ಸರಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸಭೆ

0

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ಪೂರಕವಾಗಿ…. 300 ಬೆಡ್‌ನ ಸರಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಯಾವುದೇ ಸಮಸ್ಯೆಯಿಲ್ಲ

ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಗೆ ಮತ್ತೊಮ್ಮೆ ತಾಂತ್ರಿಕ ವರದಿ ಕಳುಹಿಸಲು ನಿರ್ಣಯ

ಪುತ್ತೂರು:ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ಪೂರಕವಾಗಿ ಸರಕಾರಿ ಆಸ್ಪತ್ರೆಯನ್ನು 300 ಬೆಡ್‌ನ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಕುರಿತು ಹೊಸ ಕಟ್ಟಡ ನಿರ್ಮಾಣದ ಪ್ರಸ್ತಾವನೆಗೆ ರಾಜ್ಯ ಆರೋಗ್ಯ ಇಲಾಖೆಯು ಅದು ಕಷ್ಟ ಸಾಧ್ಯ ಎಂದು ನೀಡಿರುವ ವರದಿಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ ಮತ್ತು 300 ಬೆಡ್‌ನ ಸರಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಗೆ ಮತ್ತೊಮ್ಮೆ ಇಂಜಿನಿಯರಿಂಗ್ ಘಟಕದಿಂದ ತಾಂತ್ರಿಕ ವರದಿ ಕಳುಹಿಸಲು ನಿರ್ಣಯ ಮಾಡಿದ ಘಟನೆ ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ನಡೆದಿದೆ.

ಡಿ.9ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯು ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಮೆಡಿಕಲ್ ಕಾಲೇಜಿಗೆ ಪ್ರತ್ಯೇಕವಾಗಿ ಬನ್ನೂರು ಪಂಚಾಯತ್ ವ್ಯಾಪ್ತಿಯಲ್ಲಿ 40 ಎಕ್ರೆ ಜಾಗ ಇದೆ. ಈ ನಿಟ್ಟಿನಲ್ಲಿ ಅದಕ್ಕೆ ಪೂರಕವಾಗಿ 300 ಬೆಡ್‌ನ ಆಸ್ಪತ್ರೆ ಇರಬೇಕು. ಅದಕ್ಕೆ ಬೇಕಾಗಿ ಸರಕಾರಿ ಆಸ್ಪತ್ರೆಯ ಸುತ್ತಮುತ್ತಲಿನ ಜಾಗವನ್ನು ಸೇರಿಸಿ ಒಟ್ಟು 5 ಎಕ್ರೆ ಜಾಗ ಕಾದಿರಿಸಲಾಗಿದೆ. ಜೊತೆಗೆ ರಾಜ್ಯ ಆರೋಗ್ಯ ಇಲಾಖೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಲಾಗಿದೆ. ಆದರೂ ವಿನಾ ಕಾರಣ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಕಷ್ಟ ಸಾಧ್ಯ ಎಂದು ವರದಿ ನೀಡುವುದು ಸರಿಯಲ್ಲ ಎಂದ ಶಾಸಕರು, ಕಳೆದ ಮೂರು ಬಾರಿ ಇಂತಹ ಸಮಸ್ಯೆ ಎದುರಾಗಿದೆ. ಇವತ್ತು ಇನ್ನೊಂದು ವರದಿಯಲ್ಲಿ ಸ್ಪಷ್ಟೀಕರಣ ಕೊಟ್ಟು ಕಳುಹಿಸಿ. ಕಟ್ಟಡ ಕಟ್ಟಲು ಏನೂ ಸಮಸ್ಯೆ ಇಲ್ಲ ಎಂದು ವರದಿ ಮಾಡಬೇಕು. ಇನ್ನೊಮ್ಮೆ ತಾಂತ್ರಿಕ ವರದಿ ಕಳುಹಿಸಿ, ನಾನು ಸರಕಾರದ ಪ್ರಿನ್ಸಿಪಾಲ್ ಸೆಕ್ರೆಟರಿಯಲ್ಲಿ ಮತ್ತು ಮಂತ್ರಿಯವರಲ್ಲಿ ಮಾತನಾಡುತ್ತೇನೆ. ಯಾಕೆಂದರೆ ನನಗೆ ಮೆಡಿಕಲ್ ಕಾಲೇಜು ಕೇಳಬೇಕಾದರೆ ಮೊದಲು ಇಲ್ಲಿ ಆಸ್ಪತ್ರೆ 300 ಬೆಡ್‌ಗೆ ಏರಿಸಬೇಕು. ರೋಗಿಗಳ ಸಂಖ್ಯೆಯ ಆಧಾರದಲ್ಲಿ ಮೆಡಿಕಲ್ ಕಾಲೇಜು ಮಾಡುತ್ತಾರೆ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ಅವರು ಮಾತನಾಡಿ ೨೦೨೦ರಲ್ಲಿ ಆಸ್ಪತ್ರೆಯ ಹೊರರೋಗಿಗಳು 64,565, ಒಳರೋಗಿಗಳು 3,551 ಸಂಖ್ಯೆ ದಾಖಲಾಗಿತ್ತು. 2022ರಲ್ಲಿ ಹೊರರೋಗಿಗಳು 80,776, ಒಳರೋಗಿಳು 4,600 ದಾಖಲಾಗುವ ಮೂಲಕ ಅತೀ ಹೆಚ್ಚು ರೋಗಿಗಳು ಆಸ್ಪತ್ರೆಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.ಇದರೊಂದಿಗೆ, ಡಯಾಲಿಸಿಸ್ ರೋಗಿಗಳ ಸಂಖ್ಯೆಯನ್ನು ದಾಖಲಿಸುವಂತೆ ಶಾಸಕರು ಸೂಚಿಸಿದರು.

