ನೀರಿನಡಿಯಲ್ಲಿ ಉರ್ಧ್ವ ಧನುರಾಸನ ಭಂಗಿಯಲ್ಲಿ 1 ನಿಮಿಷ 28 ಸೆಕೆಂಡ್ ನಿಲ್ಲುವ ಸಾಹಸ
ಪುತ್ತೂರು: ಇತ್ತೀಚೆಗೆ ಉಸಿರು ಬಿಗಿ ಹಿಡಿದು ನೀರಿನಡಿಯಲ್ಲಿ 29 ಬಾರಿ ಮುಂಭಾಗದ ತಿರುವು ಮಾಡಿ ಇಂಡಿಯ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆಯ ಸಾಧನೆ ಮಾಡಿದ್ದ ಕೆ. ಚಂದ್ರಶೇಖರ. ರೈ ಸೂರಿಕುಮೇರುರವರು ಇನ್ನೊಂದು ದಾಖಲೆ ನಿರ್ಮಿಸಿದ್ದಾರೆ. ನೀರಿನಡಿಯಲ್ಲಿ ಉರ್ಧ್ವ ಧನುರಾಸನ ಭಂಗಿಯಲ್ಲಿ 1 ನಿಮಿಷ 28 ಸೆಕೆಂಡ್ ಕಾಲ ನಿಂತು ಇಂಡಿಯ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದ್ದಾರೆ.
ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಪಾಲಿಕೆಯ ಈಜುಕೊಳದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ 2ನೇ ಸಾಧನೆ ಮಾಡಿರುತ್ತಾರೆ.
ಮೂಲತಃ ಪುರುಷರಕಟ್ಟೆಯ ಇಂದಿರಾನಗರ ನಿವಾಸಿಯಾಗಿರುವ ಚಂದ್ರಶೇಖರ ರೈಯವರು ದಿ. ಜನಾರ್ದನ ರೈ ಹಾಗೂ ಪುಷ್ಪಾವತಿ ರೈ ದಂಪತಿ ಪುತ್ರ. ನರಿಮೊಗರು ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ದರ್ಬೆ ಸಂತ ಫಿಲೋಮಿನಾದಲ್ಲಿ ಪ್ರೌಢ ಶಾಲೆ ಹಾಗೂ ಕಾಲೇಜು ಶಿಕ್ಷಣವನ್ನು ಪೂರೈಸಿರುತ್ತಾರೆ. ರಾಷ್ಟ್ರಮಟ್ಟದ ಈಜುಪಟುವಾಗಿರುವ ಚಂದ್ರಶೇಖರ ರೈಯವರು ವಿಶ್ವವಿದ್ಯಾನಿಲಯ ಮಟ್ಟದ ಪೋಲ್‌ವಾಲ್ಟ್‌ನಲ್ಲಿ ಒಂದು ಬಾರಿ ಬೆಳ್ಳಿ ಹಾಗೂ ಎರಡು ಬಾರಿ ಚಿನ್ನದ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ರಾಷ್ಟ್ರೀಯ ಮಟ್ಟದ ಪೋಲ್ ವಾಲ್ಟ್ ಹಾಗು ರಾಷ್ಟ್ರೀಯ ಮಟ್ಟದ ಈಜು ಪಟುವಾಗಿರುವ ಇವರು ಪ್ರಸಕ್ತ ಮಂಗಳೂರು ಮಹಾನಗರ ಪಾಲಿಕೆಯ ಈಜು ಕೋಳದಲ್ಲಿ ನಿರ್ವಹಣೆ ಕೆಲಸ ಹಾಗೂ ಈಜು ತರಬೇತಿ ನೀಡುತ್ತಿದ್ದಾರೆ.