ನಿಸ್ವಾರ್ಥ ಸೇವೆಯಿಂದ ಯಶಸ್ಸು ಪ್ರಾಪ್ತಿ-ಬಿ.ವಿ ಸೂರ್ಯನಾರಾಯಣ
ಪುತ್ತೂರು: ನಿಸ್ವಾರ್ಥವಾಗಿ ನಾವು ಯಾವುದೇ ಸೇವೆ ಮಾಡಿದರೂ ಅದರಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ಸಮಾಜಪರವಾದ ಸೇವೆ ಸುದೀರ್ಘ ವರ್ಷಗಳ ಕಾಲ ಈ ಸಮಾಜಕ್ಕೆ ಸಿಗಲಿ ಎಂದು ನಿವೃತ್ತ ಪ್ರಾಂಶುಪಾಲ ಬಿ.ವಿ ಸೂರ್ಯನಾರಾಯಣ ಕಣ್ಣಾರಾಯ ಎಲಿಯ ಹೇಳಿದರು. ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಡಿ.10 ರಂದು ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ತಾಲೂಕಿನಲ್ಲಿ ಗುರುತಿಸುವಂತಾಗಲಿ-ಬೂಡಿಯಾರ್:
ಬಿಜೆಪಿ ದ.ಕ ಜಿಲ್ಲಾ ಉಪಾಧ್ಯಕ್ಷ, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ ಸ್ವಸ್ತಿಕ್ ಗೆಳೆಯರ ಬಳಗದವರು ದೇವಸ್ಥಾನದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದನ್ನು ನಾನು ಗಮನಿಸಿದ್ದು ಈ ತಂಡದಲ್ಲಿರುವ 35 ಜನರೂ ಒಗ್ಗಟ್ಟಿನಲ್ಲಿ ಕೆಲಸ ಮಾಡಿದರೆ ತಾಲೂಕಿನಲ್ಲೇ ಗುರುತಿಸಿಬಲ್ಲ ಕಾರ್ಯಕ್ರಮವನ್ನು ಮಾಡಬಹುದು. ಸ್ವಸ್ತಿಕ್ ಗೆಳೆಯರ ಬಳಗದ ಒಂದು ವರ್ಷದ ಸಾಧನೆಗೆ ಇಲ್ಲಿ ಇಂದು ಸೇರಿರುವ ಜನರೇ ಸಾಕ್ಷಿಯಾಗಿದ್ದು ನಿಮ್ಮ ಉತ್ತಮ ಸೇವೆ ಮುಂದಕ್ಕೂ ಮುಂದುವರಿಯಲಿ ಎಂದು ಹಾರೈಸಿದರು.
ಸ್ವಚ್ಛತೆಗೆ ಆದ್ಯತೆ-ಕರುಣಾಕರ ಗೌಡ:
ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ ಮಾತನಾಡಿ ದೇಶದ ಮತ್ತು ಪ್ರಧಾನಿಯವರ ಮೊದಲ ಆದ್ಯತೆ ಸ್ವಚ್ಛತೆಗಾಗಿದ್ದು ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗ ಸ್ವಚ್ಛತೆ ಮಾಡುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಸಮಾಜ ಸೇವೆಯೇ ನಮ್ಮ ಉದ್ದೇಶ-ಹರೀಶ್ ನಾಯ್ಕ:
ಅಧ್ಯಕ್ಷತೆ ವಹಿಸಿದ್ದ ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ ಮಾತನಾಡಿ ಸಮಾಜ ಸೇವೆಯ ಉದ್ದೆಶಕ್ಕೆ ಸ್ವಸ್ತಿಕ್ ಗೆಳೆಯರ ಬಳಗ ಎನ್ನುವ ಸಮಿತಿಯನ್ನು ರಚಿಸಿಕೊಂಡಿದ್ದು ಸ್ವಚ್ಛತೆ ಸೇರಿದಂತೆ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದು ಮುಂದಕ್ಕೂ ವಿವಿಧ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಗುರಿ ಹೊಂದಿದ್ದೆವೆ ಎಂದು ಹೇಳಿದರು.
35 ಮಂದಿ ಸದಸ್ಯರ ತಂಡ-ಸುಂದರ ಬಲ್ಯಾಯ:
ಸ್ವಾಗತಿಸಿ ಪ್ರಸ್ತಾವನೆಗೈದ ಸ್ವಸ್ತಿಕ್ ಗೆಳೆಯರ ಬಳಗದ ಗೌರವಾಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು ಮಾತನಾಡಿ ಒಂದು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದಿರುವ ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗ 35 ಮಂದಿ ಸದಸ್ಯರನ್ನು ಹೊಂದಿದ್ದು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ಪ್ರಗತಿಪರ ಕೃಷಿಕರಾದ ಉಮೇಶ್ ಸುವರ್ಣ ಸೊರಕೆ, ಸ್ವಸ್ತಿಕ್ ಗೆಳೆಯರ ಬಳಗದ ಗೌರವ ಸಲಹೆಗಾರರಾದ ಪದ್ಮಯ್ಯ ನಾಯ್ಕ ನೆಕ್ಕಿಲು, ತಿಮ್ಮಪ್ಪ ನಾಯ್ಕ ನೆಕ್ಕಿಲು ಹಾಗೂ ಅಶೋಕ ನಾಯ್ಕ ನೆಕ್ಕಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಸ್ತಿಕ್ ಗೆಳೆಯರ ಬಳಗದ ನವೀನ್ ನೆಕ್ಕಿಲು ವಾರ್ಷಿಕ ವರದಿ ವಾಚಿಸಿದರು. ಲಿಖಿತಾ ಕಡ್ಯ ಪ್ರಾರ್ಥಿಸಿದರು. ದೀಕ್ಷಿತ್ ಬಲ್ಯಾಯ ನೆಕ್ಕಿಲು ವಂದಿಸಿದರು. ಶ್ರೀಮಾ ಬೊಟ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಸ್ವಸ್ತಿಕ್ ಗೆಳೆಯರ ಬಳಗದ ಪದಾಧಿಕಾರಿಗಳು, ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ದುರ್ಗಾ ಪೂಜೆ:
ಸಭಾ ಕಾರ್ಯಕ್ರಮದ ಮೊದಲು ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ದುರ್ಗಾ ಪೂಜೆ, ಮಹಾಪೂಜೆ ನಡೆಯಿತು. ನೂರಾರು ಮಂದಿ ಭಾಗಿಯಾಗಿದ್ದರು.
ಸಾಂಸ್ಕೃತಿಕ ವೈಭವ, ನಾಟಕ:
ಸಭಾ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಭೆಯ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಕೊನೆಯಲ್ಲಿ ಬೊಳ್ಳಿ ಸಂಸಾರ ಕಲಾವಿದೆರ್ ಪುತ್ತೂರು ಅಭಿನಯಿಸುವ ತುಳು ಕುತೂಹಲಭರಿತ ನಾಟಕ `ಭಾಗ್ಯ ಬೋಡು’ ನಡೆಯಿತು.