ಅಂಬಿಕಾ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ: ಶಿಸ್ತು, ನಾಯಕತ್ವ ಗುಣ ಬೆಳೆಸಿಕೊಳ್ಳುವುದಕ್ಕೆ ಎನ್‌ಎಸ್‌ಎಸ್ ಸಹಕಾರಿ: ಸತ್ಯಜಿತ್ ಉಪಾಧ್ಯಾಯ

0

ಪುತ್ತೂರು: ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವಂತೆ ಮಾಡಲು ಕಾಲೇಜು ಹಂತದಲ್ಲಿ ವಿವಿಧ ಯೋಜನೆಗಳಿರುವುದನ್ನು ಗಮನಿಸಬಹುದು. ಅಂತಹ ಆಲೋಚನೆಯೊಂದಿಗೆ ರೂಪುಗೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರಲ್ಲಿ ಶಿಸ್ತು, ಸ್ವಚ್ಛತೆ, ನಾಯಕತ್ವ ಗುಣ, ಸಮಯಪಾಲನೆ ಹಾಗೂ ಸಾಮಾಜಿಕ ಕಳಕಳಿಯನ್ನು ತುಂಬುವ ಕಾರ್ಯವನ್ನು ಮಾಡುತ್ತದೆ. ಶ್ರಮದಾನ, ವಿಶೇಷ ಶಿಬಿರಗಳಲ್ಲಿ ನಡೆಸುವ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ. ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ೨೦೨೨-೨೩ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ ವಾಕ್ಯವೇ ನನಗಲ್ಲ, ನಿನಗೆ ಎಂಬುದಾಗಿದೆ. ಅಂದರೆ ಸಮಾಜಕ್ಕಾಗಿ ವಿದ್ಯಾರ್ಥಿಗಳು ನೀಡುವ ಕೊಡುಗೆಯಾಗಿದೆ. ಸೇವೆಯೊಂದಿಗೆ ಸ್ವ- ಬೆಳವಣಿಗೆ ಹೊಂದುವುದು ಇದರ ಉದ್ದೇಶವಾಗಿದೆ. ಶಿಬಿರ ಜ್ಯೋತಿಯಂತಹಾ ಕಾರ್ಯಕ್ರಮಗಳು ರಾಷ್ಟ್ರಕ್ಕೆ ವ್ಯಕ್ತಿ ನೀಡಬೇಕಾದ ಕೊಡುಗೆಯ ಮಹತ್ವವನ್ನು ಸಾರುತ್ತದೆ ಎಂದರು.

ಪಠ್ಯೇತರ ವಿಚಾರಗಳಲ್ಲಿ ನಾವು ಜ್ಞಾನ ಪಡೆಯುವಲ್ಲಿ ಎನ್.ಎಸ್.ಎಸ್. ಸಹಕರಿಸುತ್ತದೆ. ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ವಿಚಾರಗಳನ್ನು ಸ್ವಯಂ ಸೇವಕರು ಅಳವಡಿಸಿಕೊಳ್ಳುವುದು ಅವಶ್ಯಕ. ವಿದ್ಯಾರ್ಥಿ ಜೀವನದಲ್ಲಿ ಲಭಿಸುವ ಇಂತಹ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಲು ಸಾಧ್ಯ. ಎನ್. ಎಸ್ ಎಸ್ ಮೂಲಕ ಸೇವೆಯೊಂದಿಗೆ ಸ್ವ- ಬೆಳವಣಿಗೆ ಹೊಂದಬಹುದು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ರಾಷ್ಟ್ರೀಯ ಸೇವಾ ಯೋಜನೆ ವರ್ಷಪೂರ್ತಿ ನಿರಂತರವಾಗಿ ನಡೆಯುವ ಚಟುವಟಿಕೆ. ಶಿಕ್ಷಣ ಸದ್ವಿನಿಯೋಗವಾಗಬೇಕಾದರೆ ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗುವುದು ಅಗತ್ಯ. ವ್ಯಕ್ತಿತ್ವ ನಿರ್ಮಾಣ ಕಾರ್ಯಕ್ಕೆ ಎನ್‌ಎಸ್‌ಎಸ್ ಸಹಕಾರಿ ಎಂದರು.

ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ನಾಯಕರಾದ ದ್ವಿತೀಯ ಪದವಿ ವಿದ್ಯಾರ್ಥಿಗಳಾದ ನವನೀತ್, ದೀಕ್ಷಾ, ಶ್ರೀರಾಮ, ಲೇಖಾ ಹಾಗೂ ಕಾಲೇಜಿನ ಸ್ವಯಂಸೇವಕರು ಪ್ರಮಾಣ ವಚನ ಸ್ವೀಕರಿಸಿದರು. ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರಥಮ ವಾಣಿಜ್ಯ ಪದವಿ ವಿದ್ಯಾರ್ಥಿನಿಯರಾದ ಶರಣ್ಯ, ದೀಪಾ ಪ್ರಾರ್ಥಿಸಿದರು. ಕಾಲೇಜಿನ ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಹರ್ಷಿತ್ ಪಿಂಡಿವನ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ನವನೀತ್ ವಂದಿಸಿದರು. ವಿದ್ಯಾರ್ಥಿನಿ ಮೇಘಾ ಕಿರಿಮಂಜೇಶ್ವರ ನಿರೂಪಿಸಿದರು.

LEAVE A REPLY

Please enter your comment!
Please enter your name here