ಪುತ್ತೂರು:ಬದಿಯಡ್ಕದಲ್ಲಿ ದಂತ ವೈದ್ಯರಾಗಿದ್ದ ಪುತ್ತೂರು ಮೂಲದ ಡಾ.ಕೃಷ್ಣಮೂರ್ತಿ ಅವರ ಶವ ರೈಲು ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸರು ತನಿಖೆ ಪೂರ್ತಿಗೊಳಿಸಿದ್ದಾರೆ.
ಡಾ.ಕೃಷ್ಣಮೂರ್ತಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬಹುತೇಕ ಖಚಿತವಾಗಿದೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ನ.8ರಂದು ಡಾ. ಕೃಷ್ಣಮೂರ್ತಿ ಅವರು, ಕಾಸರಗೋಡಿನಿಂದ ಮಂಗಳೂರಿಗೆ ಬಂದು ಅಲ್ಲಿಂದ ಉಡುಪಿ, ಕುಂದಾಪುರಕ್ಕೆ ಬಸ್‌ನಲ್ಲಿ ತೆರಳಿರುವುದು ವಿವಿಧ ಕಡೆಯ ಸಿಸಿ ಟಿವಿ ಫೂಟೇಜ್‌ಗಳನ್ನು ಪರಿಶೀಲನೆ ನಡೆಸಿದಾಗ ಕಂಡುಬಂದಿದೆ. ಮಂಗಳೂರಿನಿಂದ ಕುಂದಾಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಆಗಮಿಸಿದ್ದುದು ಮಧ್ಯಾಹ್ನ 12.30ಕ್ಕೆ ಕುಂದಾಪುರ ಶಾಸಿ ಸರ್ಕಲ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅನಂತರ ದ್ವಾರಕಾ ಹೊಟೇಲ್‌ಗೆ ತೆರಳಿರುವುದು ಕಂಡುಬಂದಿದೆ.
ವೈದ್ಯರು ಒಬ್ಬಂಟಿಯಾಗಿಯೇ ನಡೆದುಕೊಂಡು ಹೋಗುತ್ತಿರುವುದು, ಮಂಗಳೂರಿನ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವರು ಬ್ಯಾಗೊಂದನ್ನು ಹಾಕಿಕೊಂಡು ಒಬ್ಬಂಟಿಯಾಗಿಯೇ ತೆರಳುತ್ತಿದ್ದರು.
ಶರ್ಟ್ ಬದಲಾಯಿಸಿದ್ದರೇ..?:
ಈ ನಡುವೆ, ಬದಿಯಡ್ಕದಿಂದ ಹೊರಡುವಾಗ ತಾನು ಧರಿಸಿದ್ದ ಅಂಗಿಯ ಬದಲು ಶವದಲ್ಲಿ ಬೇರೆ ಅಂಗಿ ಇದ್ದುದರಿಂದ ಸಂಶಯ ವ್ಯಕ್ತವಾಗಿದೆ. ಬದಿಯಡ್ಕದಿಂದ ಕುಂದಾಪುರಕ್ಕೆ ತೆರಳಿದ್ದ ಅವರು ನಡುವೆ ಶರ್ಟ್ ಬದಲಾವಣೆ ಮಾಡಿದ್ದರೇ ಎನ್ನುವ ಬಗ್ಗೆ ಪೊಲೀಸರು ಸಿಸಿಟಿವಿಗಳನ್ನು ಗಮನಿಸುತ್ತಿದ್ದಾರೆ. ಡಾ.ಕೃಷ್ಣಮೂರ್ತಿ ಅವರ ಜೊತೆಗಿದ್ದ ಬ್ಯಾಗ್ ಪೊಲೀಸರಿಗೆ ಲಭಿಸಿಲ್ಲ. ಮಾತ್ರವಲ್ಲದೆ, ಅವರು ಧರಿಸಿದ್ದ ಬೆಲ್ಟ್ ಮತ್ತು ವಾಚ್ ಪ್ರತ್ಯೇಕವಾಗಿ ಸಿಕ್ಕಿದ್ದು ವೈದ್ಯರೇ ಅದನ್ನು ಬೇರೆ ಬೇರೆ ಕಡೆ ಹಾಕಿದ್ದರೇ ಎಂಬ ಶಂಕೆಯಿದೆ. ಅಲ್ಲದೆ, ಬದಿಯಡ್ಕದಲ್ಲಿ ಹಾಕಿಕೊಂಡು ಹೋಗಿದ್ದ ಶರ್ಟ್‌ನ್ನು ಡಾ.ಕೃಷ್ಣಮೂರ್ತಿಯವರು ಎಲ್ಲಿಟ್ಟಿದ್ದಾರೆ ಎಂಬ ಬಗ್ಗೆಯೂ ಪೊಲೀಸರಿಗೆ ಸರಿಯಾದ ಮಾಹಿತಿ ದೊರತಿಲ್ಲ.
ಕೃಷ್ಣಮೂರ್ತಿಯವರು ಕುಂದಾಪುರದ ಶಾಸಿ ಸರ್ಕಲ್‌ನಿಂದ ರೈಲ್ವೇ ಸ್ಟೇಷನ್ ಬಳಿಗೆ ತೆರಳುವ ಹಾದಿಯಲ್ಲಿ ಇಬ್ಬರನ್ನು ಮಾತನಾಡಿಸಿದ್ದು ಏನೋ ಮಾಹಿತಿ ಕೇಳಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಶವ ದೊರೆತ ಬಳಿಕ ಮಣಿಪಾಲದಲ್ಲಿ ಪೋಸ್ಟ್ ಮಾರ್ಟಂ ನಡೆಸಿದ್ದು ಅದರ ವರದಿ ಇನ್ನೂ ಬಂದಿಲ್ಲ. ಘಟನೆ ಬಗ್ಗೆ ಫಾರೆನ್ಸಿಕ್ ವರದಿ ಬಂದ ಬಳಿಕ ಅದನ್ನು ತಾಳೆಹಾಕಿ ಪೊಲೀಸರು ನಿರ್ಧಾರಕ್ಕೆ ಬರಲಿದ್ದಾರೆ. ಆಸ್ತಿ ವಿಚಾರದಲ್ಲಿ ವಿವಾದ ಮತ್ತು ಕ್ಲಿನಿಕ್‌ಗೆ ಬಂದಿದ್ದ ಮುಸ್ಲಿಂ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರೆಂಬ ಆರೋಪ ಡಾ.ಕೃಷ್ಣಮೂರ್ತೀಯವರ ವಿರುದ್ಧ ಕೇಳಿಬಂದಿದ್ದರಿಂದಾಗಿ ಅವರ ಸಾವಿನ ಬಗ್ಗೆ ಅನುಮಾನಗಳು ಸೃಷ್ಟಿಯಾಗಿದ್ದವು. ಘಟನೆ ಬಗ್ಗೆ ಬದಿಯಡ್ಕ ಪೊಲೀಸರೂ ಪ್ರತ್ಯೇಕ ತನಿಖೆ ನಡೆಸುತ್ತಿದ್ದು, ಐದು ಮಂದಿಯನ್ನು ಈಗಾಗಲೇ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.