ಪುತ್ತೂರು:ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ -4ರ ಯೋಜನೆಯಲ್ಲಿ ಪುತ್ತ್ತೂರು ನಗರಸಭೆಗೆ ಮಂಜೂರಾಗಿರುವ ರೂ.30 ಕೋಟಿ ಮೊತ್ತದ ಯೋಜನೆಯಲ್ಲಿ ರೂ. 16.96 ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮ ಡಿ.11ರಂದು ಪುತ್ತೂರು ಪುರಭವನದಲ್ಲಿ ಜರುಗಲಿದೆ.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಿ.ಸುನಿಲ್ ಕುಮಾರ್ ಅವರು ಶಂಕು ಸ್ಥಾಪನೆ ಮಾಡಲಿದ್ದಾರೆ.ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ.ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯಸಭೆ ಸಂಸದ ಡಾ|ಡಿ.ವೀರೇಂದ್ರ ಹೆಗ್ಗಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಹಿತ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದ್ದಾರೆ.
2 ವರ್ಷದಲ್ಲಿ 180 ಕೋಟಿ ರೂಪಾಯಿ ಅನುದಾನ
ನಗರಸಭೆಯ ಆಡಳಿತದ 2 ವರ್ಷದ ಅವಧಿಯಲ್ಲಿ ರೂ.180 ಕೋಟಿ ಅನುದಾನ ವಿನಿಯೋಗ ಮಾಡಲಾಗಿದೆ. ಇದರ ಜೊತೆಗೆ ಅಮೃತ ನಗರೋತ್ಥಾನದಲ್ಲಿ ರೂ.33 ಕೋಟಿ ಅನುದಾನದಲ್ಲಿ ಎಲ್ಲಾ ವಾರ್ಡ್‌ಗಳಿಗೆ ತಲಾ ರೂ. 25 ಲಕ್ಷ ಹಂಚಿಕೆ ಮಾಡಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.ಮೊದಲ ಹಂತವಾಗಿ ರೂ.16.19 ಕೋಟಿಯ ರಸ್ತೆ, ಚರಂಡಿ ಕಾಮಗಾರಿಗೆ ಶಿಲಾನ್ಯಾಸ ನಡೆಯುತ್ತಿದೆ.ಈಗಾಗಲೇ 7 ಪಾರ್ಕ್ ನಿರ್ಮಾಣಗೊಂಡಿದ್ದು, ನಗರ ಪ್ರದೇಶದೊಳಗೆ 11 ಸ್ಮಾರ್ಟ್ ಬಸ್ ತಂಗುದಾಣ ನಿರ್ಮಾಣದ ಯೋಜನೆ ನಗರಸಭೆ ಅಧ್ಯಕ್ಷರ ಮುಂದಿದೆ.ಅದೇ ರೀತಿ ಹಾರಾಡಿಯಿಂದ ರೈಲ್ವೇ ನಿಲ್ದಾಣದ ರಸ್ತೆಯ ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಲಾಗಿದೆ.