ಕಡಬ: ಇಲ್ಲಿನ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣೆ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಾಲಾ ಪ್ರಾಂಶುಪಾಲರಾದ ಅಮಿತ್ ಪ್ರಕಾಶ್ ರೋಡ್ರಿಗಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಸ್ಪರ್ಧೆಗಳು ಅವರ ಕಲಿಕೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಎಷ್ಟು ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಅಳೆಯುವುದಾಗಿದೆ. ಬಹುಮಾನ ಬಂತೆಂದು ಹಿಗ್ಗದೆ, ಬರಲಿಲ್ಲ ಎಂದು ಕುಗ್ಗದೆ ಸಮಾನವಾಗಿ ಸ್ವೀಕರಿಸಬೇಕು ಎಂದರು.
ಅತಿಥಿಗಳಾಗಿ ಶಾಲೆಯ ಹಳೇ ವಿದ್ಯಾರ್ಥಿಗಳಾದ ಡಾ. ಅರಹಂತ ಮತ್ತು ಡಾ. ಅರ್ಪಿತಾ ಟ್ರೀಸ ಆಗಮಿಸಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ಅವರುಗಳು ಪ್ರಾಥಮಿಕ ಶಿಕ್ಷಣವು ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯ ಘಟ್ಟ, ಇಲ್ಲಿ ಕ್ರೀಡೆ, ಸಾಂಸ್ಕೃತಿಕ ಹಾಗೂ ಕಲಿಕೆಯಲ್ಲಿ ಬರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಮುಂದಿನ ವಿದ್ಯಾರ್ಥಿ ಜೀವನವು ಸುಖಕರವಾಗಿರುವುದು ಎಂದು ಹೇಳಿದರು. ಅತಿಥಿಗಳನ್ನು, ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪಟುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಳಿಕ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದಲ್ಲಿ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸೀತಾರಾಮ ಪೊಸವಳಿಕೆ, ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳಾದ ಕಿರಣ್, ಸಿಸ್ಟರ್ ಹಿಲ್ಡಾ, ಶ್ರೀಲತಾ, ದಕ್ಷಾ ಪ್ರಸಾದ್ ಉಪಸ್ಥಿತರಿದ್ದರು. ಅಪರಾಹ್ನ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ರೆಡ್ ಹೌಸ್ ತಂಡದವರು ಸಮಗ್ರ ಪ್ರಶಸ್ತಿ ಪಡೆದುಕೊಂಡರು. ಜಯಶ್ರೀ ಮತ್ತು ಭವಾನಿ ಕಾರ್ಯಕ್ರಮ ನಿರೂಪಿಸಿದರು, ಆನಿ ಸ್ವಾಗತಿಸಿ, ಶಾಂತಿ ಹಾಗೂ ಸ್ವಾತಿ ವಂದಿಸಿದರು.