ಪುತ್ತೂರು: ದ.ಕ.ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ಯಾವುದೇ ಪ್ರಸ್ತಾವನೆಯು ಪರಿಶೀಲನೆಯಲ್ಲಿ ಇರುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಡಿ.22ರಂದು ಶಾಸಕ ಸಂಜೀವ ಮಠಂದೂರು ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಈ ಕುರಿತು ಸದನದಲ್ಲೇ ಪ್ರಶ್ನೆ ಮಾಡುತ್ತೇನೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಪುತ್ತೂರು ತಾಲೂಕಿನಲ್ಲಿ ಎಸ್ಪಿ ಕಚೇರಿಗೆ ಈಗಾಗಲೇ ಜಾಗ ನಿಗದಿಪಡಿಸಿದ್ದು, ಎಸ್ಪಿ ಕಚೇರಿ ಸ್ಥಳಾಂತರ ಪ್ರಕ್ರಿಯೆಯು ಸರಕಾರದ ಯಾವ ಹಂತದಲ್ಲಿದೆ ಎಂದು ಸಂಜೀವ ಮಠಂದೂರು ಅವರು ಚುಕ್ಕೆ ಗುರುತ್ತಿಲ್ಲದ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರವಾಗಿ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ಯಾವುದೇ ಪ್ರಸ್ತಾವನೆಯು ಪರಿಶೀಲನೆಯಲ್ಲಿರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ತಾಲೂಕುಗಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಪುತ್ತೂರಿನಲ್ಲಿ ಈಗಾಗಲೇ ಪೊಲೀಸ್ ಉಪಾಧೀಕ್ಷಕರ ಕಚೇರಿಯು ಕಾರ್ಯನಿರ್ವಹಿಸುತ್ತಿದೆ. ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟಂತೆ ಬಂಟ್ವಾಳದಲ್ಲಿ ಪೊಲೀಸ್ ಉಪಾಧೀಕ್ಷಕರ ಕಚೇರಿಯು ಕಾರ್ಯನಿರ್ವಹಿಸುತ್ತಿದೆ ಎಂದು ಲಿಖಿತ ರೂಪದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಉತ್ತರ ನೀಡಿದ್ದರು.
ಸದನದಲ್ಲೇ ಪ್ರಶ್ನಿಸುತ್ತೇನೆ – ಮಠಂದೂರು
ಪುತ್ತೂರನ್ನು ಗ್ರಾಮಾಂತರ ಜಿಲ್ಲೆಯಾಗಿ ಘೋಷಿಸಬೇಕು ಎಂಬ ಬೇಡಿಕೆಗೆ ಪೂರಕ ಎಂಬಂತೆ ಎಸ್ಪಿ ಕಚೇರಿ ಸ್ಥಳಾಂತರ ಮಹತ್ವ ಪಡೆದಿದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಹಾಗೂ ಕಡಬ ತಾಲೂಕುಗಳು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಗೆ ಬರುತ್ತವೆ. ಈ 5 ತಾಲೂಕುಗಳಿಂದ ಹೊರ ಭಾಗದಲ್ಲಿ ಇರುವ ಎಸ್ಪಿ ಕಚೇರಿಯನ್ನು ಈ ತಾಲೂಕುಗಳಿಗೆ ಕೇಂದ್ರ ಸ್ಥಾನದಲ್ಲಿರುವ ಪುತ್ತೂರಿಗೆ ಸ್ಥಳಾಂತರಿಸಬೇಕು ಎನ್ನುವ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಚುಕ್ಕಿ ಪ್ರಶ್ನೆ ಕೇಳಿದ್ದೆ. ಅದಕ್ಕೆ ಸರಿಯಾದ ಉತ್ತರ ಸಿಕ್ಕಿಲ್ಲ. ಇದೀಗ ನಾನು ಸದನದಲ್ಲೇ ಪ್ರಶ್ನೆ ಮಾಡುತ್ತೇನೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.