ಓಜಾಲ ಹಿ.ಪ್ರಾ. ಶಾಲೆಯಲ್ಲಿ ಬಂಟ್ವಾಳ ತಾ| 16ನೇ ಮಕ್ಕಳ ಸಾಹಿತ್ಯ ಸಮ್ಮೇಳನ

0
  • ಮಕ್ಕಳಲ್ಲಿ ಸಾಹಿತ್ಯ ಪ್ರೇಮ ಮೂಡಿಸಬೇಕು:ವೀಕ್ಷಿತಾ 
  • ಸರಕಾರ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು: ಶ್ರುತಿಕಾ

ವಿಟ್ಲ:ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಸಾಹಿತ್ಯದ ಪ್ರೀತಿ ಕುಂದುತ್ತಿರುವುದರಿಂದ ಭಾಷೆಯ ಒಳಗಿನ ಸಾಹಿತ್ಯ ಪ್ರಕಾರವನ್ನು ಮಕ್ಕಳ ಸಾಹಿತ್ಯ ಸಮ್ಮೇಳನಗಳ ಮೂಲಕ ಹೆಚ್ಚಿಸುವ ಕಾರ್ಯ ಆಗಬೇಕಿದೆ ಎಂದು ಮಾಣಿಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವೀಕ್ಷಿತಾ ಹೇಳಿದರು.

ಓಜಾಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಕ್ಕಳ ಕಲಾ ಲೋಕದ ನೇತೃತ್ವದಲ್ಲಿ ಆಯೋಜಿಸಲಾದ ಬಂಟ್ವಾಳ ತಾಲೂಕು 16ನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಓಜಾಲ ಹಿ.ಪ್ರಾ.ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಶ್ರುತಿಕಾ ಮಾತನಾಡಿ, ಸರ್ಕಾರ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವ ಕಾರ್ಯ ಮಾಡಬೇಕು.ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯ ಸಹಕಾರಿಯಾಗಿದ್ದು, ಸಾಹಿತ್ಯ ರಚನೆಯ ಚಟುವಟಿಕೆಗಳು ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ.ಸಾಹಿತ್ಯವನ್ನು ಬಲಪಡಿಸುವ ಜತೆಗೆ ಭಾಷೆಗೆ ಬಲ ತುಂಬುವ ಕಾರ್ಯ ಮಾಡಬೇಕು ಎಂದರು.

ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಸುಧೀರ್ ಕುಮಾರ್ ಶೆಟ್ಟಿಯವರು ಸಾಹಿತ್ಯ ಸಮ್ಮೇಳನದ ಮೆರವಣಿಗೆಯನ್ನು ಉದ್ಘಾಟಿಸಿದರು. ಓಜಾಲ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಿದಾನಂದ ಪೆಲತ್ತಿಂಜ ಕನ್ನಡ ಧ್ವಜಾರೋಹಣ ನೆರವೇರಿಸಿದರು. ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲುರವರು ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನಡೆಸಿದರು. ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಅವರು 5 ಮಕ್ಕಳ ಪುಸ್ತಕ ಹಾಗೂ ಒಂದು ಸಂಪಾದಿತ ಪುಸ್ತಕ ಬಿಡುಗಡೆ ಮಾಡಿದರು.

ಪಾಣಾಜೆ ವಿವೇಕ ಹಿ.ಪ್ರಾ.ಶಾಲೆಯ ಧನ್ವೀ ರೈ ಪಾಣಾಜೆ, ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತ, ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ಡಾ.ಗೋವರ್ಧನ್ ರಾವ್, ಮುಖ್ಯ ಶಿಕ್ಷಕ ಸಂಜೀವ ಮಿತ್ತಳಿಕೆ ಉಪಸ್ಥಿತರಿದ್ದರು. ಓಜಾಲ ಶಾಲೆಯ ವಿದ್ಯಾರ್ಥಿಗಳಾದ ಹರ್ಷಿಣಿ ಬಳಗ ಪ್ರಾರ್ಥಿಸಿದರು. ಹೃದಯ್ ಸ್ವಾಗತಿಸಿದರು. ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ್ ಬಾಯಾರು ಪ್ರಸ್ತಾವನೆಗೈದರು. ಕನ್ಯಾನ ಸರಸ್ವತಿ ವಿದ್ಯಾಲಯದ ಅಭಿವೈಷ್ಣವಿ ಸಾದಂಗಾಯ ವಂದಿಸಿದರು. ಮಿತ್ತೂರು ದ.ಕ.ಜಿ.ಪ.ಉ.ಹಿ.ಪ್ರಾ.ಶಾಲೆಯ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.

ಕಿರುನಾಟಕ ಪ್ರದರ್ಶನ: ಮಕ್ಕಳ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕಿರುನಾಟಕ ಪ್ರದ್ರರ್ಶನದಲ್ಲಿ ಮಿತ್ತೂರು ಶಾಲೆಯ ವಿದ್ಯಾರ್ಥಿಗಳು ‘ಪ್ಲಾಸ್ಟಿಕ್‌ನ ಅಪಾಯಗಳು’ ಕುರಿತಾದ ನಾಟಕ, ಅಳಕೆ ಮಜಲು ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಹಾಸ್ಯ ಪ್ರಹಸನವನ್ನು, ಓಜಾಲ ಶಾಲೆಯ ವಿದ್ಯಾರ್ಥಿಗಳು ‘ಕೆಂಪು ಹೂ’ ನಾಟಕವನ್ನು, ಸೂರ್ಯ ಶಾಲೆಯ ವಿದ್ಯಾರ್ಥಿಗಳು ‘ಪರಿಸರ ಪ್ರೀತಿ, ಪ್ರಾಣಿಗಳ ರಕ್ಷಣೆ’ ನಾಟಕ ಹಾಗೂ ಪಡಿಬಾಗಿಲು ಶಾಲೆಯ ವಿದ್ಯಾರ್ಥಿಗಳು ‘ರಾಮಧಾನ್ಯ ಚರಿತೆ’ ನಾಟಕವನ್ನು ಪ್ರದರ್ಶಿಸಿದರು.

ಚಿತ್ತ ಚಿತ್ತಾರದಲ್ಲಿ ಪೆರುವಾಯಿ, ಕಂಬಳಬೆಟ್ಟು ಹಿ.ಪ್ರಾ.ಶಾಲೆ, ವಿಟ್ಲ ಹಿ.ಪ್ರಾ.ಶಾಲೆ, ಮಿತ್ತೂರು ಹಿ.ಪ್ರಾ.ಶಾಲೆ, ಓಜಾಲ ಹಿ.ಪ್ರಾ.ಶಾಲೆ, ನೀರ್ಕಜೆ ಹಿ.ಪ್ರಾ.ಶಾಲೆ, ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆ, ಪಡಿಬಾಗಿಲು, ಚಂದಳಿಕೆ ಶಾಲಾ ಮಕ್ಕಳು ಚಿತ್ರ ಚಿತ್ತಾರದಲ್ಲಿ ನೃತ್ಯ, ಹಾಡು, ಚಿತ್ರ ಬಿಡಿಸುವ ಮೂಲಕ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here