ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ವಿಳಂಬ `ತಹಶೀಲ್ದಾರ್ ಗ್ರಾಮವಾಸ್ತವ್ಯ’ದಲ್ಲಿ ಪ್ರಸ್ತಾಪ-ಅಧಿಕಾರಿಗೆ ತರಾಟೆ

0

ರಸ್ತೆ ಕೊಡಿ ಇಲ್ಲವೇ ನಮಗೆ ವಿಷ ಕೊಡಿ ೧೦ ತಹಸಿಲ್ದಾರ್,
ಎಸಿ ಬಂದರೂ ನಮ್ಮ ಸಮಸ್ಯೆಪರಿಹಾರವಾಗಿಲ್ಲ
ಇರುವ ಅಲ್ಪಸ್ವಲ್ಪ ಜಾಗವೂಹೋದರೆ ಆತ್ಮಹತ್ಯೆಮಾಡಿಕೊಳ್ಳಬೇಕಷ್ಟೆ
೧೦೦ ವರ್ಷಗಳಿಂದ ಹಕ್ಕುಪತ್ರವಿಲ್ಲ
ಬೆಳ್ಳಿಪ್ಪಾಡಿಗೆ ದಿನದ ಮೂರು ಹೊತ್ತುಬಸ್ ಒದಗಿಸಿ
ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆಯೆಂಬ ಉತ್ತರ ಮಾತ್ರ-ಕಾಮಗಾರಿ ನಡೆಯುತ್ತಿಲ್ಲ
ಆಗ ಕೆಲಸ ಮಾಡಿದ್ದ ಅಧಿಕಾರಿ ಹೆಂಡ ಕುಡಿದಿದ್ರಾ?
ಗ್ರಾಮ ವಾಸ್ತವ್ಯವಲ್ಲ, ಗ್ರಾಮ ಭೇಟಿ

ಪುತ್ತೂರು:ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡು ಎರಡೂವರೆ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೇ ಇರುವ ವಿಚಾರ ಪ್ರಸ್ತಾಪಿಸಿದ ನಾಗರಿಕರು, ನಗರಸಭೆಯ ಪೈಪ್‌ಲೈನ್ ಸ್ಥಳಾಂತರ ಬಾಕಿಯಾಗಿರುವುದರಿಂದ ಸಮಸ್ಯೆಯಾಗಿರುವುದಾಗಿ ಉತ್ತರ ನೀಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ತರಾಟೆಗೆತ್ತಿಕೊಂಡ ಘಟನೆ ಬೆಳ್ಳಿಪ್ಪಾಡಿಯಲ್ಲಿ `ತಹಸಿಲ್ದಾರ್ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದಲ್ಲಿ ನಡೆದಿದೆ.

ತಹಶೀಲ್ದಾರ್ ನಿಸರ್ಗಪ್ರಿಯ ಅವರ ನೇತೃತ್ವದಲ್ಲಿ `ಗ್ರಾಮ ವಾಸ್ತವ್ಯ’ಕಾರ್ಯಕ್ರಮವು ಬೆಳ್ಳಿಪ್ಪಾಡಿ ಹಿ.ಪ್ರಾ ಶಾಲೆಯಲ್ಲಿ ದ.೧೭ರಂದು ನಡೆಯಿತು.ಗ್ರಾಮಸಭೆಯ ಮಾದರಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಾಗರಿಕರು ವಿವಿಧ ವಿಚಾರಗಳ ಕುರಿತು ಪ್ರಸ್ತಾಪಿಸಿದರು.

ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ ಸುಮಾರು ಎರಡೂವರೆ ವರ್ಷಗಳೇ ಕಳೆದಿದೆ.ಆದರೆ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.ಇದರಿಂದಾಗಿ ಬಹಳಷ್ಟು ಸಮಸ್ಯೆಗಳಾಗುತ್ತಿದೆ.ಇದಕ್ಕೆ ಕಾರಣವೇನು? ಎಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮೋಹನ ಪಕ್ಕಳ ಕುಂಡಾಪು ಪ್ರಶ್ನಿಸಿದರು.ನಗರ ಸಭೆಯ ನೀರಿನ ಪೈಪ್‌ಲೈನ್ ಸ್ಥಳಾಂತರ ಬಾಕಿಯಿರುವುದರಿಂದ ಸಮಸ್ಯೆ ಉಂಟಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ತಿಳಿಸಿದರು.ಅವರ ಉತ್ತರ ಗ್ರಾಮಸ್ಥರು ಕೆರಳುವಂತೆ ಮಾಡಿತು.ನಿಮ್ಮ ಹಾರಿಕೆಯ ಉತ್ತರ ನಮಗೆ ಬೇಡ.ಪೈಪ್ ಇಲ್ಲದ ಕಡೆ ಯಾಕೆ ಕಾಮಗಾರಿ ನಡೆಸಿಲ್ಲ ಎಂದು ತಾ.ಪಂ.ಮಾಜಿ ಅಧ್ಯಕ್ಷ ಜಯಾನಂದ ಪ್ರಶ್ನಿಸಿದರು.ಮೂರು ವರ್ಷಗಳಿಂದ ನಗರ ಸಭೆಯ ಪೈಪ್‌ಲೈನ್ ಸಮಸ್ಯೆಗಳನ್ನೇ ಹೇಳುತ್ತಾ ಬರುತ್ತಿದ್ದೀರಿ ಎಂದು ಮೋಹನ ಪಕ್ಕಳ ಹೇಳಿದರು.ಗ್ರಾಮಸ್ಥರು ಧ್ವನಿಗೂಡಿಸಿ ಶೀಘ್ರ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.ರಸ್ತೆಬದಿ ತಡೆಗೋಡೆ ನಿರ್ಮಾಣದಲ್ಲಿಯೂ ಬಡವರ ಮನೆಗಳನ್ನು ಬಿಟ್ಟು ಉಳಿದ ಕಡೆ ನಿರ್ಮಿಸಲಾಗಿದೆ.ಅವಶ್ಯಕತೆಯಿರುವಲ್ಲಿ ತಡೆಗೋಡೆ ನಿರ್ಮಿಸಿಲ್ಲ ಎಂದು ರಾಮಣ್ಣ ಗೌಡ, ಮೋಹನ ಪಕ್ಕಳ ಮೊದಲಾದವರು ಆರೋಪಿಸಿದರು.೩ ವರ್ಷಗಳಿಂದ ಪೈಪ್ ಲೈನ್ ಸ್ಥಳಾಂತರವಾಗದ ಬಗ್ಗೆ ಕಾರಣಗಳನ್ನು ಹೇಳುತ್ತಿರುವ ನಿಮಗೆ ಬೇರೆ ಯಾರೊಂದಿಗಾದರೂ ಹೊಂದಾಣಿಕೆ ಆಗಿದೆಯಾ ಎಂದು ಜಯಾನಂದರವರು ಪ್ರಶ್ನಿಸಿ, ಲೋಕೋಪಯೋಗಿ ಇಲಾಖಾಧಿಕಾರಿಯನ್ನು ತರಾಟೆಗೆತ್ತಿಕೊಂಡರು.ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಬಹಳಷ್ಟು ತೊಂದರೆಗಳಾಗುತ್ತಿರುವುದರಿಂದ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

`ರಸ್ತೆ ಕೊಡಿ ಇಲ್ಲವೇ ನಮಗೆ ವಿಷ ಕೊಡಿ’ ಇರುವ ಅಲ್ಪಸ್ವಲ್ಪ ಜಾಗವೂ ಹೋದರೆ ಆತ್ಮಹತ್ಯೆ:
ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಡೆಕ್ಕಾಜೆ-ಪರನೀರುನಲ್ಲಿ ಕಳೆದ ೨೦ ವರ್ಷಗಳಿಂದ ಇರುವ ರಸ್ತೆ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ ಸ್ಥಳೀಯ ನಾಗರಿಕರು,`ನಮಗೆ ರಸ್ತೆಕೊಡಿ ಇಲ್ಲವೇ ವಿಷಕೊಡಿ’ ಎಂದು ಹೇಳಿ ತಮ್ಮ ಅಳಲನ್ನು ತೋಡಿಕೊಂಡರೆ, ಇದೇ ವಿಚಾರದಲ್ಲಿ ಸ್ಥಳೀಯ ಮಹಿಳೆ ಹಾಗೂ ಆಕೆಯ ಮಕ್ಕಳಿಬ್ಬರು,`ಇದೀಗ ನಮ್ಮ ಮನೆಯ ಅಂಗಲದಲ್ಲಿಯೇ ರಸ್ತೆ ನಿರ್ಮಿಸಲು ಮುಂದಾಗಿದ್ದು ನಮಗಿರುವ ಅಲ್ಪಸ್ವಲ್ಪ ಜಾಗವನ್ನೂ ಕಳೆದುಕೊಂಡರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೆ’ಎಂದು ಹೇಳಿದ ಘಟನೆ ನಡೆದಿದೆ.

