ಪುತ್ತೂರು: ದರ್ಬೆ-ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಜಂಟಿಯಾಗಿ ಶಾಲಾ ಕ್ರೀಡಾಂಗಣದಲ್ಲಿ ದ.12 ರಂದು ವಾರ್ಷಿಕ ಕ್ರೀಡೋತ್ಸವ ನಡೆಯಿತು.
ಮುಖ್ಯ ಅತಿಥಿ, ದರ್ಬೆ ಬುಶ್ರಾ ಕಾಂಪ್ಲೆಕ್ಸಿನಲ್ಲಿ ವ್ಯವಹರಿಸುತ್ತಿರುವ ಏಷಿಯನ್ ವುಡ್ ಮಾಲಕರಾದ ಜಬ್ಬಾರ್ರವರು ಕ್ರೀಡಾ ಧ್ವಜಾರೋಹಣಗೈದು ಮಾತನಾಡಿ, ಶಿಕ್ಷಣದ ಜೊತೆಗೆ ಮಾನಸಿಕ ಹಾಗೂ ದೈಹಿಕ ದೃಢತೆಯಿದ್ದಲ್ಲಿ ಯಶ ಖಂಡಿತಾ ಸಾಧ್ಯ ಹಾಗೂ ಸಮಾಜದಲ್ಲಿ ಉನ್ನತಿ ಸ್ಥಾನಕ್ಕೆ ಕೊಂಡೊಯ್ಯಲು ಕ್ರೀಡೆಯು ಸಹಕಾರಿ ಎನಿಸುತ್ತದೆ. ಸೋಲು-ಗೆಲುವು ಮುಖ್ಯವಲ್ಲ ಬದಲಾಗಿ ಆರೋಗ್ಯಕರ ಭಾಗವಹಿಸುವಿಕೆ ಬಹಳ ಮುಖ್ಯವೆನಿಸುತ್ತದೆ ಎಂದರು.
ಮತ್ತೋರ್ವೆ ಅತಿಥಿ, ಬೆಥನಿ ಶಾಲೆಯ ನಿವೃತ್ತ ಶಿಕ್ಷಕಿ ಸೀತಾರವರು ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಾಗಿರುವ ಕ್ರೀಡೆಯಲ್ಲೂ ಸಕ್ರಿಯವಾಗಿ ಭಾಗವಹಿಸಿ. ಕ್ರೀಡಾಕೂಟದಲ್ಲಿ ಎಲ್ಲರೂ ವಿಜಯಿ ಎನಿಸಲು ಸಾಧ್ಯವಿಲ್ಲ. ಸೋತವರು ಮುಂದೆ ಕಠಿಣ ಪರಿಶ್ರಮದೊಂದಿಗೆ ವಿಜಯಿಯಾಗಲು ಪ್ರಯತ್ನ ಪಡಬೇಕು ಎಂದರು.
ಬೆಥನಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಸೆಲಿನ್ ಪೇತ್ರ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ಹಾಗೂ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಆಗ್ನೇಸ್ ಶಾಂತಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಆಶಾ ನಾಯಕ್ ವೇದಿಕೆಯಲ್ಲಿ ಉಪಸ್ಠಿತರಿದ್ದರು. ಪ್ಲಾವಿಯ ಸ್ವಾಗತಿಸಿ, ಸಿಸ್ಟರ್ ಗ್ರೇಸಿ ವಂದಿಸಿದರು. ಈ ಕ್ರೀಡೋತ್ಸವದಲ್ಲಿ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಹರೀಶ್, ನಿರಂಜನ್ ಮತ್ತು ಅಕ್ಷಯ್ ಸಹಕರಿಸಿದರು.
ಕ್ರೀಡಾ ಜ್ಯೋತಿ ಬೆಳಗಿಸಿ ಚಾಲನೆ…
ಶಾಲೆಯ ರಾಷ್ಟೃಮಟ್ಟದ ಮತ್ತು ರಾಜ್ಯ ಮಟ್ಟದ ಪ್ರತಿಭೆಗಳಾದ ಆರ್ಲಿನ್, ಅವನಿ ರೈ, ಫಾತಿಮಾತ್ ಹಫೀದ, ನಿಹಾರಿಕಾ, ರಿಯಾ ಜೆ.ರೈ, ಪ್ರಾದಿ ಕ್ಲೇರಾ ಪಿಂಟೋ ಮತು ಪ್ರತೀಕ್ಷಾ ಶೆಣೈಯವರು ಜೊತೆಗೂಡಿ ಕ್ರೀಡಾ ಜ್ಯೋತಿಯೊಂದಿಗೆ ಸಾಗಿ ಬೆಥನಿ ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಆಶಾ ನಾಯಕ್ರವರಿಗೆ ಹಸ್ತಾಂತರಿಸಿದರು. ಬಳಿಕ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಆಶಾ ನಾಯಕ್ರವರು ಕ್ರೀಡಾ ಜ್ಯೋತಿ ಬೆಳಗಿಸಿ, ಮೇಲಕ್ಕೆತ್ತಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟದ ನಾಯಕಿ ಅವನಿ ರೈ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಷೆ ಬೋಧಿಸಿದರು.