ನಾನು ಖಾರವಾಗಿ ಉತ್ತರಿಸುತ್ತೇನೆ: ಕಟ್ಟಡ ನಿರ್ಮಾಣದ ವೇಳೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಬದಲಿ ವ್ಯವಸ್ಥೆ ಕುರಿತ ಪ್ರಶ್ನೆಗೆ, ಸದ್ಯಕ್ಕೆ ಕಟ್ಟಡವನ್ನು ಹಾಗೆ ಉಳಿಸಿ ಬದಿಯಿಂದ ಹಂತ ಹಂತವಾಗಿ ಕಟ್ಟಡ ನಿರ್ಮಾಣ ಮಾಡಲು ಎ.11ರ ಸಭೆಯ ನಿರ್ಣಯದಂತೆ ವರದಿ ಕಳುಹಿಸಲಾಗಿತ್ತು. ಜೊತೆಗೆ 2000ನೇ ಇಸವಿಯಲ್ಲಿ ಕಟ್ಟಿದ ಕಟ್ಟಡ ಇಷ್ಟು ಬೇಗ ಹೇಗೆ ಕೆಡುವುದು ಎಂದು ಪ್ರಶ್ನಿಸಿದ್ದಾರೆ. ಆದರೆ ನಾವು ಕಟ್ಟಡ ಕೆಡವದೆ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡುವುದು ಎಂದು ವರದಿ ನೀಡಲಾಗಿದೆ. ಇದು ವಾಸ್ತವವಾಗಿ ಕಷ್ಟಸಾಧ್ಯವಾಗಿದೆ. ಈ ಕುರಿತು ಇಂಜಿನಿಯರಿಂಗ್ ವಿಭಾಗದವರು ಮಾಹಿತಿ ಕೊಡಬೇಕೆಂದು ಹೇಳಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಅವರು ಮಾಹಿತಿ ನೀಡಿದರು. ಇಂಜಿನಿಯರಿಂಗ್ ವಿಭಾಗದಿಂದಲೂ ಕಟ್ಟಡ ಉಳಿಸಿಕೊಂಡೇ ಕಾಮಗಾರಿ ನಡೆಸುವ ವರದಿ ನೀಡಲಾಗಿದೆ. ಆದರೆ ಅವರು ಅದು ಕಷ್ಟ ಎಂದು ತಿಳಿಸಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಘಟಕದ ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ಅವರು ಮಾಹಿತಿ ನೀಡಿದರು. ವರದಿ ಕೇಳಿ ಗರಂ ಆದ ಶಾಸಕರು,ಕಷ್ಟ ಸಾಧ್ಯ ಎಂದು ಅವರಿಗೆ ಕೂತಲ್ಲಿಂದ ಹೇಗೆ ತಿಳಿಯುವುದು.ಅವರಿಗೆ ಕನಸು ಬೀಳುತ್ತದೆಯೋ ಅಲ್ಲಾ ಸ್ಯಾಟಲೈಟ್‌ನಲ್ಲಿ ನೋಡುತ್ತಾರೋ ಎಂದರಲ್ಲದೆ, ಈಗಾಗಲೇ 100 ಬೆಡ್‌ನ ಆಸ್ಪತ್ರೆ ಇದೆ ಅದಕ್ಕೆ ಇನ್ನೂ 200 ಬೆಡ್ ಮಾಡಲು ನಮ್ಮಲ್ಲಿ ವ್ಯವಸ್ಥೆ ಇಲ್ಲ. ಅದಕ್ಕೆ ಕಟ್ಟಡ ಕೇಳಿದ್ದೇವೆ ಹೊರತು ಕಟ್ಟಡ ನೆಲಸಮ ಮಾಡುತ್ತೇವೆ ಎಂದು ಉಲ್ಲೇಖ ಮಾಡಿಲ್ಲ. ಸರಕಾರಿ ಇಲಾಖೆಯ ಅಧಿಕಾರಿಗಳು ಕೆಲಸ ಆಗಬಾರದು ಎಂದು ಏನೇನೋ ಕಾರಣ ನೀಡುತ್ತಿದ್ದಾರೆ.ಅವರು ನಮ್ಮಲ್ಲಿ ಫಂಡ್ ಇಲ್ಲ ಎಂದು ಹೇಳಲಿ. 2021ರ ಅಕ್ಟೋಬರ್ 1 ಕ್ಕೆ ಸರಕಾರದ ಪ್ರದಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿತ್ತು. ಅಲ್ಲಿಂದ ಇಂಜಿನಿಯರಿಂಗ್ ಇಲಾಖೆಗೆ ಹೋದಾಗ ರೂ.189 ಕೋಟಿಯ ಎಸ್ಟಿಮೇಟ್ ಮಾಡಿ ಕಳುಹಿಸಲಾಗಿತ್ತು. ಇದೀಗ ಮೂರನೇ ಬಾರಿ ನಾವು ಇದೀಗ ಇದರ ಬೆನ್ನ ಹಿಂದಿದ್ದೇವೆ. ಆದರೆ ಏನೇನೋ ಕಾರಣ ನೀಡುವುದದನ್ನು ಬಿಟ್ಟು ವಾಸ್ತವವಾಗಿ ಪರಿಶೀಲನೆ ಮಾಡಬೇಕು. ಇಲ್ಲಿ ಇಂಜಿನಿಯರಿಂಗ್ ವಿಭಾಗ ತಾಂತ್ರಿಕ ವರದಿ ನೀಡಿದ ಮೇಲೆ ಎಲ್ಲೋ ಕೂತು ಎಂಬಿಬಿಎಸ್ ಆದವ ಕಾರಣ ಕೇಳುವುದು ಯಾಕೆ?. ಅವನು ರೋಗಿಗಳನ್ನು ನೋಡುವ ಕೆಲಸ ಮಾಡಲಿ.ತಾಂತ್ರಿಕ ವರದಿ ನಿಮ್ಮ ಕಡೆಯಿಂದ ಕೊಡಿ, ಅದರಲ್ಲಿ ಎಸ್‌ಆರ್ ರೇಟ್ ರಿವೈಸ್ ಮಾಡಿ ಕೊಡಿ.ನನ್ನ ಕಡೆಯಿಂದ ನಾನು ಉತ್ತರಿಸುತ್ತೇನೆ ಎಂದು ಶಾಸಕರು ಹೇಳಿದರು.

