- ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಪೂರಕ: ಜ್ಞಾನೇಶ್ ಬಿ.
- ಎಲ್ಲರ ಸಹಕಾರದಿಂದ ನಾನು ಈ ಮಟ್ಟಕ್ಕೆ ಬೆಳೆದೆ:ಶ್ರುತಿಕಾ
ವಿಟ್ಕ:ನಿರಂತರ ಓದು, ಅನುಭವ ಹಾಗೂ ಸದ್ಭಾವನೆಗಳು ನಮ್ಮ ವ್ಯಕ್ತಿತ್ವವನ್ನು ಸುಂದರಗೊಳಿಸುತ್ತವೆ ಎಂದು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಬಿ.ಹೇಳಿದರು.
ಬಂಟ್ವಾಳ ತಾಲೂಕು ಕುಳ ಗ್ರಾಮದ ಓಜಾಲ ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆದ ಬಂಟ್ವಾಳ ತಾಲೂಕು 16ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮ ಉತ್ತಮವಾದ ವೇದಿಕೆ ಕಲ್ಪಿಸುತ್ತದೆ, ಸಾಹಿತ್ಯದ ಆಸಕ್ತಿಯನ್ನು ಮೈಗೂಡಿಸಿಕೊಂಡ ವಿದ್ಯಾರ್ಥಿಗಳು ಬದುಕಿನಲ್ಲಿ ನಿರಂತರ ಯಶಸ್ಸು ಕಂಡುಕೊಳ್ಳುತ್ತಾರೆ ಎಂದವರು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಓಜಾಲ ಹಿ.ಪ್ರಾ.ಶಾಲಾ ವಿದ್ಯಾರ್ಥಿನಿ ಶ್ರುತಿಕಾರವರು ಮಾತನಾಡಿ, ಹೆತ್ತವರು ಹಾಗೂ ಶಿಕ್ಷಕರು ನೀಡಿದ ನಿರಂತರ ಮಾರ್ಗದರ್ಶನ ಆಶೀರ್ವಾದದಿಂದ ನಾನಿಂದು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದೆ. ಇದಕ್ಕೆ ಅವಕಾಶ ನೀಡಿದ ಮಕ್ಕಳ ಕಲಾ ಲೋಕಕ್ಕೆ ಕೃತಜ್ಞತೆ ಸಲ್ಲಿಸಿದರು. ನಮ್ಮ ಶಾಲೆ ನಮ್ಮ ಹೆಮ್ಮೆ ಎಂದು ಎಲ್ಲರೂ ಸಹಕಾರ ನೀಡಿದ ನಿಟ್ಟಿನಲ್ಲಿ ಈ ಕಾರ್ಯಕ್ರಮ ಯಶಸ್ಸಾಗಿದೆ. ನನಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ತಮ್ಮ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಸೇರಿಕೊಳ್ಳಲು ಸಹಕಾರ ನೀಡಿ ಎಂದರು. ನಂದಿತಾರವರು ಸಮಾರೋಪ ಭಾಷಣ ಮಾಡಿದರು. ವಿಠಲ್ ಜೇಸೀಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕೃತಿಕಾ ಶೆಣೈರವರು ‘ಸಾಹಿತ್ಯ ತಾರೆ’ ಪ್ರಶಸ್ತಿ ಪುರಸ್ಕೃತ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಪರಿಚಯ ಮಾಡಿದರು. ಸಂಸ್ಥೆಯ ಪರವಾಗಿ ‘ಸಾಹಿತ್ಯ ತಾರೆ’ ಪ್ರಶಸ್ತಿ ಸ್ವೀಕರಿಸಿದ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲ ಜಯರಾಮ ರೈಯವರು ಮಾತನಾಡಿ ಎಲ್ಲದರ ಮೂಲ ಸಾಹಿತ್ಯ. ಆದರೆ ಸಾಹಿತ್ಯದ ಆಸಕ್ತಿ ಹೆಚ್ಚಿನ ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ.ಸಾಹಿತ್ಯಕ್ಕಾಗಿ ತಮ್ಮ ಶಾಲಾ ವಿದ್ಯಾರ್ಥಿಗಳು ಅಳಿಲ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಆಭಾರಿಯಾಗಿದ್ದೇವೆ ಎಂದರು.
ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಸುಧೀರ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಯಶೋಧ, ಓಜಾಲ ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಚಿದಾನಂದ ಪೆಲತ್ತಿಂಜ, ಕನ್ನಡ ಸಾಹಿತ್ಯ ಪರಿಷತ್ ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ್ ಎಂ. ಬಾಯಾರು, ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಶಾಲಾ ಮುಖ್ಯ ಶಿಕ್ಷಕರಾದ ಸಂಜೀವ ಮಿತ್ತಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪುಸ್ತಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಳಕೆಮಜಲು ಕಿ.ಪ್ರಾ ಶಾಲಾ ವಿದ್ಯಾರ್ಥಿನಿ ಸರಾಫಿಯ ವಂದಿಸಿದರು. ಕುಂಡಡ್ಕ ಕಿ.ಪ್ರಾ. ಶಾಲಾ ವಿದ್ಯಾರ್ಥಿನಿ ಗಾನವಿ ಕಾರ್ಯಕ್ರಮ ನಿರೂಪಿಸಿದರು.
ಮೌನೇಶ್ ವಿಶ್ವಕರ್ಮರಿಗೆ ಬಾಲಬಂಧು ಪ್ರಶಸ್ತಿ ಪ್ರದಾನ
ಇದೇ ಸಂದರ್ಭದಲ್ಲಿ ರಂಗನಿರ್ದೇಶಕ, ಪತ್ರಕರ್ತ ಮೌನೇಶ್ ವಿಶ್ವಕರ್ಮರವರಿಗೆ ‘ಬಾಲಬಂಧು’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ಯಶಿಕಾರವರು ಮೌನೇಶ್ ವಿಶ್ವಕರ್ಮರವರ ಅಭಿನಂದನಾ ಪತ್ರ ವಾಚಿಸಿದರು. ಪ್ರಶಸ್ತಿ ಸ್ವೀಕರಿಸಿದ ಮೌನೇಶ್ ವಿಶ್ವಕರ್ಮರವರು ಮಾತನಾಡಿ, ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ತನ್ನನ್ನು ಗುರುತಿಸಿರುವುದು, ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಿದೆ. ಮಕ್ಕಳ ಸಾಹಿತ್ಯ ಕ್ಷೇತ್ರ ರಂಗಭೂಮಿಯ ಮೂಲಕ ಮತ್ತಷ್ಟು ವಿಸ್ತಾರಗೊಳ್ಳಲಿ ಎಂದರು.