ಬೆಟ್ಟಂಪಾಡಿ: ಬೆಳ್ಳಂಬೆಳಗ್ಗೆ ಮೂಡಣ ದಿಕ್ಕಿನಲ್ಲಿ ರವಿ ಏರುವ ಮುನ್ನವೇ ಭಕ್ತ ಗಣ ಸೇರಿ ದೇವರಿಗೆ ಮುಂಜಾವಿನ ಪ್ರಾತಃಕಾಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಧನುಮಾಸ ವಿಶೇಷ ಪೂಜೆ ದೇವಾಲಯಗಳಲ್ಲಿ ಆರಂಭಗೊಂಡಿದೆ. ಚುಮು ಚುಮು ಚಳಿ, ನಿದ್ದೆಯ ಮಂಪರಿನಲ್ಲೂ ತಮ್ಮ ಆರಾಧ್ಯ ದೇವರ ಪೂಜಾ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಕಾತುರ.. ರುದ್ರಪಾರಾಯಣ, ಭಜನೆ, ಕುಣಿತ ಭಜನೆ, ಸಂಗೀತ, ಚೆಂಡೆ ತಾಳ ಮೇಳದ ನಿನಾದದೊಂದಿಗೆ ದೇವರಿಗೆ ಸಲ್ಲುತ್ತದೆ ಧನು ಮಾಸದ ವಿಶೇಷ ಪೂಜೆ.
ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿಯೂ ಧನುಮಾಸದ ವಿಶೇಷ ಪೂಜೆ ದ. 17 ರಂದು ಆರಂಭಗೊಂಡಿತು. ಪ್ರತಿ ದಿನ ಪೂರ್ವಾಹ್ನ 5.30ರಿಂದ ಮಹಾಲಿಂಗೇಶ್ವರ ದೇವರಿಗೆ ಭಕ್ತಿಯ ಧನುಪೂಜೆಯ ಸಮರ್ಪಣೆಯಾಗಲಿದೆ. ಪೂಜೆಗೂ ಮೊದಲು ರುದ್ರಾಧ್ಯಾಯಿಗಳಿಂದ ರುದ್ರಪಾರಾಯಣ, ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಕುಣಿತ ಭಜನಾ ತಂಡದವರಿಂದ ನೃತ್ಯ ಭಜನಾ ಸೇವೆ, ಮಣಿಕಂಠ ಚೆಂಡೆ ಮೇಳದವರಿಂದ ಚೆಂಡೆ ಸೇವೆ, ಸಂಗೀತ, ಯಕ್ಷಗಾನ ಸೇವೆ ನಡೆದು ಬರುತ್ತದೆ. ಪೂಜೆಯ ಬಳಿಕ ಭಕ್ತಾಭಿಮಾನಿಗಳಿಗೆ ಉಪಾಹಾರದ ವ್ಯವಸ್ಥೆಯೂ ನಡೆಯುತ್ತದೆ. ವಿಶೇಷ ದಿನಗಳಂದು ದೇವರಿಗೆ ಮತ್ತು ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ, ದೀಪಾಲಂಕಾರ ಸೇವೆಯೂ ನಡೆಯುತ್ತದೆ.
ಈ ಬಾರಿ ಮೂರನೇ ವರ್ಷದ ಧನುಪೂಜೆ ಕ್ಷೇತ್ರದಲ್ಲಿ ನಡೆಯಲಿದ್ದು, ಕಳೆದ ಎರಡು ವರ್ಷವೂ ಭಾರೀ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಊರ ಪರವೂರ ಭಕ್ತರು ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿದ್ದಾರೆ.