ಬ್ಯಾಂಕ್‌ಗಳಿಂದ ಸಿಎಫ್‌ಆರ್ ಅನುದಾನ ಕೇಳಿ: ಮೆಡಿಕಲ್ ಕಾಲೇಜಿನ ಹೆಸರಿನಲ್ಲಿ ಎಲ್ಲವೂ ಅಭಿವೃದ್ಧಿಯಾಗಬೇಕು.ಅದಕ್ಕೆ ನಾವು ಮೊದಲು ಆಸ್ಪತ್ರೆಗೆ ಆಯ್ಕೆ,. ಆಸ್ಪತ್ರೆಗೆ ಜಾಗ ಇದೆ.ಜಿಲ್ಲಾ ಕೇಂದ್ರಕ್ಕೆ ರಾಜಕೀಯ ನಿರ್ಧಾರ ಮುಖ್ಯ. ಆಸ್ಪತ್ರೆ ಮಾಡಲು ಹಿಂದೆ ಮುಂದೆ ನೋಡುವುದು ಅನುದಾನದ ಕೊರತೆ ಇರಬಹುದು.ಅದಕ್ಕೆ ನಾವು ಲೇಡಿಗೋಷನ್ ಆಸ್ಪತ್ರೆಯಂತೆ ಸಿಆರ್‌ಎಫ್‌ ಅನುದಾನದಲ್ಲಿ ಅದೇ ರೀತಿ ಪುತ್ತೂರಿನಲ್ಲಿ ಹಲವು ಬ್ಯಾಂಕ್‌ಗಳಿವೆ.ಪುತ್ತೂರಿನಲ್ಲಿ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಮಾತುಕತೆ ಮಾಡಿ ಅನುದಾನ ಕೇಳಬಹುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಅವರು ಸಲಹೆ ನೀಡಿದರು.

ಸಿಝೇರಿಯನ್ ಕಡಿಮೆ, ನಾರ್ಮಲ್ ಡೆಲಿವೆರಿ ಜಾಸ್ತಿ: ಆಸ್ಪತ್ರೆಯಲ್ಲಿ ಇದೀಗ 11 ಮಂದಿ ತಜ್ಞ ವೈದ್ಯರಿದ್ದಾರೆ.ಹೆರಿಗೆ ವಿಭಾಗಕ್ಕೂ ವೈದ್ಯರಿದ್ದಾರೆ.ಹಾಗಾಗಿ ಎಲ್ಲಾ ಹಂತದಲ್ಲೂ ಆಸ್ಪತ್ರೆಯ ಸೌಲಭ್ಯ ಹೆಚ್ಚಿದೆ. ಇದರಿಂದಾಗಿ ಸಾಮಾನ್ಯ ಹೆರಿಗೆಗಳು ಜಾಸ್ತಿ ಆಗುತ್ತಿದೆ. ಸಿಝೇರಿಯನ್ ಕಡಿಮೆ ಆಗಿದೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಪ್ರಸ್ತಾಪಿಸಿದರು.ಈ ನಿಟ್ಟಿನಲ್ಲಿ ಹೆರಿಗೆ ವಿಭಾಗಕ್ಕೆ ಹೆಚ್ಚುವರಿ ವೈದ್ಯರ ಪಡೆಯಲು ಅವಕಾಶವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಯವರು ಪ್ರಸ್ತಾಪಿಸಿದರು.

ನೂತನ ಡಯಾಲಿಸಿಸ್ ಕೇಂದ್ರಕ್ಕೆ ದಾನಿಗಳಿಂದ 6 ಡಯಾಲಿಸಿಸ್ ಯಂತ್ರ : ಅವಿಭಜಿತ ಪುತ್ತೂರು ತಾಲೂಕು ಆಗಿರುವ ಕಡಬ ಮತ್ತು ಪುತ್ತೂರು ತಾಲೂಕುಗಳಿಗೆ ಏಕೈಕ ಡಯಾಲಿಸಿಸ್ ಕೇಂದ್ರವಾಗಿರುವ ಪುತ್ತೂರಿಗೆ ನೂತನ ಡಯಾಲಿಸಿಸ್ ಕೇಂದ್ರದ ಕಟ್ಟಡವನ್ನು ನಿರ್ಮಿಸಲಾಗಿದ್ದು, ಈ ಕಟ್ಟಡದ ಕೆಲಸ ಕಾರ್ಯಗಳು ಪೂರ್ಣಗೊಂಡಿದೆ. ಇಲ್ಲಿನ ರೋಗಿಗಳ ಬೇಡಿಕೆಗೆ ಅನುಗುಣವಾಗಿ ಈಗಾಗಲೇ 6 ಡಯಾಲಿಸಿಸ್ ಯಂತ್ರವನ್ನು ಹೊಂದಿರುವ ಕೇಂದ್ರಕ್ಕೆ ಇನ್ನೂ 6 ಯಂತ್ರಗಳು ಬೇಕಾಗಿದೆ. ಅದನ್ನು ದಾನಿಗಳಿಂದ ಸಂಗ್ರಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಅವರು ನೂತನ ಡಯಾಲಿಸಿಸ್ ಕೇಂದ್ರ ನವೀಕರಣ ಸೇರಿ ರೂ. 60 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆದಿದೆ.ಈ ಕೇಂದ್ರದಲ್ಲಿ 12 ಯಂತ್ರಗಳನ್ನು ಅಳವಡಿಸಲು ಅವಕಾಶಗಳಿವೆ. ಪುತ್ತೂರಿನಲ್ಲಿ 54 ಮಂದಿಗೆ ನಿರಂತರ ಡಯಾಲಿಸಿಸ್ ಮಾಡಲಾಗುತ್ತಿದ್ದು, 48 ಮಂದಿ ವೈಟಿಂಗ್‌ನಲ್ಲಿದ್ದಾರೆ. ಇದನ್ನು ಪೂರ್ಣಗೊಳಿಸಲು ಒಟ್ಟು 12 ಡಯಾಲಿಸಿಸ್ ಯಂತ್ರಗಳು ಬೇಕಾಗಿದೆ.ಈಗಾಗಲೇ 6 ಯಂತ್ರಗಳಿದ್ದು, ಹೆಚ್ಚುವರಿಯಾಗಿ ಇನ್ನು 6 ಡಯಾಲಿಸಿಸ್ ಯಂತ್ರಗಳು ಬೇಕಾಗಿದೆ. ಈ ಪೈಕಿ ಈಗಾಗಲೇ ಆಲುಕಾಸ್ ಸ್ವರ್ಣ ಮಳಿಗೆಯವರು ಒಂದು ಯಂತ್ರವನ್ನು ಕೊಡುಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.ಇದರೊಂದಿಗೆ ಹೊಸ ಕೇಂದ್ರಕ್ಕೆ ಹೊಸದಾಗಿ ಆರ್.ಒ.ಪ್ಲಾಂಟ್ ನಿರ್ಮಿಸಲು ರೂ.10 ಲಕ್ಷ ಬೇಕು ಇದರೊಂದಿಗೆ ಕೊಠಡಿಗೆ ಹವಾನಿಯಂತ್ರಣ ಅಳವಡಿಸಲು ರೂ. 3 ಲಕ್ಷ ಬೇಕಾಗಿದೆ. 6 ಡಯಾಲಿಸಿಸ್ ಯಂತ್ರ ಖರೀದಿಸಲು ಒಟ್ಟು ರೂ. 