ಪುತ್ತೂರು:ಮುಂಡೂರು ಗ್ರಾಮದ ಅಜಲಾಡಿ ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಡಿ.30ರಿಂದ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಒತ್ತೆಕೋಲದ ಆಮಂತ್ರಣ ಪತ್ರಿಕೆಯು ಡಿ.12ರಂದು ಬಿಡುಗಡೆಗೊಂಡಿತು.
ದೈವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಶಾಸಕ ಸಂಜೀವ ಮಠಂದೂರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಶಾಸಕರು, ವಿಷ್ಣುಮೂರ್ತಿ ದೈವಕ್ಕೆ ಒತ್ತೆಕೋಲ ನಡೆಸಲು, ಹಿಂದಿನ ಪರಂಪರೆ ಉಳಿಸಬೇಕಾದರೆ ಸಾಕಷ್ಟು ಸ್ಥಳಾವಕಾಶದ ಆವಶ್ಯಕತೆಯಿದೆ. ಇಲ್ಲಿ ಜಾಗದ ಕೆಲವೊಂದು ಸಮಸ್ಯೆಗಳಿವೆ. ಹೀಗಾಗಿ ದೈವಸ್ಥಾನಕ್ಕೆ ಆವಶ್ಯವಿರುವ ಜಾಗವನ್ನು ಇಲಾಖೆಯ ಮೂಲಕ ಕಾದಿರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಅಲ್ಲದೆ ದೈವಸ್ಥಾನದ ಮುಂಭಾಗಕ್ಕೆ ಇಂಟರ್ ಲಾಕ್ ಅಳವಡಿಸಲು ರೂ.5 ಲಕ್ಷ ಅನುದಾನ ನೀಡಲಾಗುವುದು. ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಗೆ ವಿಧಾನ ಸಭಾ ಕ್ಷೇತ್ರಕ್ಕೆ ರೂ.5 ಕೋಟಿ ಅನುದಾನ ನೀಡುವಂತೆ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದ್ದು ಆ ಅನುದಾನ ಮಂಜೂರುಗೊಂಡಾಗ ಇನ್ನಷ್ಟು ದೊಡ್ಡ ಮೊತ್ತದ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದರು.
ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪಾಣಾಜೆ ಮಾತನಾಡಿ, ಇಲ್ಲಿ ನಾನು ನಿಮಿತ್ತ ಮಾತ್ರ. ಎಲ್ಲ ಕೆಲಸ ಕಾರ್ಯಗಳು ಊರವರ ಸಹಕಾರದಲ್ಲಿ ನಡೆಯುತ್ತಿದೆ ಎಂದರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಭಾಸ್ಕರ ಆಚಾರ್ ಮಾತನಾಡಿ, ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ತಿಳಿಸಿದರು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಪುರಂದರ ಗೌಡ, ಸದಸ್ಯ ಅಶೋಕ್ ಕುಮಾರ್ ಪುತ್ತಿಲ, ಗುಲಾಬಿ ಎನ್ ಶೆಟ್ಟಿ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಗಣೇಶ್ ಸುವರ್ಣ ಬೊಲ್ಲಗುಡ್ಡೆ, ಕೋಶಾಧಿಕಾರಿ ಅನಿಲ್ ಕಣ್ಣಾರ್ನೂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಸ್ವಾಗತಿಸಿದರು.