ಪುತ್ತೂರು:ಪುನರ್ ಪ್ರತಿಷ್ಠೆ ಬ್ರಹ್ಮಕಲಾಶಭಿಷೇಕ ನಡೆದ ಬಳಿಕದ 4 ನಾಲ್ಕು ವರ್ಷಗಳಿಂದ ಪ್ರತಿಷ್ಠಾ ಮಹೋತ್ಸವ ಹಾಗೂ ದೈವದ ನೇಮ ಮಾತ್ರ ನಡೆಯುತ್ತಿದ್ದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಈ ವರ್ಷದಿಂದ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆಯೊಂದಿಗೆ ಜ.25ರಿಂದ ಪ್ರಾರಂಭಗೊಂಡು 27ರ ತನಕ ಸಂಭ್ರಮದಿಂದ ದೇವರ ವಾರ್ಷಿಕ ಜಾತ್ರೋತ್ಸವವನ್ನು ‘ಸಂಪ್ಯ ಜಾತ್ರೆ’ಯನ್ನಾಗಿ ನಡೆಸಲಾಗುವುದು ಎಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯು ಡಿ.9ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವರ್ಷ ನಡೆಯುವ ಪ್ರಥಮ ಜಾತ್ರೋತ್ಸವದಲ್ಲಿ ಜ.25ರಂದು ಸಂಜೆ ಹೊರೆಕಾಣಿಕೆ, ಉಗ್ರಾಣಪೂಜೆ, ದುರ್ಗಾಪೂಜೆ, ರಂಗಪೂಜೆ ಹಾಗೂ ಮಹಾಪೂಜೆ, ಜ.26ರಂದು ಗಣಹೋಮ, ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗ ತಂಬಿಲ, ಸತ್ಯನಾರಾಯಣ ಪೂಜೆ, ದೇವರಿಗೆ ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು, ದೇವರ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ದೈವಗಳ ನೇಮ, ಜ.27ರಂದು ಮಂತ್ರಾಕ್ಷತೆ ಹಾಗೂ ದೇವರಿಗೆ ಕಲಶಾಭಿಷೇಕದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಿತಿ ರಚನೆ:
ಜಾತ್ರೋತ್ಸವಕ್ಕೆ ಪೂರಕವಾಗಿ ನೂತನ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಭೀಮಯ್ಯ ಭಟ್, ಗೌರವಾಧ್ಯಕ್ಷರಾಗಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಯಾಗಿ ನಗರ ಸಭಾ ಮಾಜಿ ಸದಸ್ಯ ರಮೇಶ್ ರೈ ಮೊಟ್ಟೆತ್ತಡ್ಕ, ಕೋಶಾಧಿಕಾರಿಯಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಡಾ.ಸುರೇಶ್ ಪುತ್ತೂರಾಯ, ಜತೆಕಾರ್ಯದರ್ಶಿಯಾಗಿ ರವಿ ಗೌಡ ಬೈಲಾಡಿ, ಅರ್ಚನಾ ತೇಜಸ್, ಉಪಾಧ್ಯಕ್ಷರಾಗಿ ನಗರ ಸಭಾ ಸದಸ್ಯ ಶೀನಪ್ಪ ನಾಯ್ಕ, ಸುದರ್ಶನ ಭಟ್, ಸಂತೋಷ್ ಮುಕ್ರಂಪಾಡಿಯವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಸಮಿತಿಗೆ ಗೌರವ ಸಲಹೆಗಾರರು ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.
ಇಷ್ಟು ವರ್ಷ ಪ್ರತಿಷ್ಠಾ ಮಹೋತ್ಸವ ಮಾತ್ರ ನಡೆಸಲಾಗುತ್ತಿದ್ದು ಜಾತ್ರೋತ್ಸವ ನಡೆಸಬೇಕು ಎಂದು ಅಭಿಪ್ರಾಯಗಳು ಬಂದಿರುವ ಹಿನ್ನೆಲೆಯಲ್ಲಿ ಪ್ರಶ್ನಾ ಚಿಂತನೆ ನಡೆಸಲಾಗಿದ್ದು ನಮಸ್ಕಾರ ಮಂಟಪವಿರುವ ದೇಸ್ಥಾನಗಳಲ್ಲಿ ಜಾತ್ರೋತ್ಸವ ನಡೆಯಬೇಕು ಎಂಬ ಪದ್ದತಿಯಿದೆ. ಹೀಗಾಗಿ ಜಾತ್ರೋತ್ಸವ ನಡೆಸಬೇಕು ಎಂಬ ದೈವಜ್ಞರ ಮಾರ್ಗದರ್ಶನ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲದಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಹೇಳಿದರು.
ದೇವಸ್ಥಾನದ ತಂತ್ರಿ ಪ್ರೀತಂ ಪುತ್ತೂರಾಯರವರು ಮಾತನಾಡಿ, ಜಾತ್ರೋತ್ಸವದ ವೈದಿಕ, ತಾಂತ್ರಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್ ಮಾತನಾಡಿ, ಜಾತ್ರೋತ್ಸವದ ಯಶಸ್ಸಿಗೆ ಪ್ರತಿಯೊಬ್ಬರೂ ವಿವಿಧ ಸಮಿತಿಗಳಲ್ಲಿ ತೊಡಗಿಸಿಕೊಂಡು ಸಹಕರಿಸುವಂತೆ ಮನವಿ ಮಾಡಿದರು.
ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಉತ್ಸವ ಸಮಿತಿ ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಇಳಂತಾಜೆ, ಕೋಲ್ಪೆ ಷಣ್ಣುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದಯ ಕುಮಾರ್ ರೈ ಸಂಪ್ಯ ಸ್ವಾಗತಿಸಿ, ಜಾತ್ರೋತ್ಸವ ಸಮಿತಿ ಕಾರ್ಯದರ್ಶಿ ರಮೇಶ್ ರೈ ವಂದಿಸಿದರು. ದೇವಸ್ಥಾನದ ಅರ್ಚಕರು, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.