ಪುತ್ತೂರು: ಇಲ್ಲಿನ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಮೂರನೇ ದಿನವಾದ ದ. 10 ರಂದು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ‘ಅವಿಯುಕ್ತ – 2022 ಎ ಲುಕ್ ಬ್ಯಾಕ್ ಟು ದಿ ಸ್ಕೂಲ್’ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಹಾಲ್ ಶೆಟ್ಟಿಯವರು ಮಾತನಾಡಿ ‘ಕೌಶಲ್ಯಭರಿತ ಜೀವನಕ್ಕೆ ಪ್ರೇರಣೆ ನಮ್ಮ ಶಾಲೆಯಾಗಿದೆ. ಮುಖ್ಯಗುರುಗಳ ಸಹಿತ ಎಲ್ಲಾ ಶಿಕ್ಷಕರ ಶಿಸ್ತು ಮತ್ತು ಸಂಸ್ಕೃತಿಯ ಕಲಿಕೆ ನಮ್ಮ ಜೀವನಕ್ಕೆ ಸುಗಮ ಹಾದಿಯಾಗಿ ಪರಿಣಮಿಸಿದೆ. ಹಾಗಾಗಿ ಇಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಸಂಘಟಿಸಿ ಉತ್ತಮ ಕಾರ್ಯಚಟುವಟಿಕೆಯೊಂದಿಗೆ ಸಂಘ ಮುನ್ನಡೆಸಲು ಸಾಧ್ಯವಾಗುತ್ತಿದೆ. ಸಂಸ್ಥೆಯ ಅಭಿವೃದ್ಧಿಗಾಗಿ ಹಲವು ಯೋಚನೆ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಸುರೇಂದ್ರ ಕಿಣಿಯವರು ಮಾತನಾಡಿ ‘ವಿವೇಕಾನಂದರ ದೇಶಪ್ರೇಮ, ವ್ಯಕ್ತಿತ್ವದಂತೆ ವ್ಯಕ್ತಿಗಳನ್ನು ನಿರ್ಮಿಸುವ ಉದ್ದೇಶ ವಿವೇಕಾನಂದ ಶಿಕ್ಷಣ ಸಂಸ್ಥೆಗಳದ್ದು. ನಿಮ್ಮ ನಡತೆ, ವರ್ತನೆ, ಆಚಾರ ವಿಚಾರಗಳು ನಿಮಗೆ ಕಲಿಸಿದ ಶಿಕ್ಷಣ ಸಂಸ್ಥೆಯ ಶಿಕ್ಷಣ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಈ ಸಂಸ್ಥೆಗೂ ಅನೇಕ ಹಿರಿಯ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದು ಸಹಾಯಹಸ್ತ ನೀಡುತ್ತಿದ್ದಾರೆ ಎಂದು ಹೇಳಿ ವಿವೇಕಾನಂದ ವಿದ್ಯಾಸಂಸ್ಥೆಗಳ ಗ್ರೂಪ್ ನಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಶ್ಲಾಘಿಸಿದರು.
ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ‘ಎಂಡೊಕ್ರೈನ್ & ಬ್ರೆಸ್ಟ್ ಸರ್ಜರಿ ತಜ್ಞೆ ಡಾ. ಸ್ಮಿತಾ ಎಸ್. ರಾವ್ ರವರು ಮಾತನಾಡಿ ‘ವಿವೇಕಾನಂದ ಶಿಕ್ಷಣ ಸಂಸ್ಥೆ ಶಿಕ್ಷಣದ ಜೊತೆ ಸಂಸ್ಕೃತಿಯನ್ನು ಕಲಿಸಿಕೊಡುವ ಸಂಸ್ಥೆಯಾಗಿದೆ. ಜೀವನದಲ್ಲಿ ಯಶಸ್ಸಿನ ಹಾದಿಗಾಗಿ ಅನೇಕ ಅವಕಾಶಗಳು ಇಲ್ಲಿ ತೆರೆಯಲ್ಪಟ್ಟಿವೆ. ಅಂತಹ ಶಿಕ್ಷಕ ವೃಂದದ ಸದಾ ಪ್ರೇರಣೆ ಪ್ರೋತ್ಸಾಹ ನಮ್ಮನ್ನು ಎತ್ತರಕ್ಕೆ ಬೆಳೆಸಿದೆ’ ಎಂದರು.