ಕೋಡಿಂಬಾಡಿಯ ಡೆಕ್ಕಾಜೆ ಎಂಬಲ್ಲಿರುವ ನಾವು ಕಳೆದ ೨೦ ವರ್ಷಗಳಿಂದ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿರುವ ರಸ್ತೆ ಸೌಲಭ್ಯವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದೆವೆ.ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯ ಸ್ಥಿತಿಯಿದೆ.ನಾವು ಮನವಿ ಸಲ್ಲಿಸಿದ ಬಳಿಕ ೧೦ ತಹಶೀಲ್ದಾರ್, ಎಸಿಯವರು ಬಂದು ಹೋದರೂ ನಮ್ಮ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ.ಶಾಸಕರೇ ಇದನ್ನು ತಡೆಯುವಂತೆ ಹೇಳಿದ್ದಾರೆ ಎಂದು ಪದ್ಮನಾಭ ಆಚಾರ್ಯ ಡೆಕ್ಕಾಜೆ ಆರೋಪಿಸಿದರು.ಇದಕ್ಕೆ ಪದ್ಮಪ್ಪ ಪೂಜಾರಿ ಹಾಗೂ ಪ್ರದೀಪ್ ಧ್ವನಿಗೂಡಿಸಿ, ರಸ್ತೆ ಮಾಡಿಕೊಡಿ ಇಲ್ಲವೇ ನಮಗೆ ವಿಷಕೊಡಿ ಎಂದು ಹೇಳಿದರು.ಪ್ರತಿಕ್ರಿಯಿಸಿದ ತಹಶೀಲ್ದಾರ್, ಇದಕ್ಕೆ ಸರಕಾರಿ ಜಾಗದಲ್ಲಿ ಬದಲಿ ರಸ್ತೆ ನಿರ್ಮಿಸಲು ನಕ್ಷೆ ತಯಾರಿಸಲಾಗಿದೆ.ಇದೇ ವಿಚಾರ ಸಿವಿಲ್ ಕೋರ್ಟ್‌ನಲ್ಲಿದೆ.ಅಲ್ಲಿ ತೀರ್ಮಾನವಾದ ಬಳಿಕ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.ರಸ್ತೆಯಿಲ್ಲದೆ ಸಂಕಷ್ಟ ಪಡುತ್ತಿರುವ ನಮ್ಮ ಸಮಸ್ಯೆಯನ್ನು ಯಾರಲ್ಲಿ ಹೇಳಬೇಕು.ಕೋರ್ಟ್ ಆದೇಶವನ್ನು ಪಾಲಿಸುತ್ತಿಲ್ಲ.ರಸ್ತೆಯನ್ನೂ ನಿರ್ಮಿಸುತ್ತಿಲ್ಲ ಎಂದು ಪ್ರದೀಪ್ ಎಂಬವರು ಹೇಳಿದರು.ಈ ಹಿಂದೆ ಏನಾಗಿದೆ ಎಂಬ ಮಾಹಿತಿ ನನಗಿಲ್ಲ.ನಾನು ಬಂದ ಬಳಿಕ ನಿಮ್ಮ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಪ್ರಯತ್ನಿಸುತ್ತಿzನೆ.ನನ್ನ ಅವಧಿಯಲ್ಲಿ ಅತೀ ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸಿಕೊಡಲು ಪ್ರಯತ್ನಿಸುವುದಾಗಿ ಹೇಳಿದ ತಹಸಿಲ್ದಾರ್ ನಿಸರ್ಗಪ್ರಿಯ,ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.ಆದರೆ, ಶಾಸಕರು ಇದಕ್ಕೆ ಒತ್ತಡ ತಂದರೆ ಏನು ಮಾಡುವುದು ಎಂದು ಪದ್ಮನಾಭ ಆಚಾರ್ಯರವರು ಪ್ರಶ್ನಿಸಿದರು.ಶಾಸಕರು ಹಾಗೂ ನಾವು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಅತೀ ಶೀಘ್ರದಲ್ಲಿ ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಪರಿಹರಿಸಿಕೊಡಲಾಗುವುದು.ಕುಮ್ಕಿಯನ್ನು ಕೃಷಿಗೆ ಬಳಸಲು ಅನುಕೂಲವಾಗಲು ರೈತರಿಗೆ ನೀಡಲಾಗಿದೆ.ಆದರೆ ಅದರ ಸಂಪೂರ್ಣ ಹಕ್ಕನ್ನು ಅವರಿಗೆ ನೀಡಿಲ್ಲ.ಸಾರ್ವಜನಿಕ ಉದ್ದೆಶಕ್ಕೆ ಅನಿವಾರ್ಯವಾದಾಗ ಅದನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದೆ ಎಂದು ತಹಶೀಲ್ದಾರ್ ತಿಳಿಸಿದರು.

ಕಣ್ಣೀರಿಟ್ಟ ತಾಯಿ, ಮಕ್ಕಳು:

