ಹನುಮಗಿರಿ: ಈಶ್ವರಮಂಗಲ ಗಜಾನನ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ

0

ಈಶ್ವರಮಂಗಲ: ಹನುಮಗಿರಿ ಶ್ರೀ ಗಜಾನನ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವವು ಡಿ.9 ರಂದು ನಡೆಯಿತು. ಸಂಸ್ಥೆಯ ಗೌರವಾಧ್ಯಕ್ಷ ಜಿ.ಕೆ. ಮಹಾಬಲೇಶ್ವರ ಭಟ್‌ರವರು ದೀಪ ಬೆಳಗಿಸುವ ಮೂಲಕ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ನನ್ಯ ಅಚ್ಯುತ ಮೂಡತ್ತಾಯರವರು ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ವೇದಿಕೆ ಮೇಲೆ ನಿಂತು ಮಾತನಾಡಬೇಕಾದರೆ ಒಂದು ರೀತಿಯ ಭಯ ಇತ್ತು ಆದರೆ ಇಂದು ಶಾಲೆಗಳಲ್ಲಿ ಮಕ್ಕಳಿಗೆ ಎಲ್ಲಾ ವಿಧದಲ್ಲೂ ಪ್ರೋತ್ಸಾಹ ಕೊಟ್ಟು ಅವರಿಗೆ ವೇದಿಕೆಯನ್ನು ನೀಡುವ ಮೂಲಕ ಅವರಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಗಜಾನನ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ವಿಧದಲ್ಲೂ ಪೂರಕ ವ್ಯವಸ್ಥೆಗಳನ್ನು ಮಾಡುತ್ತಿದ್ದು ವಿದ್ಯಾರ್ಥಿಗಳು ಕೂಡ ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡುವ ಮೂಲಕ ಶಾಲೆಗೆ ಕೀರ್ತಿಯನ್ನು ತರುತ್ತಿದ್ದಾರೆ, ವಿದ್ಯಾರ್ಥಿಗಳ ಪೋಷಕರು ಕೂಡ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಣಾಧಿಕಾರಿ ರಘುರಾಜ್ ಉಬರಡ್ಕ ಮಾತನಾಡಿ, ಮಕ್ಕಳ ಆಹಾರ, ಆರೋಗ್ಯ, ಅವಧಾನ ಈ ಮೂರು ವಿಚಾರಗಳ ಬಗ್ಗೆ ನಾವು ಚಿಂತನೆ ಮಾಡಬೇಕಾಗಿದೆ. ಮಕ್ಕಳ ಆಹಾರ ಹೇಗಿರಬೇಕು ಮತ್ತು ಅವರ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದರ ಬಗ್ಗೆ ವಿವರಿಸಿದರು. ಪ್ರಾಂಶುಪಾಲ ಕೆ.ಶಾಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಸಂಸ್ಥೆ ಸಂಚಾಲಕ ಶಿವರಾಮ ಪಿ. ಸ್ವಾಗತಿಸಿದರು. ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಎನ್.ನರೇಂದ್ರ ಭಟ್ ಕನ್ನಡ ಮಾಧ್ಯಮ ಶಾಲೆಯ ವರದಿ ವಾಚಿಸಿದರು. ಆಂಗ್ಲ ಮಾಧ್ಯಮ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸೌಮ್ಯ ವರದಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ಕ್ರೀಡಾ ಕೂಟದ ಬಗ್ಗೆ ವರದಿ ವಾಚಿಸಿದರು. ಶಿಕ್ಷಕಿ ಪುನೀತ 2021-22ನೇ ಸಾಲಿನ ಸಾಧಕರ ಪಟ್ಟಿಯನ್ನು ವಾಚಿಸಿದರು.


ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬಹುಮಾನ
2020-21 ನೇ ಸಾಲಿನ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಕೃತಿ ಕೆ.ಎಂ., ಅಭಿರಾಮ್, ಅನುಪಮ, ಅಶ್ವಿಜ, ಮಧುಸೂದನ್, ಪವನ್ ರೈ, ಪ್ರಥಮ್, ಸ್ವಾತಿ ಕೆ.ಬಿ., ಶಿವಗಗನ್, ವಿಕಾಸ್ ಶೆಟ್ಟಿ, ವಿದ್ಯಾ, ಯಶವಂತ್, ಭರತ್ ಸಿ.ಜಿ. ಸೋನಿಕ ಹಾಗೂ ಒಳ್ಳೆಯ ವಿದ್ಯಾರ್ಥಿ ಪ್ರಜ್ಞಾ ಡಿ, ಫಿಯೋಸ್, ಅನನ್ಯ ಇವರುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಶಿಕ್ಷಕಿಯರಾದ ರೇಖಾ, ಸೌಮ್ಯ ಡಿ., ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರಾಜಶ್ರೀ ವಂದಿಸಿದರು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ
ಬೆಳಿಗ್ಗೆ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿಯವರಿಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಪೌರಾಣಿಕ ಯಕ್ಷಗಾನ ಸೇರಿದಂತೆ ಬೆಳಿಗ್ಗೆಯಿಂದ ಸಂಜೆ ತನಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿತು.

ಚಿತ್ರ: ಜ್ಯೋತಿ ಈಶ್ವರಮಂಗಲ

LEAVE A REPLY

Please enter your comment!
Please enter your name here