ಶಾಲಾ ಸಂಚಾಲಕ ರವಿನಾರಾಯಣ ರವರು ಮಾತನಾಡಿ ‘ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ವ್ಯಕ್ತಿ ನಿರ್ಮಾಣ ಮಾಡುವ ಶಿಕ್ಷಣ ನಮ್ಮ ಸಂಸ್ಥೆಯಲ್ಲಿ ನೀಡಲಾಗುತ್ತಿದೆ. ಇಲ್ಲಿಂದ ಕಲಿತು ಹೊರಹೋಗುವ ವಿದ್ಯಾರ್ಥಿಗಳು ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾಗ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ’ ಎಂದರು.
ಸನ್ಮಾನ – ಅಭಿನಂದನೆ
‘ಪ್ರಾಜೆಕ್ಟ್ ಚೀತಾ’ ದಲ್ಲಿ ಭಾಗವಹಿಸಿದ್ದ ಶಾಲೆಯ ಹಿರಿಯ ವಿದ್ಯಾರ್ಥಿ ಡಾ. ಸನತ್‌ಕೃಷ್ಣ ಮುಳಿಯರವರ ಪರವಾಗಿ ಅವರ ತಾಯಿ ಉಷಾ ಕೃಷ್ಣ ಮುಳಿಯ ಸನ್ಮಾನ ಸ್ವೀಕರಿಸಿದರು. ಡಾ. ಸ್ಮಿತಾ ಎಸ್. ರಾವ್ ರವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್, ಮುಖ್ಯಗುರು ಸತೀಶ್ ಕುಮಾರ್ ರೈ ಎಸ್., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶಾಂತಿ ಶೆಣೈ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಪ್ರಾರ್ಥನೆ, ನಿತ್ಯಪಂಚಾಂಗ, ಸುಭಾಷಿತ, ಅಮೃತವಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕರಾದ ರಾಧಾಕೃಷ್ಣ ರೈ ಮತ್ತು ಅನುರಾಧ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯ ನರಸಿಂಹ ಕಿಣಿ ಸ್ವಾಗತಿಸಿ, ಕಾರ್ಯದರ್ಶಿ ಶ್ರೀವತ್ಸ ವರ್ಮ ವಂದಿಸಿದರು. ಶಿಕ್ಷಕರಾದ ಲತಾಕುಮಾರಿ, ರೇಖಾ ಆರ್. ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಜೊತೆಕಾರ್ಯದರ್ಶಿ ಕು.ಕನ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಮತ್ತು ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಇದರೊಂದಿಗೆ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮೂರು ದಿನಗಳ ವಾರ್ಷಿಕೋತ್ಸವ ಸಂಭ್ರಮ ಸಂಪನ್ನಗೊಂಡಿತು. ಶಿಕ್ಷಕ ವೃಂದ, ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಯಶಸ್ವಿ ಕಾರ್ಯಕ್ರಮಕ್ಕಾಗಿ ವಿವಿಧ ರೀತಿಯಲ್ಲಿ ಸಹಕರಿಸಿದರು. ವಾರ್ಷಿಕೋತ್ಸವದ ಸಲುವಾಗಿ ಶಾಲೆ ಮತ್ತು ಸಭಾಂಗಣವನ್ನು ವಿದ್ಯುತ್ ದೀಪಗಳಿಂದ ಮತ್ತು ಗೂಡುದೀಪಗಳಿಂದ ಅಲಂಕರಿಸಲಾಗಿತ್ತು.