ಪುತ್ತೂರು: ತೊಂದರೆ ಸಮಸ್ಯೆ ಉಂಟಾದಾಗ ರಕ್ಷಣೆ ನೀಡುವ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು, ಇವೆಲ್ಲವನ್ನು ಗಮನಿಸಿದಾಗ ತನ್ನ ರಕ್ಷಣೆಗೆ ಪೊಲೀಸರೇ ಸೂಕ್ತ ಎಂಬಂತೆ ಗಾಯಗೊಂಡ ಪಕ್ಷಿಯೊಂದು ಪುತ್ತೂರು ಮುಖ್ಯರಸ್ತೆಯಲ್ಲಿರುವ ಪೊಲೀಸ್ ಚೌಕಿಯಲ್ಲಿ ಆಶ್ರಯಪಡೆದಿರುವಂತೆ ಮಾಧ್ಯಮದ ಕ್ಯಾಮರ ಕಣ್ಣಿಗೆ ಕಂಡಿದೆ.
ಪುತ್ತೂರು ಗಾಂಧಿಕಟ್ಟೆಯ ಬಳಿಯ ಅಶ್ವತ್ಥ ಮರ ಅಥವಾ ಅದರ ಎದುರು ಬದಿಯಲ್ಲಿರುವ ಮರದಲ್ಲಿ ನೂರಾರು ಪಕ್ಷಿಗಳು ಹಲವು ವರ್ಷಗಳಿಂದ ಆಶ್ರಯ ಪಡೆದಿವೆ. ಬೆಳಗ್ಗೆ ಪಕ್ಷಿಗಳು ಹಾರುವ ವೇಗಕ್ಕೆ ಮರದ ಗೆಲ್ಲುಗಳು ತಾಗಿ ಪಕ್ಷಿಗಳು ಕೆಳಗಡೆ ಬೀಳುವುದು ಸಹಜ. ಆದರೆ ಇಲ್ಲೊಂದು ಪಕ್ಷಿಯು ಗಾಯವಾಗಿ ರಸ್ತೆಯಲ್ಲಿ ಬಿದ್ದಿರುವುದನ್ನು ದಾರಿಹೊಕ್ಕರು ಮಾನವೀಯ ನೆಲೆಯಲ್ಲಿ ಪೊಲೀಸ್ ಚೌಕಿಯೊಳಗಿದ್ದರೆ ಅದು ಸುರಕ್ಷಿತ ಎಂದು ಅಲ್ಲಿ ಬಿಟ್ಟು ಹೋಗಿದ್ದಾರೆ. ಪಕ್ಷಿಯೂ ತಾನು ಪೊಲೀಸ್ ಚೌಕಿಯಲ್ಲಿದ್ದರಿಂದ ಸೂಕ್ತ ರಕ್ಷಣೆ ಒದಗಿದೆ ಎಂದು ಸುಮ್ಮನೆ ಕೂತು ಕೊಂಡಿರುವಂತೆ ಕಂಡು ಬಂದಿದೆ.