ನರೇಂದ್ರ ಪ.ಪೂ.ಕಾಲೇಜಿನ ವಾರ್ಷಿಕೋತ್ಸವ

0

ಪುತ್ತೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿ ಜೀವನವು ಅಧಿಕ ಸವಾಲಿನಿಂದ ಕೂಡಿದ್ದು,ಅದನ್ನು ಸಮರ್ಪಕವಾಗಿ ಎದುರಿಸಲು ಸಕರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಧನೆಯ ಹಾದಿಗೆ ಆತ್ಮವಿಶ್ವಾಸವನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಜೀವನದಲ್ಲಿ ಗೆಲುವು ಸಾಧಿಸಬೇಕು ಎಂದು ಬೆಂಗಳೂರಿನ ಬಿಎಸ್‌ಬಿಎಸ್ ದ ಬಿ-ಸ್ಕೂಲ್ ನ ಉಪಾಧ್ಯಕ್ಷರಾದ ವಿನಯ್ ವಿ ಜಾದವ್ ಹೇಳಿದರು.

ಪುತ್ತೂರಿನ ತೆಂಕಿಲದಲ್ಲಿರುವ ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ಐಕ್ಯತೆ, ಸಾಮರಸ್ಯದ ಬದುಕು ಸಾಗಿಸುವ ಮೂಲಕ ಭವ್ಯ, ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು. ಭಾರತದ ಉನ್ನತ ಭವಿಷ್ಯಕ್ಕೆ ಹೊಸ ಹೊಸ ಆವಿಷ್ಕಾರಗಳ ಅಗತ್ಯವಿದೆ. ಸ್ಪರ್ಧೆಗಳಿದ್ದಷ್ಟೂ ಅವಕಾಶಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ನಿರಂತರ ಅಧ್ಯಯನ ಮಾಡುವುದು ಸೂಕ್ತ. ಗುರಿ ಇದ್ದಡೆ ಬಾಳಿಗೊಂದು ಗರಿ. ಆಗ ಭವಿಷ್ಯದ ಬದುಕು ಉಜ್ವಲವಾಗುತ್ತದೆ. ಸಾಧನೆಯ ಹಾದಿಯಲ್ಲಿ ಪ್ರಯತ್ನವನ್ನು ಮುಂದೂಡುವ ಪ್ರವೃತ್ತಿ ತೊರೆದು ಕಾರ್ಯಶೀಲತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿಯಾದ ಅಚ್ಯುತ ನಾಯಕ್ ರವರು ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಒಳಗೊಂಡ ಆಧುನಿಕ ಶಿಕ್ಷಣ ಸೌಲಭ್ಯವನ್ನು ಒದಗಿಸುವುದು ಈ ಸಂಸ್ಥೆಯ ಉದ್ದೇಶ. ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿಕೊಳ್ಳಲು ಶಿಕ್ಷಣ ಕ್ಷೇತ್ರದಲ್ಲಿ ಅಪರಿಮಿತ ಅವಕಾಶಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಮಾಜದ ಆಸ್ತಿಗಳಾಗಿ ಹೊರಹೊಮ್ಮಬೇಕಾಗಿದೆ. ಎಂದು ಹೇಳಿದರು.

ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿಗಳಾದ ರೂಪಲೇಖ, ನರೇಂದ್ರ ಪ.ಪೂ.ಕಾಲೇಜಿನ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ, ಸಂಚಾಲಕ ಸಂತೋಷ ಬಿ., ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತ್ಯನಾರಾಯಣ ಬಿ., ವಿದ್ಯಾರ್ಥಿ ಸಂಘದ ನಾಯಕ ದ್ವಿತೀಯ ವಿಜ್ಞಾನ ವಿಭಾಗದ ಮಹೇಶ್ ಪ್ರಸಾದ್, ಕಾರ‍್ಯದರ್ಶಿ ದ್ವಿತೀಯ ವಿಜ್ಞಾನ ವಿಭಾಗದ ದೀಕ್ಷ ಮತ್ತು ಜೊತೆ ಕಾರ‍್ಯದರ್ಶಿ ಪ್ರಥಮ ವಿಜ್ಞಾನ ವಿಭಾಗದ ಚೈತ್ರ ಸಿ.ಕೆ. ಉಪಸ್ಥಿತರಿದ್ದರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ವಸಂತ ಸುವರ್ಣ, ನರೇಂದ್ರ ಪ.ಪೂ.ಕಾಲೇಜಿನ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಕೇಶವ ಮೂರ್ತಿ, ಸೂರ್ಯನಾಥ ಆಳ್ವ, ಮೋಹಿನಿ ದಿವಾಕರ ಮತ್ತು ವಿದ್ಯಾರ್ಥಿಗಳ ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

2022-23 ನೇ ಸಾಲಿನಲ್ಲಿ ಶೈಕ್ಷಣಿಕ, ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿಜ್ಞಾನ ಸಂಘ, ವಾಣಿಜ್ಯ ಸಂಘ ಮತ್ತು ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.

ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಉಪನ್ಯಾಸಕ ವಿಘ್ನೇಶ್ ಸ್ವಾಗತಿಸಿ, ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ವಂದಿಸಿದರು.ಬಳಿಕ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here