ಡೆಕ್ಕಾಜೆ-ಪರನೀರು ರಸ್ತೆ ನಿರ್ಮಾಣದ ವಿಚಾರದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಗ್ರಾಮಸ್ಥೆ ಮೋಹಿನಿ ಹಾಗೂ ಅವರ ಮಕ್ಕಳಾದ ಸಂದೀಪ್ ಹಾಗೂ ನಿಶಾಂತ್‌ರವರು ಸಭೆಯ ಮುಂದೆ ಬಂದು, `ನಮಗಿರುವುದು ಅಲ್ಪ ಸ್ವಲ್ಪ ಜಾಗ.ಈಗ ನಮ್ಮ ಮನೆಯ ಅಂಗಲದಲ್ಲಿ ಅವರಿಗೆ ರಸ್ತೆ ನಿರ್ಮಿಸಲು ಮುಂದಾದರೆ ನಾವೇನು ಮಾಡಬೇಕು’ ಎಂದು ಮೋಹಿನಿಯವರು ಸಭೆಯಲ್ಲಿಯೇ ಅತ್ತರು.ನಿಮ್ಮ ಜಾಗವನ್ನು ರಸ್ತೆಗಾಗಿ ಗುರುತಿಸಿಲ್ಲ.ಸರಕಾರಿ ಜಾಗವನ್ನು ಗುರುತಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.ಅವರಿಗೆ ರಸ್ತೆಗೆ ಜಾಗ ಗುರುತಿಸಿಕೊಡಿ.ರಸ್ತೆ ಅವರೇ ನಿರ್ಮಿಸಿಕೊಳ್ಳುತ್ತಾರೆ ಎಂದು ಗ್ರಾ.ಪಂ.ಸದಸ್ಯ ಜಯಪ್ರಕಾಶ್ ಬದಿನಾರು ತಿಳಿಸಿದರು.ಇದೇ ವಿಚಾರದಲ್ಲಿ ಮೋಹಿನಿ ಮತ್ತು ಮನೆಯವರು ಕೋರ್ಟ್‌ಗೆ ಹೋದರೆ ನಮಗೇನು ಇದೇ ಕೆಲಸನಾ?. ರಸ್ತೆಗಾಗಿ ನಾವು ಇನ್ನೆಷ್ಟು ವರ್ಷ ಅಲೆದಾಡಬೇಕು ಎಂದು ಪದ್ಮಪ್ಪ ಪೂಜಾರಿ, ಪ್ರದೀಪ್ ತಿಳಿಸಿದರು.ನಾವು ಕಷ್ಟದಲ್ಲಿದ್ದೆವೆ.ತಂದೆಯನ್ನು ಒಂದು ವರ್ಷದ ಹಿಂದೆ ಕಳೆದುಕೊಂಡಿದ್ದೆವೆ. ಇದರಿಂದ ನಾನು ಖಿನ್ನತೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದೆ.ಬ್ಯಾಂಕ್ ಸಾಲವಿದೆ.ಹೀಗಾದರೆ ನಾವೇನು ಮಾಡಬೇಕು?.ನಾವು ಸಾಯಬೇಕಷ್ಟೇ ಎಂದು ಮೋಹಿನಿಯವರು ಅಧಿಕಾರಿಗಳಲ್ಲಿ ತಿಳಿಸಿದರು.

ಚುನಾವಣೆ ಬಹಿಷ್ಕಾರ:

 ರಸ್ತೆಗಾಗಿ ಅಲೆದಾಡಿ ೧೫ ವರ್ಷವನ್ನು ವ್ಯಯಿಸಿದ್ದೆನೆ.ಅನಾರೋಗ್ಯದ ಸಂದರ್ಭದಲ್ಲಿ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಿಸಿದ್ದೆವೆ.ಈ ಸಮಸ್ಯೆಯನ್ನು ಯಾರಲ್ಲಿ ಕೇಳಬೇಕು.ಶಾಸಕರು, ಪಂಚಾಯತ್‌ನಲ್ಲಿ ತಿಳಿಸಿದರೆ ಸ್ಪಂದನೆಯಿಲ್ಲ.ಅಧಿಕಾರಿಗಳಿಗೆ ಹೇಳಿದರೂ ಒತ್ತಡದಿಂದ ಅವರಿಗೂ ಸಾಧ್ಯವಾಗುತ್ತಿಲ್ಲ.ಮೂಲಭೂತ ಹಕ್ಕುಗಳನ್ನು ಕೇಳಿ ನಾವು ಚುನಾವಣಾ ಬಹಿಷ್ಕಾರ ಮಾಡಿದ್ದೆವೆ ಎಂದು ಪ್ರದೀಪ್ ತಿಳಿಸಿದರು.ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗಿರುವುದು ನಮ್ಮ ಜವಾಬ್ದಾರಿ.ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರಕಾರಿ ಜಾಗದಲ್ಲಿ ರಸ್ತೆ ನಿರ್ಮಿಸಿಕೊಡುತ್ತೇವೆ.ಅದನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು.ಇದೇ ವಿಚಾರದಲ್ಲಿ ಮತ್ತೆ ಕೋರ್ಟ್‌ಗೆ ಹೋದರೆ ಇನ್ನೂ ೨೦ ವರ್ಷ ಇವರು ರಸ್ತೆಯಿಲ್ಲದೆ ಸಂಕಷ್ಟ ಎದುರಿಸಬೇಕಾ ಎಂದು ಜಯಪ್ರಕಾಶ್ ಬದಿನಾರು ಪ್ರಶ್ನಿಸಿದರು.ಗ್ರಾಮ ವಾಸ್ತವ್ಯಕ್ಕೆ ಬಂದಿದ್ದೀರಾ.ನೀವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.ರಸ್ತೆಗೆ ಇತರ ಕಡೆಗಳಲ್ಲಿ ಜಾಗಗಳನ್ನು ಅವರು ತೋರಿಸಿಕೊಡಲಿ ಎಂದು ಪ್ರದೀಪ್ ತಿಳಿಸಿದಾಗ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಹಸಿಲ್ದಾರ್ ತಿಳಿಸಿ ಚರ್ಚೆಗೆ ತೆರೆ ಎಳೆದರು.

