚಾಲಕ ರವಿನಾರಾಯಣ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶಾಂತಿ ಶೆಣೈ, ಮುಖ್ಯಗುರು ಸತೀಶ್ ಕುಮಾರ್ ರೈ ಎಸ್., ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಮಮತಾ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಸಂಧ್ಯಾ, ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಶ್ರೀನಿಧಿ, ಪ್ರಾಥಮಿಕ ವಿದ್ಯಾರ್ಥಿ ನಾಯಕ ನಿರೀಕ್ಷಿತ್ ಹೆಗ್ಡೆ ಉಪಸ್ಥಿತರಿದ್ದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಶಾಲೆಯ ಧ್ಯೇಯ, ಶಿಕ್ಷಣ ವ್ಯವಸ್ಥೆ ಮತ್ತು ಗತಸಾಲಿನ ಸಾಧನೆಗಳ ಮೆಲುಕು ಹಾಕಿದರು. ಆಡಳಿತ ಮಂಡಳಿ ಸದಸ್ಯ ಹರೇಕೃಷ್ಣ ವಂದಿಸಿದರು. ಶಿಕ್ಷಕಿಯರಾದ ಸೌಮ್ಯ, ಪ್ರತಿಮಾ, ಕವಿತಾ ಹಾಗು ಆಶಾ ಕಾರ್ಯಕ್ರಮ ನಿರೂಪಿಸಿದರು.

ಸಭಾಕಾರ್ಯಕ್ರಮಕ್ಕೆ ಮೊದಲು ಅತಿಥಿಗಳು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ವಿದ್ಯಾರ್ಥಿಗಳಿಂದ ಶ್ಲೋಕ ಪಠಣ, ಸುಭಾಷಿತ, ನುಡಿಮುತ್ತು, ಪಂಚಾಂಗ ವಾಚನ ನಡೆಯಿತು.

ಸಭಾ ಕಾರ್ಯಕ್ರಮದ ಬಳಿಕ ತುಳುನಾಡ ಸಂಸ್ಕೃತಿ ಬಿಂಬಿಸುವ ರೂಪಕ, ಪೌರಾಣಿಕ ಕಥಾನಕ ರೂಪಕಗಳ ಸಹಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.

ಇಂದು ಎರಡನೇ ದಿನದ ಸಂಭ್ರಮ

ದ. 9 ರಂದು ಎರಡನೇ ದಿನದ ವಾರ್ಷಿಕೋತ್ಸವ ಸಂಭ್ರಮ ಅಪರಾಹ್ನ ಆರಂಭವಾಗಲಿದೆ. ಗೋವರ್ಧನ್ ಕುಮಾರ್ ಐ. ದೀಪ ಪ್ರಜ್ವಲಿಸಲಿದ್ದಾರೆ. ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮಾಜಿಕ ಕಾರ್ಯಕರ್ತ ಸುರೇಶ್ ಪಕ್ಕಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ವೀರಯ್ಯ ಹಿರೇಮಠ ಹಾಗು ಯುರೋಲಜಿಸ್ಟ್ ಡಾ. ಅವಿನಾಶ್ ರವರು ಭಾಗವಹಿಸಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯಲಿವೆ.

LEAVE A REPLY

Please enter your comment!
Please enter your name here