ಅಂಬಿಕಾ ಮಹಾವಿದ್ಯಾಲಯದಲ್ಲಿ ಅನುಪಮ ಪ್ರತಿಭಾ ವೇದಿಕೆ ಕಾರ್ಯಕ್ರಮ

0

ಪ್ರತಿಭಾ ಪ್ರದರ್ಶನದಿಂದ ಮನಸ್ಸಿನ ವಿಕಾಸ ಸಾಧ್ಯ : ಚಂದ್ರಕಾಂತ ಗೋರೆ

ಪುತ್ತೂರು: ಪ್ರತಿಭಾ ಪ್ರದರ್ಶನದಿಂದ ವಿದ್ಯಾರ್ಥಿಗಳ ಮನಸ್ಸು ವಿಕಸನಗೊಂಡು ಬುದ್ಧಿಮಟ್ಟವೂ ಬೆಳೆಯುತ್ತದೆ. ಸಕಾರಾತ್ಮಕತೆ ಸ್ವೀಕರಿಸುವ ಹಾಗೂ ಋಣಾತ್ಮಕ ವಿಚಾರ ದೂರಗೊಳಿಸುವ ಗುಣ ವೃದ್ಧಿಯಾಗುತ್ತದೆ. ಮಕ್ಕಳು ತಮ್ಮೊಳಗೆ ಹುದುಗಿರುವ ಕಲೆಯನ್ನು ಮುಕ್ತವಾಗಿ ಅಭಿವ್ಯಕ್ತಿಗೊಳಿಸಿದಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಹೇಳಿದರು.

ಅವರು ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅನುಪಮ ಪ್ರತಿಭಾ ವೇದಿಕೆ ಮೂಲಕ ಹಮ್ಮಿಕೊಂಡಿದ್ದ ವಿಷಯಾಧಾರಿತ ಅಭಿನಯ ಹಾಗೂ ಚರ್ಚಾ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿಚಾರ ಮಂಡನೆ ಮಾಡಿ ಹೊಸ ಹೊಸ ಮಾಹಿತಿ ತಿಳಿದುಕೊಂಡಾಗ ಸಮಕಾಲೀನ ಜ್ಞಾನ ಸಹಜವಾಗಿಯೇ ಮೂಡಲಾರಂಭಿಸುತ್ತದೆ. ದೇಶ ನಿರ್ಮಾಣದ ಹಿತದೃಷ್ಟಿಯಿಂದ ಚಿಂತನ-ಮಂಥನ ಅತ್ಯಂತ ಅಗತ್ಯ. ಸಾಮಾನ್ಯ ಜ್ಞಾನವನ್ನೂ ಹೆಚ್ಚಿಸಿಕೊಳ್ಳುವ ಮೂಲಕ ಮಾಹಿತಿಪೂರ್ಣ ಪ್ರಜೆಗಳಾಗಬೇಕಿದೆ ಎಂದರು.

ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ, ಸ್ಪರ್ಧಾ ವೇದಿಕೆಗಳು ವಿದ್ಯಾರ್ಥಿಗಳ ಆಸಕ್ತಿಯನ್ನು ಗುರುತಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಿದಾಗ ಅವರ ಆಸಕ್ತಿಗನುಗುಣವಾಗಿ ಹೆಚ್ಚಿನ ತರಬೇತಿಯನ್ನು ನೀಡಿ ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಣೆ ನೀಡಲು ಸಾಧ್ಯ. ಚರ್ಚಾ ಸ್ಪರ್ಧೆಗಳ ಮೂಲಕ ಸಭೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಧೈರ್ಯ ಮೂಡುತ್ತದೆ ಎಂದರು.

ಅನುಪಮ ಪ್ರತಿಭಾ ವೇದಿಕೆ ಕಾರ್ಯದರ್ಶಿ ಮೇಘಾ ಕಿರಿಮಂಜೇಶ್ವರ ಸ್ವಾಗತಿಸಿ, ಪ್ರಥಮ ವರ್ಷದ ಪತ್ರಿಕೋದ್ಯಮ ವಿಭಾಗದ ವೈಭವ್ ವಂದಿಸಿದರು. ದ್ವಿತೀಯ ಜಯಶ್ರೀ ಸಂಪ ಕಾರ್ಯಕ್ರಮ ನಿರ್ವಹಿಸಿದರು. ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ ತೃಪ್ತಿ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here