60 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಸಿದರು. ಉತ್ತರಿಸಿದ ಶಾಸಕರು ಈ ಹಿಂದೆ ಪುತ್ತೂರು ಮಹಾಲಿಂಗೇಶ್ವರ ದೇವಳದಿಂದ 4 ಡಯಾಲಿಸಿಸ್ ಯಂತ್ರ ಕೊಡಿಸುವುದಾಗಿ ಹಿಂದಿನ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಈಗ ಜಿಲ್ಲಾಧಿಕಾರಿಗಳು ವರ್ಗಾವಣೆಯಾಗಿದ್ದಾರೆ. ಆದರೆ ಅವರು ನೀಡಿರುವ ಭರವಸೆಯ ಬಗ್ಗೆ ವಿವರಗಳನ್ನು ಪಡೆದುಕೊಳ್ಳಬೇಕಾಗಿದೆ.ರೋಟರಿ ಸಂಸ್ಥೆ ಸೇರಿದಂತೆ ಇತರ ದಾನಿಗಳ ಸಹಾಯವನ್ನೂ ಪಡೆದುಕೊಳ್ಳುವ ಬಗ್ಗೆ ಕಾರ್ಯಯೋಜನೆ ರೂಪಿಸಬೇಕಾಗಿದೆ ತಿಳಿಸಿದ್ದರು. ಕೊಠಡಿಗೆ ಹವಾನಿಯಂತ್ರಣ ಅಳವಡಿಸಲು ಬೇಕಾಗಿರುವ ರೂ.3 ಲಕ್ಷ ವೆಚ್ವವನ್ನು ಆಸ್ಪತ್ರೆಯ ನಿಧಿಯಿಂದ ಬಳಕೆ ಮಾಡಲು ತಿಳಿಸಿದ ಶಾಸಕರು ಆರ್.ಒ.ಪ್ಲಾಂಟ್‌ಗೆ ರೂ. 10 ಲಕ್ಷ ವನ್ನು ಸರಕಾರದಿಂದ ಮಂಜೂರುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಆಸ್ಪತ್ರೆಯಲ್ಲಿ ಅಮಲು ಪದಾರ್ಥ ಸೇವನೆಗೆ ದಂಡ:ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗೆ ಬಂದವರು ಮತ್ತು ಉಳಿದು ಕೊಳ್ಳುವವರು ರಾತ್ರಿ ಅಮಲು ಪದಾರ್ಥ ಸೇವನೆ ಮಾಡುವುದು, ಮದ್ಯದ ಬಾಟಲಿಗಳನ್ನು ಶೌಚಾಲಯದಲ್ಲಿ ಹಾಕುವುದು ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ.ಅಲ್ಲಲ್ಲಿ ಗುಟ್ಕಾಗಳನ್ನು ತಿಂದ ಉಗುಳುವುದು ಆಸ್ಪತ್ರೆಯ ಸ್ವಚ್ಚತೆಗೆ ಮತ್ತು ರೋಗಿಗಳ ಆರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಈ ಕುರಿತು ಆಸ್ಪತ್ರೆಗೆ ಇರುವ ಹೊರಗುತ್ತಿಗೆ ಸಿಬ್ಬಂದಿಗಳಿಂದ ಭದ್ರತಾ ಸಿಬ್ಬಂದಿ ನೇಮಿಸುವ ಜೊತೆಗೆ ಅಮಲು ಪದಾರ್ಥ ಸೇವನೆ ಮಾಡುವುದು ಕಂಡು ಬಂದಲ್ಲಿ ಅವರಿಗೆ ದಂಡ ಪ್ರಯೋಗ ಮಾಡುವ ಕುರಿತು ಅಲ್ಲಲ್ಲಿ ಭಿತ್ತಿ ಪತ್ರ ಅಳವಡಿಸುವಂತೆ ಶಾಸಕರು ಸೂಚಿಸಿದರು.