೧೦೦ ವರ್ಷಗಳಿಂದ ಹಕ್ಕಪತ್ರವಿಲ್ಲ:

ಸುಮಾರು ೧೨ ಮನೆಗಳಿರುವ ಪಾದೆಕಲ್ಲು ಎಂಬಲ್ಲಿ ಕಳೆದ ಸುಮಾರು ೧೦೦ ವರ್ಷಗಳಿಂದ ವಾಸ್ತವ್ಯವಿರುವ ಪ.ಜಾತಿ ಜನಾಂಗದವರಿಗೆ ಹಕ್ಕುಪತ್ರವಿಲ್ಲದೆ ಸರಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ.ಇದಕ್ಕೆ ಅರಣ್ಯ ಇಲಾಖೆಯವರು ಆಕ್ಷೇಪ ಮಾಡುತ್ತಿದ್ದಾರೆ.ಆದರೆ ಅಲ್ಲಿಯೇ ಸಮೀಪದಲ್ಲಿ ಒಂದು ಜಾಗವನ್ನು ಮಾರಾಟ ಮಾಡಿದ್ದಾರೆ ಎಂದು ಕೋಡಿಂಬಾಡಿ ಗ್ರಾ.ಪಂ ಮಾಜಿ ಸದಸ್ಯ ಮೋನಪ್ಪ ಗೌಡ ಪಮ್ಮನಮಜಲು ಆರೋಪಿಸಿದರು.ಪ.ಜಾತಿ ನಿವಾಸಿಗಳಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ನಿವಾಸಿಗಳಿಗೆ ಕಾನೂನಿನಂತೆ ಹಕ್ಕುಪತ್ರ ನೀಡುವುದಾಗಿ ತಹಶೀಲ್ದಾರ್ ತಿಳಿಸಿದರು.ಎಲ್ಲಾ ಸಂದರ್ಭಗಳಲ್ಲಿಯೂ ಕಾನೂನು ಪಾಲನೆ ಮಾಡಿದರೆ ಸಾಧ್ಯವಿಲ್ಲ.ಸ್ವಲ್ಪ ಮಾನವೀಯತೆಯನ್ನೂ ತೋರಬೇಕು ಎಂದು ತಾ.ಪಂ ಮಾಜಿ ಅಧ್ಯಕ್ಷ ಜಯಾನಂದ ತಿಳಿಸಿದರು.ಜಂಟೀ ಸರ್ವೆ ನಡೆಸಿ ಸಮಸ್ಯೆ ಪರಿಹರಿಸಲು ಪ್ರಯತಿಸುವುದಾಗಿ ತಹಶೀಲ್ದಾರ್ ತಿಳಿಸಿದರು.ಇದೊಂದು ಗಂಭೀರ ಸಮಸ್ಯೆಯಾಗಿರುವುದರಿಂದ ಕೂಡಲೇ ಕ್ರಮಕೈಗೊಳ್ಳುವಂತೆ ಜಯಾನಂದರವರು ಆಗ್ರಹಿಸಿದರು.

ಬೆಳ್ಳಿಪ್ಪಾಡಿಗೆ ದಿನದ ಮೂರು ಹೊತ್ತು ಬಸ್ ಒದಗಿಸಿ:

