ರೋಟರಿ ಸಿಟಿ `ಸಮರ್ಥ’ ವೊಕೇಶನಲ್ ಎಕ್ಸೆಲೆನ್ಸ್ ಅವಾರ್ಡ್‌ಗೆ ಭಾಸ್ಕರ ಆಚಾರ್ ಹಿಂದಾರು ಆಯ್ಕೆ – ಇಂದು ಪ್ರದಾನ

0

ಭಾಸ್ಕರ್ ಆಚಾರ್ ಹಿಂದಾರು

ಪುತ್ತೂರು: 2022-23ನೇ ಸಾಲಿನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಕೊಡಮಾಡುವ ‘ಸಮರ್ಥ’ ವೊಕೇಶನಲ್ ಎಕ್ಸೆಲೆನ್ಸ್ ಅವಾರ್ಡ್ ಗೆ ಭಾಸ್ಕರ್ ಆಚಾರ್ ಹಿಂದಾರುರವರು ಆಯ್ಕೆಯಾಗಿರುತ್ತಾರೆ. ದ.13 ರಂದು ಸಂಜೆ ಮನಿಷಾ ಸಭಾಂಗಣದಲ್ಲಿ ಜರಗುವ ರೋಟರಿ ಕ್ಲಬ್ ಪುತ್ತೂರು ಸಿಟಿಗೆ ರೋಟರಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್ ಅಧಿಕೃತ ಭೇಟಿ ಸಂದರ್ಭ ಭಾಸ್ಕರ್ ಆಚಾರ್ ಹಿಂದಾರುರವರಿಗೆ ಈ ಅವಾರ್ಡ್ ಅನ್ನು ನೀಡಿ ಗೌರವಿಸಲಾಗುತ್ತಿದೆ.
ಭಾಸ್ಕರ ಆಚಾರ್ ಹಿಂದಾರುರವರು ದಿ.ಎಚ್.ರಾಜಗೋಪಾಲ್ ಆಚಾರ್ ಮತ್ತು ಶ್ರೀಮತಿ ಪಿ.ಸುಮಿತ್ರ ಆಚಾರ್‌ರವರ ಪುತ್ರರಾಗಿ ಜನಿಸಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆ ಮುಂಡೂರು ಮತ್ತು ಪಡುಬಿದ್ರೆಯಲ್ಲಿ ಹಾಗೂ ಪ್ರೌಢಶಿಕ್ಷಣವನ್ನು ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಪೂರೈಸಿದರು. ಬಾಲ್ಯದಲ್ಲಿ ಚುರುಕು, ನೇರ ನುಡಿ, ಅತ್ಯಂತ ಧೈರ್ಯಶಾಲಿ ವ್ಯಕ್ತಿತ್ವವನ್ನು ಹೊಂದಿದವರು. ಅತ್ಯುತ್ತಮ ಕಬಡ್ಡಿ ಆಟಗಾರ, ಸಂಘ ಸಂಘಟನೆಯನ್ನು ತಮ್ಮ ಊರಿನಲ್ಲಿ ಕಟ್ಟಿ ಬೆಳೆಸಿದ ಸಾಧನೆಗಾರಾಗಿದ್ದಾರೆ.
ಭಾಸ್ಕರ್ ಆಚಾರ್‌ರವರು ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿದ್ದರು ಮತ್ತು ಸೈನ್ಯ ಸೇರಿ ಭಾರತಾಂಬೆಯ ಸೇವೆ ಮಾಡುವ ಮಹತ್ತರ ಆಶಯವನ್ನು ಹೊಂದಿದ್ದರು. ಅನಿವಾರ್ಯ ಕಾರಣಗಳಿಂದ ಕೈ ಬಿಡಬೇಕಾದ ನೋವು ಅವರನ್ನು ಇಂದಿಗೂ ಕಾಡುತ್ತಿರುವುದು ಸತ್ಯ. ನಂತರ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 18 ವರ್ಷಗಳ ದೀರ್ಘ ಸೇವೆ, ಪಿಡಬ್ಲೂö್ಯಡಿ ಇಲಾಖೆಯಲ್ಲಿ ಕ್ಲಾಸ್-1 ಗುತ್ತಿಗೆದಾರರಾಗಿ 12 ವರ್ಷಗಳ ಸೇವೆ, ಆರ್.ಎಸ್.ಎಸ್., ವಿಶ್ವ ಹಿಂದೂ ಪರಿಷತ್, ಆಯೋಧಾ ಮೆರವಣಿಗೆ ಇತ್ಯಾದಿ ಹತ್ತು ಹಲವು ಕ್ರಾಂತಿಕಾರಿ ಸಾಮಾಜಿಕ ಚಟುವಟಿಕೆಗಳಲ್ಲಿ ಯಾವುದೇ ಅಧಿಕಾರ, ಅಂತಸ್ತು, ಹೆಸರು ಬಯಸದೆ ನಿಸ್ವಾರ್ಥ ಸೇವೆ ಸಲ್ಲಿಸಿದವರಾಗಿದ್ದಾರೆ.
“ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವ ಮಾತಿನಂತೆ ಇವರು ಕೈ ಆಡಿಸದ ಕ್ಷೇತ್ರವಿಲ್ಲ. ಧಾರ್ಮಿಕ ಕ್ಷೇತ್ರದಲ್ಲೂ ಸಾಧಿಸಿದವರು ಭಾಸ್ಕರ್ ಆಚಾರ್‌ರವರು. ಏಳು ದೇವಸ್ಥಾನ ಮತ್ತು ಹಲವು ದೈವಸ್ಥಾನಗಳ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶವನ್ನು ನಡೆಸಿಕೊಟ್ಟವರು. ಪ್ರಸ್ತುತ ಕಳೆದ 20 ವರ್ಷಗಳಿಂದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷರಾಗಿದ್ದು, ಅದ್ಧೂರಿಯ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾಡಿಸಿದ ಕೀರ್ತಿ ಅವರದಾಗಿದೆ. ಪ್ರಗತಿಪರ ಕೃಷಿಕರು ಹಾಗೂ ಬೃಹತ್ ಪ್ರಮಾಣದ ಹೈನುಗಾರಿಕೆಯಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಪರಮ ಭಕ್ತರಾಗಿದ್ದು ಬಾಬಾರವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಸದಾ ಸಮಾಜದ ಬಗ್ಗೆ ಚಿಂತಿಸುವವರು, ಕೊಡುಗೈ ದಾನಿ, ಸಮಾಜಮುಖಿ ವ್ಯಕ್ತಿತ್ವದ ವಿದ್ಯಾರ್ಥಿಗಳನ್ನು ತಯಾರು ಮಾಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣದ ಕನಸನ್ನು ಹೊತ್ತು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಂಚಾಲಕರಾಗಿ ಭಾಸ್ಕರ್ ಆಚಾರ್‌ರವರು 2005ರಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇಂಡಿಯನ್ ಆಯಿಲ್ ಪ್ರವರ್ತಿತ ಸಾಯಿ ಭಗವಾನ್ ಫ್ಯೂಯೆಲ್ಸ್ನ ಮಾಲಕರಾಗಿ ಉತ್ತಮ ಗುಣಮಟ್ಟದ ಇಂಧನ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿ ಅನ್ನದಾತರೆನಿಸಿದ ಇವರು ಯಾವುದೇ ಪ್ರಚಾರ ಮತ್ತು ಸ್ಥಾನಕ್ಕಾಗಿ ಆಸೆ ಪಡದೆ ತಮ್ಮ ಆದರ್ಶಗಳಿಗೆ ಬದ್ದರಾಗಿದ್ದು ಸಮಾಜದೊಡನೆ ಒಂದು ಅರ್ಥಪೂರ್ಣ ಸಂಬಂಧವನ್ನು ಹೊಂದಿ ಇತರರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಜೀವನದ ಅರ್ಥವನ್ನು ಕಂಡು ಕೊಂಡವರಾಗಿದ್ದಾರೆ. ಪ್ರಸ್ತುತ ಇವರು ಪತ್ನಿ ಸುಜಾತ ಆಚಾರ್‌ರವರೊಂದಿಗೆ ಮಗಳು ಜಯಶ್ರೀ ಆಚಾರ್ ಮತ್ತು ಮಗ ರೋಟರಿ ಸಿಟಿಯ ಪ್ರಸ್ತುತ ವರ್ಷದ ಕಾರ್ಯದರ್ಶಿ ಜಯಗುರು ಆಚಾರ್‌ರವರೊಂದಿಗೆ ವಾಸವಾಗಿದ್ದಾರೆ.

