ಬೊಳಂತಿಲ ಮತ್ತು ನೆಕ್ಕಿಲಾಡಿ ನಳ್ಳಿ ನೀರಿನ ಬಳಕೆದಾರರಿಗೆ ಕಲುಷಿತ ನೀರು ಪೂರೈಕೆ ಆರೋಪ

0

ಶೀಘ್ರ ಕ್ರಮಕ್ಕೆ ನಾಗರಿಕ ಅಭಿವೃದ್ಧಿ ಸಮಿತಿಯಿಂದ ಪಂಚಾಯತ್ ಗೆ ಮನವಿ

ಪುತ್ತೂರು: ಕಳೆದ ಒಂದು ತಿಂಗಳಿನಿಂದ ಬೊಳಂತಿಲ ಮತ್ತು ನೆಕ್ಕಿಲಾಡಿಯ ನಳ್ಳಿ ನೀರಿನ ಬಳಕೆದಾರರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಈ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ ಶೀಘ್ರ ಈ ಬಗ್ಗೆ ಕ್ರಮಗೊಳ್ಳುವಂತೆ ಆಗ್ರಹಿಸಿ 34 ನೆಕ್ಕಿಲಾಡಿ ನಾಗರಿಕ ಅಭಿವೃದ್ಧಿ ಸಮಿತಿ ವತಿಯಿಂದ ಮನವಿಯನ್ನು ಪಂಚಾಯತ್ ಅಧ್ಯಕ್ಷರಾದ ಸುಜಾತ ರೈಯವರಿಗೆ ನೀಡಲಾಯಿತು.

ಕಳೆದ ಒಂದು ತಿಂಗಳಿನಿಂದ 34 ನೆಕ್ಕಿಲಾಡಿ ವ್ಯಾಪ್ತಿಯ ಬೊಳಂತಿಲ ಮತ್ತು ನೆಕ್ಕಿಲಾಡಿ ಪ್ರದೇಶಗಳ ನಿವಾಸಿಗಳಿಗೆ ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ಹಿಂದೆ ಕೂಡ ಇದೇ ರೀತಿಯ ಕಲುಷಿತ ನೀರು ಪೂರೈಕೆಯ ಕುರಿತು ಕುಡಿಯಲು ಯೋಗ್ಯವಲ್ಲ ವರದಿ ಬಂದಿದ್ದು, 34 ನೆಕ್ಕಿಲಾಡಿ ನಾಗರಿಕ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಜಲಸಿರಿ ಯೋಜನೆಯ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ತೀರ್ಮಾನಿಸಲಾಯಿತು. ಆದರೆ ಕಳೆದ ಒಂದು ತಿಂಗಳಿಂದ ಪೈಪ್ ಲೈನ್ ದೋಷದ ಕಾರಣದಿಂದ ಶುದ್ಧ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಪುನಃ ಹಿಂದಿನಂತೆ ಪಂಚಾಯತ್ ನ ಕುಡಿಯಲು ಯೋಗ್ಯವಲ್ಲದ ಬೋರ್ ವೆಲ್ ನ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಜಲಸಿರಿ ಯೋಜನೆಯ ಶುದ್ಧನೀರು ರೇಚಕ ಸ್ಥಾವರದಿಂದ ಆದರ್ಶನಗರದ ತನಕ ಸರಾಗವಾಗಿ ಬರುತ್ತಿದ್ದು, ಅಲ್ಲಿಂದ ಬೊಳಂತಿಲ ಮತ್ತು ನೆಕ್ಕಿಲಾಡಿ ಪ್ರದೇಶಗಳಿಗೆ ಮಾತ್ರ ತಲುಪದಿರುವುದು ನಾಗರಿಕರಲ್ಲಿ ಆತಂಕವನ್ನು ಉಂಟು ಮಾಡಿದೆ. ಜಲಸಿರಿ ಅಧಿಕಾರಿಗಳ ಪ್ರಕಾರ ನಾವು ಶುದ್ಧ ನೀರು ಸರಿಯಾದ ಒತ್ತಡದಲ್ಲಿ ಬಿಡುತ್ತೇವೆ. ಬಂದು ಪರಿಶೀಲಿಸಬಹುದು ಎಂದು ತಿಳಿಸಿದ್ದಾರೆ. ಹೀಗಿರುವಾಗ ಬೊಳಂತಿಲ ಹಾಗೂ ನೆಕ್ಕಿಲಾಡಿ ಪ್ರದೇಶಗಳಿಗೆ ನೀರು ತಲುಪದಿರುವುದು ಪಂಚಾಯತ್ ನ ನಿರ್ಲಕ್ಷ ಅಥವಾ ತಾರತಮ್ಯ ಎನ್ನುವ ಸಂಶಯವನ್ನು ಹುಟ್ಟಿಸುತ್ತದೆ. ಆದುದರಿಂದ ವಿಚಾರವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ ಶುದ್ಧ ನೀರು ಪೂರೈಕೆಗೆ ಉಂಟಾದ ತೊಂದರೆಯನ್ನು ನಿವಾರಿಸಿ, ಮುಂದಿನ ಎರಡು ದಿನಗಳೊಳಗೆ ಶುದ್ಧ ನೀರು ಪೂರೈಕೆಯನ್ನು ಪುನಃ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದು, ಸ್ಪಂದನೆ ದೊರೆಯದಿದ್ದಲ್ಲಿ 34 ನೆಕ್ಕಿಲಾಡಿ ನಾಗರಿಕ ನಾಗರಿಕ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಪಂಚಾಯತ್ ಎದುರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಯುನಿಕ್, ಪ್ರಧಾನ ಕಾರ್ಯದರ್ಶಿ ಅಜೀಜ್ ಪಿಟಿ, ಕೋಶಾಧಿಕಾರಿ ಫಯಾಜ್, ಉಪಾಧ್ಯಕ್ಷ ಶರೀಪ್ ಹಾಗೂ ಸಾದಿಕ್ ಆದರ್ಶನಗರ, ಕಾರ್ಯದರ್ಶಿ ಕಲಂದರ್ ಶಾಪಿ, ಸಮಿತಿ ಸದಸ್ಯರಾದ ಹೈದರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here