ಬೆಳ್ಳಿಪ್ಪಾಡಿ ರಸ್ತೆಯು ಕಾಂಕ್ರಿಟೀಕರಣಗೊಂಡಿದೆ.ಹೀಗಾಗಿ, ಈ ಹಿಂದೆ ಬೆಳ್ಳಿಪ್ಪಾಡಿ ತನಕ ಬರುತ್ತಿದ್ದ ಬಸ್‌ನ್ನು ವಿಸ್ತರಿಸಬೇಕು.ದಾರಂದಕುಕ್ಕು ಮೂಲಕ ಕೂಟೇಲು, ಕೊಡಿಮರ ಮೂಲಕ ಬೆಳ್ಳಿಪ್ಪಾಡಿ ಕೋಡಿಂಬಾಡಿ ಅಥವಾ ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಕೊಡಿಮರ, ಕೂಟೇಲು ಮೂಲಕ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಮೂರು ಹೊತ್ತು ಬಸ್ ಸೌಲಭ್ಯವನ್ನು ನೀಡಬೇಕು ಎಂದು ಮೋಹನ ಪಕ್ಕಳ ಕುಂಡಾಪು ಒತ್ತಾಯಿಸಿದರು.ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.ಕೋಡಿಂಬಾಡಿ ಗ್ರಾ.ಪಂ ಕಚೇರಿ ಮುಂಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ ನೀಡಬೇಕು ಎಂದು ಗ್ರಾ.ಪಂ ಸದಸ್ಯ ರಾಮಣ್ಣ ಗೌಡ ಒತ್ತಾಯಿಸಿದರು.ಶಾಲಾ ಅವಧಿಗೆ ಪೂರಕವಾಗಿ ಬಸ್ ಸೌಲಭ್ಯ ನೀಡುವಂತೆ ಬೆಳ್ಳಿಪ್ಪಾಡಿ ಶಾಲಾ ಮುಖ್ಯ ಶಿಕ್ಷಕಿ ಯಶೋಧ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆಯೆಂಬ ಉತ್ತರ ಮಾತ್ರ-ಕಾಮಗಾರಿ ನಡೆಯುತ್ತಿಲ್ಲ:

ಕೊಡಿಮರದಲ್ಲಿ ಕೊರಗ ಸಮುದಾಯದ ಕಾಲೊನಿಯ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಟ್ಯಾಂಕ್ ಒಡೆದು ಹೋಗಿದ್ದು ದುರಸ್ತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿ ಸುಮಾರು ಒಂದೂವರೆ ವರ್ಷವಾದರೂ ಇನ್ನೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಕೋಡಿಂಬಾಡಿ ಗ್ರಾ.ಪಂ.ಸದಸ್ಯ ರಾಮಣ್ಣ ಗೌಡ ಹೇಳಿದರು.ದುರಸ್ತಿ ಕಾಮಗಾರಿಗೆ ೧.೫೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು ಜಿಲ್ಲಾಧಿಕಾರಿಗಳಿಗೆ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದರು.ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಕಳೆದ ಒಂದೂವರೆ ವರ್ಷಗಳಿಂದ ಉತ್ತರ ಬರುತ್ತಿದೆಯೇ ಹೊರತು ಕಾಮಗಾರಿ ನಡೆಯುತ್ತಿಲ್ಲ ಎಂದು ಸದಸ್ಯ ರಾಮಣ್ಣ ಗೌಡ ತಿಳಿಸಿದರು.ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಿಕೊಡುವಂತೆ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ ತಹಶೀಲ್ದಾರ್, ನಾನು ವೈಯಕ್ತಿಕ ಮುತುವರ್ಜಿ ವಹಿಸಿ ಸಮಸ್ಯೆ ಪರಿಹರಿಸಿಕೊಡುವುದಾಗಿ ತಿಳಿಸಿದರು.

ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರು ಮಾತನಾಡಿ, ಶೇ.೯೮ರಷ್ಟು ಜಾಗವನ್ನು ಸರ್ವೆ ನಡೆಸಲಾಗಿದೆ ಎಂದು ಸರ್ವೆ ಇಲಾಖೆಯವರು ಮಾಹಿತಿ ನೀಡಿದ್ದಾರೆ.ಆದರೆ ಅಲ್ಲಿ ಶೇ.೨ರಷ್ಟು ಮಾತ್ರ ಸರ್ವೆ ನಡೆಸಲಾಗಿದೆ.ಸರ್ವೆ ನಂ.೯೨ ಹಾಗೂ ೧೦೦ರಲ್ಲಿ ೪೦೦ ಎಕರೆ ಜಾಗವಿದೆ.ಇದರಲ್ಲಿ ಅನೇಕ ಮನೆಗಳಿದ್ದು ಕನ್ವರ್ಷನ್ ಆಗದೆ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ.ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ತೊಂದರೆ ಉಂಟಾಗುತ್ತಿದೆ.ಈ ಎರಡು ಸರ್ವೆ ನಂಬರ್‌ಗಳಲ್ಲಿರುವ ಜಾಗವನ್ನು ಮರು ಸರ್ವೆ ನಡೆಸುವಂತೆ ಆಗ್ರಹಿಸಿದರು.ಪ್ರತಿಕ್ರಿಯಿಸಿದ ತಹಶೀಲ್ದಾರ್‌ರವರು ಮುಂದೆ ಜಿಲ್ಲಾ ಮಟ್ಟದಲ್ಲಿ ಸ್ಯಾಟಲೈಟ್ ಸರ್ವೆಯಾಗಲಿದೆ.ಆಗ ಎಲ್ಲಾ ಸರ್ವೆ ನಡೆಸಲಾಗುವುದು ಎಂದು ತಿಳಿಸಿದರು.