ರೋಟರಿ ಸಿಟಿಯು 2009-10ರಿಂದ ಕೊಡ ಮಾಡಲ್ಪಡುವ ಪ್ರಶಸ್ತಿಯಾಗಿದ್ದು, ವೃತ್ತಿ ಕ್ಷೇತ್ರದಲ್ಲಿ ಅನನ್ಯವಾದ, ಅಪರೂಪವಾದ, ವಿನೂತನ, ವಿಶಿಷ್ಟ ಕ್ರಿಯಾಶೀಲ, ಅನುಕರಣೀಯ, ಮಾದರಿ ಸಾಧನೆ ಮಾಡಿದ ವ್ಯಕ್ತಿಗೆ ನೀಡಲ್ಪಡುತ್ತದೆ. ಪುತ್ತ್ತೂರಿನವರಾಗಿದ್ದು, ಪುತ್ತೂರಿನಲ್ಲಿಯೇ ವೃತ್ತಿ ಉದ್ಯಮ ಹೊಂದಿದ ಸಾಧಕರಿಗೆ ಆದ್ಯತೆ ಮೇಲೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಾಧಕರು, ವೃತ್ತಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕಾನೂನುಬದ್ಧವಾಗಿದ್ದು, ನಿಷ್ಕಳಂಕ ವ್ಯಕ್ತಿತ್ವವನ್ನು ಹೊಂದಿರಬೇಕು, ವೃತ್ತಿ ಸಾಧನೆ ಜೊತೆಗೆ ಸಮಾಜಕ್ಕೂ ಕೊಡುಗೆ ಇದ್ದು, ಸಮಾಜವು ಸದ್ರಿ ಸಾಧನೆಯಿಂದ ಅವರನ್ನು ಗುರುತಿಸುವಂತಿರಬೇಕು. ಇಂತಹ ವಿಶಿಷ್ಟ ಛಾಪುವುಳ್ಳ ವ್ಯಕ್ತಿಗಳನ್ನು ಅರಿಸಿ ಪ್ರತೀ ವರ್ಷ ‘ಸಮರ್ಥ’ ಪ್ರಶಸ್ತಿ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here