ಶವ ಶೀಥಲೀಕರಣ ಸೌಲಭ್ಯ: ಆಸ್ಪತ್ರೆಯಲ್ಲಿ ಶವ ಶೀಥಲೀಕರಣಕ್ಕೆ ವ್ಯವಸ್ಥೆ ಇದೆ. ಒಂದು ಮೊಬೈಲ್ ಶೀಥಲೀಕರಣವಿದೆ. ಇದಕ್ಕೆ ಖಾಸಗಿ ಆಸ್ಪತ್ರೆಯ ದರಕ್ಕಿಂತ ಕಡಿಮೆ ಇದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಚಾರ ಆಗಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಆಸ್ಪತ್ರೆಯ ಆಂಬುಲೆನ್ಸ್ ವಾಹನದ ಬಾಡಿಗೆಗೆ ಸಂಬಂಧಿಸಿ ಎಸ್ಸಿ ಎಸ್ಟಿ, ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತವಾಗಿದ್ದು, ಎಪಿಎಲ್‌ಗಳಿಗೆ ಮಿನಿಮಿಮ್ ಚಾರ್ಜ್ ಇದೆ ಎಂದು ಪ್ರಸ್ತಾಪಿಸಲಾಯಿತು. ಶಾಸಕರು ಮಾತನಾಡಿ ಎಪಿಎಲ್‌ನಲ್ಲಿ ಕೂಡಾ ಬಡವರಿದ್ದಾರೆ. ಹಾಗಾಗಿ ಈ ಬಾಡಿಗೆಯನ್ನು ಗಂಭೀರವಾಗಿ ತೆಗೆದು ಕೊಳ್ಳಬೇಡಿ ಎಂದರು. ಉಳಿದಂತೆ ಆಸ್ಪತ್ರೆಯ ವಠಾರದಲ್ಲಿ ಕಳವು ಪ್ರಕರಣ ನಡೆಯುತ್ತಿದ್ದು, ಹೆಚ್ಚುವರಿ ಸಿಸಿ ಕ್ಯಾಮರಾ ಅಳವಡಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸಹಾಯಕ ಕಮಿಷನರ್ ಗಿರೀಶ್ ನಂದನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಜಿಲ್ಲಾ ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ಘಟಕದ ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವಿದ್ಯಾ ಆರ್.ಗೌರಿ, ಡಾ. ಕೃಷ್ಣಪ್ರಸನ್ನ, ರಫೀಕ್ ದರ್ಬೆ, ಕೃಷ್ಣ ನಾಯ್ಕ್, ನರಸಿಂಹ ಹೆಗ್ಡೆ, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್, ಸಹಾಯಕ ಆಡಳಿತಾಧಿಕಾರಿ ಯೋಗಾನಂದ, ಡಾ. ಜಯದೀಪ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಸರಕಾರಿ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ !

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿರುವಂತೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿಯೂ ಬ್ಲಡ್ ಬ್ಯಾಂಕ್ ತೆರೆಯುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆಸ್ಪತ್ರೆಯಲ್ಲಿ ರಕ್ತ ಸಂಗ್ರಹಣಾ ವ್ಯವಸ್ಥೆಯಿದೆ. ಬ್ಲಡ್ ಬ್ಯಾಂಕ್ ಮಾಡುವುದಾದಲ್ಲಿ ಅದಕ್ಕೆ ಬೇಕಾದಂತೆ ಕೊಠಡಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿವೆ. ಅದರೆ ಬ್ಲಡ್ ಬ್ಯಾಂಕ್ ಮಾಡಿದಲ್ಲಿ ಅದಕ್ಕೆ ಸಿಬ್ಬಂದಿಗಳ ನೇಮಕಗೊಳಿಸಬೇಕು. ಇದಕ್ಕೂ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗೆ ಈ ಬಗ್ಗೆ ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು.

LEAVE A REPLY

Please enter your comment!
Please enter your name here