ಆಗ ಕೆಲಸ ಮಾಡಿದ್ದ ಅಧಿಕಾರಿ ಹೆಂಡ ಕುಡಿದಿದ್ರಾ?:

ರೈತ ಸಂಘ ಕೋಡಿಂಬಾಡಿ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು ಮಾತನಾಡಿ, ಸರ್ವೆ ನಂಬರ್ ೬೧ರ ೧ಎ೧ಎರಲ್ಲಿ ಅಕ್ರಮ ಸಕ್ರಮದಲ್ಲಿ ಎಲ್ಲಾ ಹಂತಗಳಲ್ಲಿ ಸಾಗಿ ಎಂಟು ವರ್ಷದ ಹಿಂದೆ ಜಾಗ ಮಂಜೂರಾಗಿರುತ್ತದೆ.ಆರ್‌ಟಿಸಿಗಾಗಿ ಕಾದು ಕುಳಿತಿದ್ದ ಅವರಿಗೆ, ಜಾಗವು ಕುಮ್ಕಿಯಲ್ಲಿದೆ ಎಂಬ ಉತ್ತರ ಬಂದಿದೆ.ಹಾಗಾದರೆ ಆಗ ಕೆಲಸ ಮಾಡಿದ್ದ ಅಧಿಕಾರಿ ಹೆಂಡ ಕುಡಿದಿದ್ರಾ? ಎಂದು ಪ್ರಶ್ನಿಸಿದರು.ಅದು ಕುಮ್ಕಿ ಜಾಗ.ಆಗ ಸಮಿತಿಯಲ್ಲಿ ಮಂಡಿಸಿ ಮಂಜೂರಾತಿಗೆ ಅವಕಾಶವಿತ್ತು.ಇದಕ್ಕೆ ಪೂರಕವಾದ ಕಡತಗಳು ಕಚೇರಿಯಲ್ಲಿದೆ.ಪರಿಶೀಲನೆ ನಡೆಸಬಹುದು ಎಂದರು.

ಗ್ರಾಮ ವಾಸ್ತವ್ಯವಲ್ಲ, ಗ್ರಾಮ ಭೇಟಿ:

ಇಂದಿನ ಗ್ರಾಮ ವಾಸ್ತವ್ಯ ಎಷ್ಟು ಹೊತ್ತಿನ ತನಕ ನಡೆಯಲಿದೆ.ಕೆಲಸಕ್ಕೆ ತೆರಳಿರುವ ಕಾರ್ಮಿಕರು ಸಂಜೆ ೮ ಗಂಟೆಗೆ ಬರುವುದಾಗಿ ತಿಳಿಸಿದ್ದಾರೆ.ಅಷ್ಟು ಹೊತ್ತಿನ ತನಕ ಇರುತ್ತೀರಾ ಎಂದು ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು ಪ್ರಶ್ನಿಸಿದರು.ಸಭೆಯ ಬಳಿಕ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು.ಅಹವಾಲು ಕೇಳಿಕೊಂಡು ಗ್ರಾಮಸ್ಥರು ಎಷ್ಟು ಹೊತ್ತಿನ ತನಕ ಬರುತ್ತಾರೋ ಅಷ್ಟರವರೆಗೆ ಇದ್ದು ಅಹವಾಲು ಸ್ವೀಕರಿಸುವುದಾಗಿ ತಹಶೀಲ್ದಾರ್ ತಿಳಿಸಿದರು.

ಬೆಳ್ಳಿಪ್ಪಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿರುವುದಾಗಿ ಸರಕಾರಕ್ಕೆ ತಪ್ಪು ಮಾಹಿತಿ ನೀಡುತ್ತೀರಿ.ಆದರೆ ಇದು ನಿಮ್ಮ ಗ್ರಾಮ ವಾಸ್ತವ್ಯವಲ್ಲ,ಗ್ರಾಮ ಭೇಟಿ.ನಿಮಗೆ ಗ್ರಾಮ ವಾಸ್ತವ್ಯದ ಕನ್ನಡ ಅರ್ಥಗೊತ್ತಿಲ್ಲ.ವಾಸ್ತವ್ಯ ಎಂದರೆ ಬೆಳಗ್ಗಿನಿಂದ ರಾತ್ರಿ ತನಕ ಇರಬೇಕು.ಇಲ್ಲದಿದ್ದರೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ ಎಂದು ಸೀತಾರಾಮ ಶೆಟ್ಟಿ ಹೇಳಿದರು.ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯ ತನಕ ಇರುವಂತೆ ಸರಕಾರದ ಸುತ್ತೋಲೆಯಿದೆ ಎಂದು, ಗ್ರಾಮ ವಾಸ್ತವ್ಯ ಬಗ್ಗೆ ಸರಕಾರದ ಸುತ್ತೋಲೆಯ ಬಗ್ಗೆ ಉಪ್ಪಿನಂಗಡಿ ಗ್ರಾಮಕರಣಿಕ ರಮೇಶ್ ವಿವರಿಸಿದರು.

ಹಕ್ಕುಪತ್ರ ವಿತರಣೆ:

ಕಾರ್ಯಕ್ರಮದಲ್ಲಿ ವಿವಿಧ ಪಿಂಚಣಿ ಯೋಜನೆಯ ಹಕ್ಕುಪತ್ರಗಳನ್ನು ತಹಶೀಲ್ದಾರ್ ನಿಸರ್ಗಪ್ರಿಯ ಫಲಾನುಭವಿಗಳಿಗೆ ವಿತರಿಸಿದರು.ಭೂಮಾಪನ ಇಲಾಖೆಯ ಮೇಲ್ವಿಚಾರಕ ಮಹೇಶ್, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ, ಉಪಾಧ್ಯಕ್ಷೆ ಉಷಾಲಕ್ಷ್ಮಣ ಪೂಜಾರಿ,ಪಿಡಿಓ ರೋಹಿತಾಶ್ವ, ತಾ.ಪಂ ಆಡಳಿತಾಧಿಕಾರಿ ಸುಕನ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳ್ಳಿಪ್ಪಾಡಿ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.ಗ್ರೇಡ್-೨ ತಹಶೀಲ್ದಾರ್ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ರಂಜನ್ ಸ್ವಾಗತಿಸಿದರು.ಗ್ರಾಮಕರಣಿಕೆ ಶರಣ್ಯ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ಡೆಕ್ಕಾಜೆ-ಪರನೀರು ರಸ್ತೆ ಸಮಸ್ಯೆ, ಕೊಡಿಮರ ಕೊರಗ ಸಮುದಾಯದ ಕಾಲೋನಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದರು.

ಯಶಸ್ವಿನಿ ಯೋಜನೆಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಬೇಕು.ಬನ್ನೂರು ರೈತರ ಸೇವಾ ಸಹಕಾರಿ ಸಂಘದಲ್ಲಿ ಸಾಲ ಮನ್ನಾದ ಪ್ರಯೋಜನ ಪಡೆದುಕೊಳ್ಳಲು ೪೦ ಮಂದಿ ಅರ್ಹ ರೈತರಿದ್ದು ಅವರಿಗೆ ಕೂಡಲೇ ಪಾವತಿಸಬೇಕು.ಕೋಡಿಂಬಾಡಿ ಶಾಲೆಯ ಸ್ವಾಧೀನದಲ್ಲಿರುವ ಜಾಗವನ್ನು ಅಳತೆ ಮಾಡಿಕೊಡಬೇಕು.ಮನೆಯ ತುರ್ತು ಕಾರ್ಯಗಳಿಗೆ ನಾಲ್ಕು ಚಕ್ರದ ವಾಹನ ಹೊಂದಿರುವವರಿಗೂ ಬಿಪಿಎಲ್ ಕಾರ್ಡ್ ನೀಡಿ ಸವಲತ್ತುಗಳನ್ನು ನೀಡಬೇಕು.ಅಕ್ರಮ ಸಕ್ರಮಕ್ಕೆ ಸಲ್ಲಿಸಿದ ಅರ್ಜಿಗಳು ಬಾಕಿಯುಳಿದಿದೆ.ನಗರ ಪ್ರದೇಶದಿಂದ ೫ ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಅವಕಾಶವಿಲ್ಲ ಎಂಬ ಮಾಹಿತಿ ಅಧಿಕಾರಿಗಳಿಂದ ದೊರೆತಿದೆ.ಪುತ್ತೂರಿನಿಂದ ಇಲ್ಲಿಗೆ ೮ ಕಿ.ಮೀ ಇದೆ.ಸ್ಯಾಟಲೈಟ್ ಮೂಲಕ ೫ ಕಿ.ಮೀ ಇರಬಹುದು. ಹೀಗಾಗಿ ರೈತರ ಭಾವನೆಗಳನ್ನು ಅರ್ಥಮಾಡಿಕೊಂಡು ಕಡತ ವಿಲೇವಾರಿಗೆ ಅವಕಾಶ ಕಲ್ಪಿಸಿಕೊಡಬೇಕು.೯೪ಸಿಯಲ್ಲಿ ಸಲ್ಲಿಸಿದ ಅರ್ಜಿ ಇಲಾಖೆಯಲ್ಲಿ ಬಾಕಿಯುಳಿದಿದ್ದು ವಿಲೇವಾರಿಯಾಗಬೇಕು.ಡೋರ್ ನಂಬರ್ ವಿನಾಯಿತಿ ನೀಡಿ ಮಂಜೂರು ಮಾಡಿಕೊಡುವ ಮೂಲಕ ಗ್ರಾಮವಾಸ್ತವ್ಯಕ್ಕೆ ಅರ್ಥಕೊಡಬೇಕು ಎಂದು ಗ್ರಾಮಸ್ಥರು ವಿವಿಧ ಬೇಡಿಕೆಗಳನ್ನು ಪ್ರಸ್ತಾಪಿಸಿದರು.

 

LEAVE A REPLY

Please enter your comment!
Please enter your name here